Saturday, May 18, 2024

ಪ್ರಾಯೋಗಿಕ ಆವೃತ್ತಿ

ನಾವು ಇರುವುದು ಯಾರ ವಿರುದ್ಧ?

✍️ ಗಿರೀಶ್ ತಾಳಿಕಟ್ಟೆ

ಒಂದುಕ್ಷಣ ಯೋಚಿಸಿ ನೋಡಿ. ಟೊಮ್ಯಾಟೊ ಬೆಲೆ ಹೆಚ್ಚಾಗಿದೆ ಅಂತ ನಾವೆಲ್ಲ ಬೊಬ್ಬೆ ಹಾಕುತ್ತಿದ್ದೇವೆ. ಈರುಳ್ಳಿ ಬೆಲೆ ಹೆಚ್ಚಾದಾಗಲೂ ಇದೇ ರೀತಿ ಬೊಬ್ಬೆ ಹಾಕಿದ್ದೆವು. ಮತ್ತು ಮುಂದೆಯೂ ಹಾಕುತ್ತೇವೆ. ಆದರೆ ಅಡುಗೆ ಎಣ್ಣೆ ಬೆಲೆ ಹೆಚ್ಚಾದಾಗ, ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾದಾಗ, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದಾಗ ಇಷ್ಟೇ ತೀವ್ರವಾಗಿ ಬೊಬ್ಬೆ ಹಾಕುತ್ತೇವಾ? ಅವು ನಿರಾತಂಕವಾಗಿ ನಮ್ಮ ಸುಲಿಗೆ ಮಾಡುತ್ತಿದ್ದರೂ, ಗೊಣಗಿಕೊಂಡು ಜೇಬು ಖಾಲಿ ಮಾಡಿಕೊಳ್ಳುತ್ತಲೇ ಇರುತ್ತೇವೆ. ಯಾಕೆಂದರೆ ಅವುಗಳು ಕೋಟ್ಯಧಿಪತಿಗಳ ಉತ್ಪನ್ನಗಳು. ಯಾವ ರೈತನೂ ತನ್ನ ಹೊಲದಲ್ಲಿ ಬೆಳೆಯಲಾರದ ವಸ್ತುಗಳು. ಅದೇ, ರೈತ ಬೆಳೆಯುವ ಟೊಮ್ಯಾಟೊ, ಈರುಳ್ಳಿ, ತರಕಾರಿ ಬೆಲೆ ಹೆಚ್ಚಾದಾಕ್ಷಣ ಪ್ರಪಂಚವೇ ಮುಳುಗಿ ಹೋಗುವಂತೆ ವರ್ತಿಸುತ್ತೇವೆ. ಯಾಕೆ? ಬಂಡವಾಳಿಗರಿಗೆ ಲಾಭ ಸಿಕ್ಕಷ್ಟು ಸಲೀಸಾಗಿ ನಮ್ಮ ರೈತರಿಗೆ ಯಾವತ್ತೂ ಲಾಭ ಸಿಗಬಾರದೆನ್ನುವುದು ನಮ್ಮ ಹವಣಿಕೆಯೇ?

