Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾವೆಲ್ಲರೂ ದುರಾಸೆಯೆಂಬ ರೋಗ ನಿರ್ಮೂಲನೆ ಮಾಡಬೇಕಿದೆ: ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ

ಕ್ಯಾನ್ಸರ್, ಟಿಬಿ, ಕೊರೋನಾ ರೋಗಗಳಿಗೆ ಮದ್ದಿದೆ. ಆದರೆ ಜನರಲ್ಲಿರುವ ದುರಾಸೆ ಎಂಬ ರೋಗಕ್ಕೆ ಮದ್ದಿಲ್ಲ.ನಾವೆಲ್ಲರೂ ಮಾನವೀಯತೆ,ತೃಪ್ತಿ ಎಂಬ ಮೌಲ್ಯ ಅಳವಡಿಸಿಕೊಂಡು ದುರಾಸೆಯೆಂಬ ರೋಗ ನಿರ್ಮೂಲನೆ ಮಾಡಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಕರೆ ನೀಡಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಆವಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ ಮತ್ತು ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ವೀರಯೋಧ ಆರ್. ಲೋಕೇಶ್ ಪಟೇಲ್ ಜ್ಞಾಪಕಾರ್ಥ ನಡೆದ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಹಾಗೂ ಸನ್ಮಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಇಂದು ನಾವೆಲ್ಲರೂ ಶ್ರೀಮಂತಿಕೆ ಮತ್ತು ಅಧಿಕಾರ ಬೋಧಿಸುವ ಸಮಾಜದಲ್ಲಿದ್ದೇವೆ. ನಾನು ಚಿಕ್ಕವನಾಗಿದ್ದಾಗ ಎಲ್ಲಾ ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಜೈಲಿಗೆ ಹೋದವರ ಮನೆಯ ಮುಂದೆ ಹೋಗಬೇಡ ಎಂದು ಹೇಳುತ್ತಿದ್ದರು. ಅಂದು ಜೈಲಿಗೆ ಹೋದವನು ಮಾತ್ರವಲ್ಲ, ಅವರ ಕುಟುಂಬಕ್ಕೂ ಕೂಡ ಸಾಮಾಜಿಕವಾಗಿ ಅವಮಾನವಾಗುತ್ತಿತ್ತು. ಇದರಿಂದ ಜೈಲಿಗೆ ಹೋಗಲು ಹೆದರುತ್ತಿದ್ದರು. ಆದರೆ ಇಂದು ಜೈಲಿಗೆ ಹೋಗಿ ಬಂದವರೇ ಹಣ, ಅಧಿಕಾರ ಅನುಭವಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಇಂದು ಸಮಾಜ ಬದಲಾಗಿದೆ.ಮನುಷ್ಯನಿಗೆ ದೊಡ್ಡ ಹುದ್ದೆಗೆ ಹೋಗಬೇಕೆನ್ನುವ ದುರಾಸೆ ತುಂಬಿದೆ. ಯಾವ ರೀತಿಯಲ್ಲಿ ಬೇಕಾದರೂ ಹೋಗು,ದುಡ್ಡು ಮಾಡು ಎನ್ನುವ ಸಮಾಜದಲ್ಲಿ ನಾವಿದ್ದೇವೆ. ಇದರಿಂದ ಶಾಂತಿ-ಸೌಹಾರ್ದತೆ ಸಮಾಜದಲ್ಲಿ ಇರಲು ಸಾಧ್ಯವಿಲ್ಲ. 50-60 ವರ್ಷಗಳ ಹಿಂದೆ ಇದ್ದ ಹಾಗೆ ಸಮಾಜ ಮರು ಸೃಷ್ಟಿ ಮಾಡಬೇಕಿದೆ. ಪ್ರಾಮಾಣಿಕರನ್ನು ಗುರುತಿಸಿ, ಸನ್ಮಾನಿಸುವ ಸಮಾಜದಿಂದ ಮಾತ್ರ ಬದಲಾವಣೆ,ಶಾಂತಿ- ಸೌಹಾರ್ದತೆ ತರಬಹುದು ಎಂದರು.

