Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಾಮಾಜಿಕ ಜವಾಬ್ದಾರಿ ಹೊತ್ತು ವಿಶ್ವಮಾನವರಾಗೋಣ: ಪ್ರೊ.ಜಯಪ್ರಕಾಶಗೌಡ

ಹುಟ್ಟಿದಾಗ ಮಗು ವಿಶ್ವಮಾನವನಾಗಿ ಹುಟ್ಟುತ್ತದೆ, ಆದರೆ ಬೆಳೆಯುತ್ತಾ ಹೋದಂತೆ ಅದು ಕುಬ್ಜವಾಗುತ್ತದೆ. ಆದ್ದರಿಂದ ನಿರಂಕುಶ ವಾದಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.

ಮಂಡ್ಯನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಸಮಾಜ ಅಂಕುಶವೇ ಇಲ್ಲದಂತೆ ವರ್ತಿಸುತ್ತಿದೆ. ಜಾತಿ ಮತ ಧರ್ಮ ಮೇಲು-ಕೀಳು ಎಂಬೆಲ್ಲ ಭಾವನೆಗಳು ನಮ್ಮನ್ನು ಹಿಂಡುತ್ತಿವೆ, ಆದ್ದರಿಂದ ನಾವು ಈ ಭಾವನೆಗಳ ಮೇಲೆ ಅಂಕುಶ ಸಾಧಿಸಿದರಷ್ಟೇ ವಿಶ್ವಮಾನವರಾಗಲು ಸಾಧ್ಯ. ಸಾರ್ವಜನಿಕ ಶಿಕ್ಷಣದ ಉದ್ದೇಶವು ಮನುಷ್ಯ ಅಸಮಾನತೆಯ ವಿರುದ್ಧವಾಗಿ ಹೋರಾಡಬೇಕು, ಆದರೆ ಶಿಕ್ಷಣವನ್ನು ಪಡೆದವರೇ ಭ್ರಷ್ಟಾಚಾರಿಗಳನ್ನು, ಅಪರಾಧಿಗಳನ್ನು ಸನ್ಮಾನಿಸುತ್ತಿದ್ದಾರೆ, ಅವರನ್ನು ವಿರೋಧಿಸುವ ಸಾಹಸ ಮಾಡುತ್ತಿಲ್ಲ. ಈ ಮನೋಭಾವದಿಂದ ಸಮಾಜ ಸುಧಾರಣೆ ಆಗಲು ಸಾಧ್ಯವಿಲ್ಲ ಎಂದರು.

ಈಗಿನ ಯುವ ಜನತೆ ಒಂದು ಭ್ರಮಾ ಲೋಕದಲ್ಲಿ ಜೀವಿಸುತ್ತಿದ್ದಾರೆ, ಕೆಲವೊಮ್ಮೆ ವಾಸ್ತವಿಕ ಪ್ರಪಂಚದ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಬಲಿಷ್ಠ ಸಮಾಜವನ್ನು ನಿರ್ಮಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಯುವಜನತೆಯೇ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಕಡೆಗಣಿಸುತ್ತಿದೆ. ಸಂಸ್ಕಾರವನ್ನು ಮರೆತಿದ್ದಾರೆ. ಹಾಗಾಗಿ ಬಹಿರಂಗ ಶುದ್ಧಿಗಿಂತ ಅಂತರಂಗ ಅಭಿವೃದ್ಧಿ ಮುಖ್ಯ ಎಂಬುದನ್ನು ಯುವಜನತೆ ಮನಗಾಣಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಆರ್ ದಶರತ್ ಮಾತನಾಡಿ, ನಮ್ಮ ದೇಶವು ಎಷ್ಟೇ ವೈವಿಧ್ಯಮಯವಾಗಿರಲಿ, ಭಾರತಮಾತೆಯ ಮಡಿಲಲ್ಲಿ ಬೆಳೆದ ಮಕ್ಕಳಾದ ನಾವು ಒಂದೇ ಎಂಬ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು, ನಮ್ಮಲ್ಲಿ ಆತ್ಮಸಾಕ್ಷಿ ಇದ್ದರೆ ಕನ್ನಡಾಂಬೆಯ ಮಕ್ಕಳಾಗಿ ಉಳಿಯುತ್ತೇವೆ ಎಂದು ಕಾರ್ಯಕ್ರಮವನ್ನು ಕುರಿತು ನುಡಿದರು.

ಈ ಸಂದರ್ಭದಲ್ಲಿ ‘ನೆಲದ ಸಿರಿ’ ಕಾಲೇಜಿನ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕನ್ನಡ ಗೀತೆ, ಸುಗಮ ಸಂಗೀತ ಕಾರ್ಯಕ್ರಮವನ್ನು ಗಾಮನಹಳ್ಳಿ ಸ್ವಾಮಿ ಮತ್ತು ನೇತ್ರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಕುಮಾರ್ ಬೆಳಲೆ, ಖಜಾಂಚಿ ಡಾ. ಜೋಶ್ನಾ ಕಾರಂತ್, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆಂಪಮ್ಮ, ಡಾ. ಪ್ರಮೀಳ, ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!