Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾನಸಿಕ ಖಿನ್ನತೆಯಿಂದ ಪ್ರತಿ 42 ಸೆಕೆಂಡಿಗೆ ಒಬ್ಬರು ಆತ್ಮಹತ್ಯೆ: ನ್ಯಾ. ಶಕುಂತಲಾ

ಮಾನಸಿಕ ಖಿನ್ನತೆಗೆ ಒಳಗಾಗಿ ವಿಶ್ವದಲ್ಲಿ ಇಂದು ಪ್ರತಿ 42 ಸೆಕೆಂಡ್ ಗೆ ಒಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾದವರನ್ನು ಕೀಳಾಗಿ ಕಾಣದೆ, ಅವರನ್ನು ಪ್ರೀತಿ ವಿಶ್ವಾಸದಿಂದ ಕಂಡು ಆತ್ಮ ವಿಶ್ವಾಸವನ್ನು ತುಂಬುವ ಮೂಲಕ ಆರೋಗ್ಯವಂತ ಜೀವನಕ್ಕೆ ಮರಳಿ ಬರುವಂತೆ ಮಾಡಬೇಕು ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಶಕುಂತಲಾ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುವುದು ಸರ್ವೇ ಸಾಮಾನ್ಯವಾಗಿದೆ. ಆದ್ದರಿಂದ ಯುವಜನರು ಸೇರಿದಂತೆ ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಕಡೆಗೆ ನಿಗಾವಹಿಸಿ ಒತ್ತಡಗಳಿಂದ ಮುಕ್ತರಾಗಿ ಕೆಲಸ ಮಾಡಬೇಕು ಎಂದರು.

ಕೃಷ್ಣರಾಜಪೇಟೆ ಪಟ್ಟಣದ ಜೆಎಂಎಫ್ಸಿ ಅಪರ ಸಿವಿಲ್ ನ್ಯಾಯಾಧೀಶರಾದ ಅರ್ಪಿತ ಮಾತನಾಡಿ, ಮಾನಸಿಕ ಅಸ್ವಸ್ಥತೆ ಸೇರಿದಂತೆ ಖಿನ್ನತೆಯನ್ನು ಯೋಗ, ಧ್ಯಾನ ಸೇರಿದಂತೆ ಪ್ರೀತಿ ವಿಶ್ವಾಸವನ್ನು ತುಂಬುವ ಮೂಲಕ ದೂರ ಮಾಡಿ ಮರಳು ಎಂದಿನಂತೆ ದೈನಂದಿನ ಜೀವನಕ್ಕೆ ಕರೆ ತರಬಹುದಾಗಿದೆ. ಮಾನಸಿಕ ಖಿನ್ನತೆಯು ವಾಸಿ ಮಾಡಬಹುದಾದ ರೋಗವಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನದಿಂದ ಮಾನಸಿಕ ಅಸ್ವಸ್ಥತೆಯನ್ನು ದೂರ ಮಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆ.ಆರ್.ಪೇಟೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್ ಮಾತನಾಡಿ, ಮಾನಸಿಕ ಅಸ್ವಸ್ಥತೆಯು ಎಂದು ವಿಶ್ವವನ್ನೇ ಕಾಡುತ್ತಿರುವ ಸಾಮಾಜಿಕ ಪಿಡುಗಾಗಿ ಬದಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾದವರು ತಕ್ಷಣವೇ ಯಾವುದೇ ದುಡುಕಿನ ತಪ್ಪು ನಿರ್ಧಾರಕ್ಕೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವ ಹಾಗು ಜೀವನವನ್ನು ಹಾಳು ಮಾಡಿಕೊಳ್ಳದೆ, ಶಾಂತ ಚಿತ್ತರಾಗಿ ಸಮಸ್ಯೆಗಳನ್ನು ದೂರ ಮಾಡಿಕೊಂಡು, ಶಾಂತಿ ನೆಮ್ಮದಿಯಿಂದ ತಂದೆ ತಾಯಿಗಳು ಬಂಧುಗಳು ಹಾಗೂ ಸ್ನೇಹಿತರೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಮೂಲಕ ಮಾನಸಿಕ ಖಿನ್ನತೆಯಿಂದ ಹೊರಬಂದು ಸಮೃದ್ಧಿಯ ಜೀವನ ನಡೆಸಬೇಕು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ಡಾ.ಕಾವ್ಯಶ್ರೀ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಸಹಾಯಕ ಸರ್ಕಾರಿ ಅಭಿಯೋಜಕ ಸುರೇಂದ್ರ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇ ಗೌಡ, ಖಜಾಂಚಿ ಡಿ ಆರ್ ಜಗದೀಶ್, ಹಿರಿಯ ಆರೋಗ್ಯ ನಿರೀಕ್ಷಕ ಶೀಳನೆರೆ ಸತೀಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೃಷ್ಣರಾಜಪೇಟೆಯ ಮಾದೇಗೌಡ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶುಶ್ರೂಷಕಿ ಕಲ್ಪನಾ ಪ್ರಾರ್ಥಿಸಿದರು, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್ ಕಾರ್ಯಕ್ರಮ ನಡೆಸಿಕೊಟ್ಟರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!