ಆ ರೈತನ ಸಾಲ ಮನ್ನಾ ಮಾಡಿದರೆ ದೇಶದ ಹಣಕಾಸು ವ್ಯವಸ್ಥೆ ಹದಗೆಟ್ಟು ಹೋಗುತ್ತದೆ ಎನ್ನುತ್ತೇವೆ, ಬಂಡವಾಳಿಗರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುತ್ತೇವೆ! ರೈತ ಮತ್ತು ಅವನ ಕುಟುಂಬಕ್ಕೆ ಏನಾದರು ಒಂದಿಷ್ಟು ಅನುಕೂಲ ಮಾಡಿಕೊಡಲು ಮುಂದಾದರೆ, ‘ಬಿಟ್ಟಿ ಭಾಗ್ಯಗಳು’ ಎಂದು ಲೇವಡಿ ಮಾಡುತ್ತೇವೆ, ಅವುಗಳಿಂದ ಆರ್ಥಿಕತೆ ನೆಲ ಕಚ್ಚುತ್ತೆ ಎಂದು ಎಕನಾಮಿಸ್ಟುಗಳಾಗುತ್ತೇವೆ! ಎಷ್ಟೋ ಸಲ ಇದೇ ಟೊಮ್ಯಾಟೋ ಬೆಳೆದ ರೈತ ತಮಗೆ ಸರಿಯಾದ ಬೆಲೆ ಸಿಗದೆ ಟೊಮ್ಯಾಟೊವನ್ನು ರಸ್ತೆಯಲ್ಲಿ ಚೆಲ್ಲಿ ಗೋಳಾಡಿದ ದೃಶ್ಯಗಳನ್ನು ನಾವು ಕಂಡಿದ್ದೇವೆ. ಆಗ ಯಾಕೆ ನಮ್ಮೊಳಗಿನ ಎಕಾನಮಿಸ್ಟು ಮಿಸುಕಾಡಿರಲಿಲ್ಲ. ನಾವೆಲ್ಲ ಹೊಟ್ಟೆಗೆ ತಿನ್ನುವುದು ಅನ್ನವೇ ಆಗಿರುವುದರಿಂದ, ಇಲ್ಲಿ ಪಕ್ಷ ರಾಜಕಾರಣವನ್ನು ಪಕ್ಕಕ್ಕಿಡೋಣ. ಯಾರೋ ಒಬ್ಬರಿಗಾಗಿ, ಅಥವಾ ಒಂದು ಪಕ್ಷಕ್ಕಾಗಿ ಪೆಟ್ರೋಲ್-ಡೀಸೆಲ್ ರೇಟು ನೂರಲ್ಲ, ಇನ್ನೂರು, ಐನೂರು ರೂಪಾಯಿಯಾದ್ರೂ ನಡೆದುಕೊಂಡು ಹೋಗಿ ಓಟು ಹಾಕ್ತೀವಿ ಅನ್ನುವ ನಾವು; ಕಷ್ಟಪಟ್ಟು ಬೆಳೆದ ರೈತನಿಗೆ ತುಸು ಲಾಭ ಸಿಗುತ್ತದೆ ಅನ್ನುವುದಾದರೆ ಟೊಮ್ಯಾಟೊ ಬೆಲೆಯನ್ನೂ ಸ್ವಲ್ಪ ಕಾಲ ಸಹಿಸಿಕೊಳ್ಳುತ್ತೇವೆ ಎಂದೇಕೆ ಹೇಳುವುದಿಲ್ಲ? ಇಂತಹ ನಮ್ಮ ‘ಕನ್‌ಫ್ಯೂಸ್ಡ್ ಪೊಲಿಟಿಕಲ್ ಆಟಿಟ್ಯೂಡ್ನಿಂದ ಲಾಭ ಆಗುತ್ತಿರುವುದು ಬಂಡವಾಳಿಗರಿಗೆ, ಲುಕ್ಸಾನು ತಲುಪುತ್ತಿರುವುದು ರೈತರಿಗೆ!