ಮನಷ್ಯನಲ್ಲಿ ದುರಾಸೆ ಎಂಬ ರೋಗ ಹುಟ್ಟಿದೆ. ಆ ದುರಾಸೆ ಎಂಬ ರೋಗಕ್ಕೆ ಮದ್ದಿಲ್ಲ. ಹಿರಿಯರು ಹೇಳಿಕೊಟ್ಟ ಜೀವನ ಮೌಲ್ಯ, ತೃಪ್ತಿ ಇದ್ದರೆ ದುರಾಸೆ ಬರುವುದಿಲ್ಲ. ಒಬ್ಬ ವ್ಯಕ್ತಿ ದೊಡ್ಡವನಾಗಬೇಕು, ಶ್ರೀಮಂತನಾಗಬೇಕು ಎಂದು ಬಯಸಿದರೆ ತಪ್ಪಿಲ್ಲ. ಆದರೆ ಯಾವ ಮಾರ್ಗದಲ್ಲಿ ನಾವು ದೊಡ್ಡವರಾಗುತ್ತೇವೆ, ಶ್ರೀಮಂತರಾಗುತ್ತೇವೆ ಎಂಬುದು ಬಹಳ ಮುಖ್ಯ. ಇನ್ನೊಬ್ಬರ ಹೊಟ್ಟೆಗೆ ಕಲ್ಲು ಹಾಕಿ, ಇನ್ನೊಬ್ಬರ ಜೇಬಿಗೆ ಕೈ ಹಾಕಿ ದೊಡ್ಡವರಾಗಬಾರದು. ಪ್ರಾಮಾಣಿಕತೆ,ಕಾನೂನು ಬದ್ಧವಾಗಿ ದೊಡ್ಡ ವ್ಯಕ್ತಿಯಾದರೆ ತಪ್ಪಿಲ್ಲ ಎಂದು ಸಲಹೆ ನೀಡಿದರು.

ನಾವೆಲ್ಲರೂ ಇಂದು ತೃಪ್ತಿ ಎನ್ನುವ ಮೌಲ್ಯವನ್ನು ಅಳವಡಿಸಿಕೊಳ್ಳಬೇಕಿದೆ. ನಮ್ಮ ದೇಶದಲ್ಲಿ ದುರಾಸೆ ಎಂಬುದು ಮಿತಿ ಮೀರಿದೆ. 50 ರ ದಶಕದಲ್ಲಿ 50 ಕೋಟಿ ಜೀಪ್ ಹಗರಣವಾಗಿತ್ತು. ಕಾಮನ್ ವೆಲ್ತ್ ಗೇಮ್ಸ್ ಹಗರಣ 70,000 ಕೋಟಿ,2 ಜಿ ಹಗರಣ 1.76 ಲಕ್ಷ ಕೋಟಿ. 1985 ರಲ್ಲಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಒಂದು ರೂಪಾಯಿ ಅಭಿವೃದ್ಧಿಗೆ ನೀಡಿದರೆ 15 ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದು ಹೇಳಿದ್ದರು. 2023ರಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.ಹೀಗಾದರೆ ಯಾವ ದೇಶ ಅಭಿವೃದ್ಧಿ ಹೊಂದುತ್ತದೆ. ನಾವೆಲ್ಲರೂ ತೃಪ್ತಿಯೆನ್ನುವ ಮೌಲ್ಯವನ್ನು ಅಳವಡಿಸಿಕೊಂಡು ಸಮಾಜವನ್ನು ಬದಲಾವಣೆ ಮಾಡಬೇಕಿದೆ ಎಂದು ಕರೆ ನೀಡಿದರು.

ಮಾನವೀಯತೆ ಎನ್ನುವುದನ್ನು ನಾವು ಪಡೆದು ಅದನ್ನು ಸಮಾಜಕ್ಕೆ ತೋರಿಸಿದರೆ ನಾವು ಮಾನವರಾಗುತ್ತೇವೆ. ಹುಟ್ಟುವಾಗ ಮಾನವನಾಗಿ ಹುಟ್ಟದೇ ಇದ್ದರೂ ಜೀವನ ಪಥದಲ್ಲಿ ಮಾನವೀಯತೆ ಅಳವಡಿಸಿಕೊಂಡು ಸಾಯುವಾಗ ಮಾನವನಾಗಿ ಸತ್ತರೆ ಅದಕ್ಕಿಂತ ಬೇರೆ ಗೌರವವಿಲ್ಲ. ವೀರಯೋಧ ಲೋಕೇಶ್ ಪಟೇಲ್ ಅವರ ತಂದೆ ತಾಯಿ ನಾಗಮ್ಮ ಮತ್ತು ಜೆ. ರಾಜಶೇಖರಯ್ಯ ಅವರು ತಮ್ಮ ಮಗನ ಜ್ಞಾಪಕಾರ್ಥವಾಗಿ ಅರ್ಥಪೂರ್ಣ ಕಾರ್ಯಕ್ರಮ ಮಾಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಿ.ಡಿ. ಮಾನ್ಯ,ಎನ್. ಸಚಿನ್, ರುಕ್ಮಿಯಾ, ನೇತ್ರ, ಧನುಷ್, ನಂದಕುಮಾರ್, ಡಿ.ಎಸ್. ರಾಹುಲ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಒಕ್ಕಲಿಗರ ಸಂಘದ ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಬಿ.ಸಿ. ರಾಜಕುಮಾರ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ನಾಗಮ್ಮ, ಜೆ. ರಾಜಶೇಖರಯ್ಯ, ಚ.ಮ. ಉಮೇಶ್ ಬಾಬು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!