ಮಂಡ್ಯ ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸ ನನಗೆ ಅತ್ಯಂತ ಸಂತೋಷ ತಂದಿದೆ. ಇಲ್ಲಿಯ ವಾತಾವರಣ ತುಂಬಾ ಚೆನ್ನಾಗಿದ್ದು, ಜನರು ಹೃದಯ ಸ್ವರ್ಶಿಯಾಗಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಭಾರೀ ಕೈಗಾರಿಕೆ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹರ್ಷ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಪ್ರವಾಸ ಮಾಡಿದ ಸಂದರ್ಭದಲ್ಲಿ ಜನರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಉತ್ತಮ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಯೋಜನೆಗಳು ಜನರನ್ನು ಮುಟ್ಟುತ್ತಿವೆ ಎಂಬ ಭಾವನೆ ಮೂಡಿಸಿದೆ. ಜನರು ಕೂಡ ಕೇಂದ್ರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ತಿಳಿಸಿದರು.
ಪ್ರಧಾನ ಮಂತ್ರಿ ಮೋದಿ ಜೀ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೇಶದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಗಡಿಗಳು ಭದ್ರವಾಗಿದೆ. ಅವರ ಸರ್ಕಾರದಲ್ಲಿ ದಕ್ಷತೆ ಇರುವವರಿಗೆ ಮಾತ್ರ ಸ್ಥಾನ ನೀಡಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದರು.
ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿ.ಎಂ.ಕಿಸಾನ್ ಯೋಜನೆ, ಸಾರ್ವಜನಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್, ಕುಡಿಯುವ ನೀರು ಒದಗಿಸಲು ಜಲ್ ಜೀವನ್ ಮಿಷನ್ ಸೇರಿದಂತೆ ಅನೇಕ ಜನಪರ ಯೋಜನೆಗಳ ಬಗ್ಗೆ ವಿವರಿಸಿದರು.
ಮೇಲುಕೋಟೆಯ ರತ್ನಂ ಮತ್ತು ತಂಡದವರು ಸ್ಯಾಕ್ಸೋಫೋನ್ ಕಾರ್ಯಕ್ರಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಯ ನಿಸರ್ಗ ಮತ್ತು ತಂಡ ಭಾರತನಾಟ್ಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು ಆದಿವಾಸಿ ಜನರ ನೃತ್ಯ ಪ್ರದರ್ಶನ ನೀಡಿದರು.
ಉಪವಿಭಾಗಾಧಿಕಾರಿ ಐಶ್ವರ್ಯ ಅವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಾರ್ಚ್ 2021 ರಲ್ಲಿ ಶಿವಪುರದ ಸತ್ಯಗ್ರಹ ಸೌಧದಲ್ಲಿ ಕಾರ್ಯಕ್ರಮವನ್ನು ಮೊದಲು ಪ್ರಾರಂಭಿಸಿ, ಕಾರ್ಯಕ್ರಮದ ಅಂಗವಾಗಿ ಮ್ಯಾರಥಾನ್, ಸೈಕಲಾಥಾನ್, ಯೋಗ ಕಾರ್ಯಕ್ರಮ, ಚಿತ್ರ ಕಲಾ ಕಾರ್ಯಕ್ರಮ, ಖಾದಿ ವಸ್ತುಗಳ ಪ್ರದರ್ಶನ, ಅಂಚೆ ಚೀಟಿ ಹೊರತಂದಿರುವುದು, ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸರಸ್ವತಿ, ಸಮಾಜ ಕಲ್ಯಾಣಾಧಿಕಾರಿ ರಂಗೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.