Saturday, May 18, 2024

ಪ್ರಾಯೋಗಿಕ ಆವೃತ್ತಿ

ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಬದಲು ಜೀವಾವಧಿ ಶಿಕ್ಷೆ

90ರ ದಶಕದಲ್ಲಿ ರಾಜ್ಯದಾದ್ಯಂತ ಭೀತಿ ಉಂಟು ಮಾಡಿದ್ದ ಸರಣಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ವಿಕೃತಕಾಮಿ ಉಮೇಶ್ ರೆಡ್ಡಿಗೆ ಹೈಕೋರ್ಟ್‌ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ 18 ಕೊಲೆ ನಡೆಸಿರುವ ಆತ, 20 ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. 9 ಪ್ರಕರಣಗಳಲ್ಲಿ ಆತ ಭಾಗಿಯಾಗಿರುವುದು ಸಾಬೀತಾಗಿ, ರಾಜ್ಯ ಹೈಕೋರ್ಟ್‌ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್‌ ಆದೇಶ ಪ್ರಶ್ನಿಸಿ ಉಮೇಶ್ ರೆಡ್ಡಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ, ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರಿದ್ದ ತ್ರಿಸದಸ್ಯ ಪೀಠ, ಮರಣದಂಡನೆ ರದ್ದುಗೊಳಿಸಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದೆ.

“ಈಗಾಗಲೇ ಆರೋಪಿಯನ್ನು 10 ವರ್ಷಗಳ ಕಾಲ ಏಕಾಂಗಿಯಾಗಿ ಜೈಲಿನಲ್ಲಿ ಇರಿಸಲಾಗಿದೆ. ಪರಿಣಾಮವಾಗಿ ಅಪರಾಧಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಹೀಗಾಗಿ, ಈತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡಿಸಲಾಗಿದೆ” ಎಂದು ಸುಪ್ರೀಂ ತ್ರಿಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

2007ರಲ್ಲೇ ರೆಡ್ಡಿಗೆ ಗಲ್ಲು ಶಿಕ್ಷೆ ನಿಗದಿಯಾಗಿತ್ತು. 2011ರಲ್ಲಿ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಈ ನಡುವೆ, ಕ್ಷಮಾದಾನಕ್ಕಾಗಿ ರೆಡ್ಡಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದ. ರಾಷ್ಟ್ರಪತಿಗಳೂ 2013ರ ಮೇ 12ರಂದು ಆತನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದರು.

ರೆಡ್ಡಿ ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿ ಇತ್ಯರ್ಥ ವಿಳಂಬವಾಗಿದ್ದರಿಂದ 10 ವರ್ಷ ಬೆಳಗಾವಿ ಜೈಲಿನಲ್ಲಿ ಕಳೆಯಬೇಕಾಯಿತು. ಆದ್ದರಿಂದ, ಉಮೇಶ್ ರೆಡ್ಡಿ ಮಾನಸಿಕ ಯಾತನೆ ಅನುಭವಿಸಿದ್ದು, ಮರಣದಂಡನೆಯನ್ನು ಜೀವಾವಧಿಯನ್ನಾಗಿ ಮಾರ್ಪಾಡು ಮಾಡುವಂತೆ ಆರೋಪಿ ಪರ ವಕೀಲ ಬಿ.ಎನ್.ಜಗದೀಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ರೆಡ್ಡಿ ಪರ ವಕೀಲರ ವಾದವನ್ನು ಒಪ್ಪದ ಹೈಕೋರ್ಟ್‌ ನ್ಯಾ.ಅರವಿಂದ ಕುಮಾರ್ ಮತ್ತು ನ್ಯಾ ಪ್ರದೀಪ್ ಸಿಂಗ್ ಯೆರೂರ್ ಅವರನ್ನೊಳಗೊಂಡ ಪೀಠ, ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಜತೆಗೆ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೂಡ ಕೊಟ್ಟಿತ್ತು.

ಸಿ.ಆರ್.ಪಿ.ಎಫ್ ನಲ್ಲಿದ್ದು ಕೆಲಸ ಕಳೆದು ಕೊಂಡಿದ್ದ 

ಜಮ್ಮು-ಕಾಶ್ಮೀರದಲ್ಲಿ ಸಿಆ‌‍ರ್ಪಿಎಫ್ ಯೋಧನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ರೆಡ್ಡಿ ಅಲ್ಲಿಯೂ ಕೂಡ ಲೈಂಗಿಕ ಕಿರುಕುಳ ಆರೋಪದಿಂದ ಕೆಲಸ ಕಳೆದುಕೊಂಡಿದ್ದ, ಬಳಿಕ, ಈತ ಚಿತ್ರದುರ್ಗ ಮೀಸಲು ಪೊಲೀಸ್ ಪಡೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಪೊಲೀಸ್ ಕೆಲಸವನ್ನೂ ಕಳೆದುಕೊಂಡ ನಂತರ ಸರಣಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಬರೋಬ್ಬರಿ 18 ಕೊಲೆ ಕನಿಷ್ಠ 20 ಅತ್ಯಾಚಾರ ಮಾಡಿದ್ದು 9 ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲೂ ಈತ ಕೃತ್ಯ ಎಸಗಿದ್ದಾನೆ.

ಪ್ರಾಣಭಯ ಮತ್ತು ಮರ್ಯಾದೆ ಕಾರಣಕ್ಕೆ ಹಲವರು ದೂರು ನೀಡದೇ ಇದಿದ್ದರಿಂದ ಹಲವು ಪ್ರಕರಣಗಳು ಬೆಳಕಿಗೆ ಬಂದಿರಲಿಲಲ್ಲ ಎಂದು ತಿಳಿದುಬಂದಿದೆ.

ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಕೊಂಡಿದ್ದ 

ಅಪಘಾತ ಪ್ರಕರಣವೊಂದರಲ್ಲಿ ಪೊಲೀಸ್ ಕೆಲಸ ಕಳೆದುಕೊಂಡ ಉಮೇಶ್ ರೆಡ್ಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಗಂಡಸರು ಇಲ್ಲದ ಮನೆ ಗುರುತಿಸುತ್ತಿದ್ದ ಈತ, ಹಗಲಲ್ಲೇ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದ.

ನೀರು ಕೇಳುವ ನೆಪದಲ್ಲಿ ಮನೆ ಪ್ರವೇಶಿಸಿ ಮಹಿಳೆಯರಿಗೆ ಚಾಕು ತೋರಿಸಿ, ಪ್ರತಿರೋಧ ತೋರಿಸುತ್ತಿದ್ದ ಮಹಿಳೆಯರ ಅತ್ಯಾಚಾರ ನಡೆಸಿ, ಹತ್ಯೆಗೈಯುತ್ತಿದ್ದ. ನಂತರ, ಚಿನ್ನಾಭರಣ ಮತ್ತು ಮಹಿಳೆಯರ ಒಳ ಉಡುಪುಗಳೊಂದಿಗೆ ಪರಾರಿಯಾಗುತ್ತಿದ್ದ ಪೊಲೀಸರು ರೆಡ್ಡಿಯನ್ನು ಬಂಧಿಸುವ ಸಮಯದಲ್ಲಿ ಕೂಡ ಆತ ತನ್ನ ಉಡುಪಿನ ಒಳಗಡೆ ಮಹಿಳೆಯರ ಒಳ ಉಡುಪು ಧರಿಸಿದ್ದ ಎನ್ನಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!