ಇಲ್ಲಿ ಸಂಘರ್ಷ ಇರುವುದು ಯಾವ್ಯಾವುದೋ ಪೊಲಿಟಿಕಲ್ ಪಾರ್ಟಿಗಳು ಹಾಗೂ ಆ ಪಾರ್ಟಿಗಳನ್ನು ಸಮರ್ಥಿಸಿಕೊಳ್ಳುವ ಸೋಶಿಯಲ್ ಮೀಡಿಯಾದ ಆಕ್ಟಿವಿಸ್ಟುಗಳ ನಡುವೆ ಅಲ್ಲ; ಕೇವಲ, ಬಂಡವಾಳಿಗರು ಹಾಗೂ ರೈತರ ನಡುವೆ! ಸರ್ಕಾರದಿಂದ ಸಾಕಷ್ಟು ರಿಯಾಯಿತಿ ಪಡೆದು ತಮ್ಮ ಕಂಪನಿಯನ್ನೋ, ಕಾರ್ಖಾನೆಯನ್ನೋ ನಿರ್ಮಿಸಿಕೊಂಡ ಬಂಡವಾಳಿಗರು ತಮ್ಮ ಉತ್ಪನ್ನಗಳಿಗೆ ಕೊಂಚ ತೊಂದರೆಯಾದರೂ, ತಮಗೆ ಎಳ್ಳಷ್ಟು ಕಿರಿಕಿರಿಯಾದರೂ ಸರ್ಕಾರದ ಕೊರಳಪಟ್ಟಿ ಹಿಡಿದು ಸರಿ ಮಾಡಿಸಿಕೊಳ್ಳುತ್ತಾರೆ, ನಿಮ್ಮ ರಾಜ್ಯ ಅಥವಾ ದೇಶದಿಂದ ಹೊರಹೋಗುತ್ತೇವೆ ಅಂತ ಬೆದರಿಕೆ ಹಾಕುತ್ತಾರೆ. ಆಗ ಸರ್ಕಾರ ಯಾವ ಮುಲಾಜೂ ಇಲ್ಲದೆ ನಮ್ಮ ಜೇಬುಗಳಿಗೆ ನಿರಾತಂಕವಾಗಿ ಕೈತೂರಿಸಿ ಅವರನ್ನು ಸಂತೈಸುತ್ತದೆ. ಆದರೆ ಅದೇ ರೈತನಿಗೆ ತುಸುವೇ ಬೆಲೆ ಕೈಗತ್ತುತ್ತದೆ ಎನ್ನುವಾಗ ನಾವು ಸರ್ಕಾರದ ಕೊರಳಪಟ್ಟಿಗೆ ಕೈಹಾಕುತ್ತೇವೆ, ರೈತನಿಗೆ ಲುಕ್ಸಾನು ಮಾಡಿ ನಿಟ್ಟುಸಿರು ಬಿಡುತ್ತೇವೆ. ಈಗಲೂ ಅಷ್ಟೇ, ಪೆಟ್ರೋಲ್-ಡೀಸೆಲ್-ಗ್ಯಾಸ್ ಏರಿಕೆಗಳ ವಿರುದ್ಧದ ನಮ್ಮ ಗೊಣಗಾಟಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದ ಸರ್ಕಾರಗಳು, ಟೊಮ್ಯಾಟೊ ವಿರುದ್ಧದ ನಮ್ಮ ಆಕ್ರೋಶಕ್ಕೆ ತಕ್ಷಣವೇ ಕಾರ್ಯತತ್ಪರವಾಗಿ ಏನೋ ಒಂದು ಸಾಹಸ ಮಾಡಿ, ರೇಟನ್ನು ಇಳಿಸಿ ಹಾಕುತ್ತವೆ. ಬೆಳೆದ ರೈತ ಮುಳುಗಿ ಹೋಗುತ್ತಾನೆ.

ಅದೃಷ್ಟ ಚೆನ್ನಾಗಿದ್ದ ಪಕ್ಕದ ಹೊಲದ ರೈತನ ಇಳುವರಿ ಈ ಅವಧಿಯಲ್ಲೇ ಬಂದಿದ್ದರಿಂದ ಕೈಗೆ ಒಂದಿಷ್ಟು ಕಾಸು ಮಾಡಿಕೊಂಡಿರುತ್ತಾನೆ, ಅವನನ್ನು ಕಂಡು ತನಗೂ ಈ ಸಲ ಒಂದಷ್ಟು ಕಾಸು ಕೈಗತ್ತಬಹುದು, ಮಗಳ ಮದುವೆಗೋ, ಮಗನ ಓದಿಗೋ ಕೊಂಚ ನೆರವಾಗಬಹುದು ಎಂಬ ಆಸೆಯಿಂದ ಮತ್ತೋರ್ವ ರೈತ ತನ್ನ ಫಸಲು ಕಟಾವು ಮಾಡುವ ಹೊತ್ತಿಗೆ, ನಮ್ಮ ಈ ಬೊಬ್ಬೆಯಿಂದ ರೇಟು ದಬಾಲನೆ ಬಿದ್ದು ಹೋಗಿರುತ್ತೆ. ಆಗ ಆ ರೈತನಿಗಾಗುವ ಹತಾಶೆ ಎಂತದ್ದು ಅನ್ನೋದರ ಅಂದಾಜು ನಮಗಿದೆಯಾ? ಈ ಲಾಟರಿ ಆಟದಲ್ಲಿ, ಅವನು ಆತ್ಮಹತ್ಯೆ ಮಾಡಿಕೊಳ್ಳದೇ ಇರಲು ಸಾಧ್ಯವಾಗುವುದಾದರೂ ಹೇಗೆ?

ಈಗ, ತಿನ್ನುವ ಅನ್ನದ ತುತ್ತು ನಮ್ಮ ಕೈಯಲ್ಲಿದೆ ಎಂದುಕೊಂಡು ಈ ಪ್ರಶ್ನೆ ಕೇಳಿಕೊಳ್ಳೋಣ, ನಿಜಕ್ಕೂ ನಾವು ಇರುವುದು ಯಾರ ವಿರುದ್ಧ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!