Monday, May 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಲು ಇಷ್ಟವಿಲ್ಲದಿದ್ದರೆ ಚಿಹ್ನೆ ಮುಚ್ಚಿಕೊಂಡು ಬಾಬಣ್ಣಂಗೆ ಮತ ಹಾಕಿ

ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಲು ಇಷ್ಟವಿಲ್ಲದ್ದರೆ ಚಿಹ್ನೆ ಮುಚ್ಚಿಕೊಂಡು ನನ್ನ ಹೆಸರಿನ ಮುಂದೆ ವೋಟ್ ಹಾಕಿ. ನಿಮ್ಮ ಬಾಬಣ್ಣಂಗೆ ಅಂತ ವೋಟ್ ಹಾಕಿ ಎಂದು ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿರುವ ರಮೇಶ್ ಬಾಬು ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಾ, ಆ ಪಕ್ಷ ಸೇರಿ ತಪ್ಪು ಮಾಡಿದೆ.ಆ ತಪ್ಪು ಮಾಡಬಾರದಿತ್ತು.ನನ್ನ ತಪ್ಪು ಮನ್ನಿಸಿ ಇದೊಂದು ಬಾರಿ ಅವಕಾಶ ನೀಡಿ ಎಂದು ಹೇಳುತ್ತಾ,ಕಾಂಗ್ರೆಸ್ ಪಕ್ಷದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ಪುಷ್ಟಿ ನೀಡುವಂತೆ ಸ್ವತಃ ರಮೇಶ್ ಬಾಬು ಬಂಡಿಸಿದ್ದೇಗೌಡ ಬಹಿರಂಗವಾಗಿ ಮಾತನಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಇಷ್ಟವಿಲ್ಲದಿದ್ದರೆ ಚಿಹ್ನೆ ಮುಚ್ಚಿಕೊಂಡು ನನ್ನ ಹೆಸರಿಗೆ ವೋಟ್ ಹಾಕಿ ಎಂದಿರುವ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು,ಕಾಂಗ್ರೆಸ್ ವರಿಷ್ಠರು ಹಾಗೂ ಕಾರ್ಯಕರ್ತರಿಗೆ ಇರಿಸುಮುರುಸು ತರಿಸಿದೆ.

ಮಂಡ್ಯ ತಾಲ್ಲೂಕಿನ ಕಾರಸವಾಡಿ ಗ್ರಾಮದಲ್ಲಿ ನಿನ್ನೆ ಸೋಮವಾರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ,
ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ನನ್ನನ್ನು ಈ ಬಾರಿ ಗೆಲ್ಲಿಸಿ ನಿಮ್ಮ ಜೊತೆ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಶ್ರೀ ಕಾಲಭೈರವೇಶ್ವರ,ಬೋರಪ್ಪ,ಕಾವೇರಿ ಮಾತೆ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನನಗೆ ಸಿಕ್ಕಿದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನಿಮ್ಮ ಕುಟುಂಬದ ಸದಸ್ಯನಾಗಿ,ಮನೆ ಮಗನಾಗಿ ನನ್ನ ಕೈಲಾದ ಮಟ್ಟಿಗೆ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ದಯಮಾಡಿ ಈ ಬಾರಿ ನನ್ನ ಕೈ ಬಿಡಬೇಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷ ಹಾಗೂ ನನ್ನ ಪರವಾಗಿ ನಿಲ್ಲಿ,ನಿಮ್ಮ ಪ್ರೀತಿಗೆ,ಗೌರವಕ್ಕೆ ಚ್ಯುತಿ ಬರದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಹಿಡಿಯುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಸಿದ್ಧರಾಗಿದ್ದಾರೆ. ಈ ಬಾರಿ ರಮೇಶ್ ಬಂಡಿ ಸಿದ್ದೇಗೌಡರಿಗೆ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸುವ ಕೆಲಸ ಮಾಡಿ, ಇಬ್ಬರು ಒಟ್ಟಿಗೆ ಸೇರಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರಸವಾಡಿ ಸಿದ್ದರಾಮೇಗೌಡ, ಬೋರೇಗೌಡ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್, ಬೇಲೂರು ಶಶಿಧರ್, ರಮೇಶ್ ಮಿತ್ರ, ಹಳುವಾಡಿ ವೆಂಕಟೇಶ್, ನಾಗರಾಜು, ನಾಗಣ್ಣ, ರಾಮಚಂದ್ರು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!