Monday, May 20, 2024

ಪ್ರಾಯೋಗಿಕ ಆವೃತ್ತಿ

ನ.6ಕ್ಕೆ 14 ಪರೀಕ್ಷಾ ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು ನವೆಂಬರ್ 6 ರಂದು ಮಂಡ್ಯ ನಗರದ 14 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ಮಂಡ್ಯನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಸಿ ಮಾತನಾಡಿದ ಅವರು, ನವೆಂಬರ್ 6 ಅಧಿವೇಶನ-1 ಬೆಳಿಗ್ಗೆ 9.30 ರಿಂದ 12 ಗಂಟೆಯವರೆಗೆ ನಡೆಯಲಿದ್ದು, 2,341 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಧಿವೇಶನ-2 ಮಧ್ಯಾಹ್ನ 2 ರಿಂದ 4.30 ರವರೆಗೆ ನಡೆಯಲಿದೆ. 3,445 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಕಲಚೇತನರಿಗೆ ನಿಗಧಿಪಡಿಸಿರುವಂತೆ ಪರೀಕ್ಷೆ ಬರೆಯಲು ಹೆಚ್ಚಿನ ಸಮಯಾವಕಾಶ ಒದಗಿಸಲಾಗುವುದು ಎಂದರು.

ಪರೀಕ್ಷಾ ಅಕ್ರಮಗಳಿಗೆ ಅವಕಾಶವಿಲ್ಲ

ಪರೀಕ್ಷೆಯು ಪಾರದರ್ಶಕವಾಗಿ ನಡೆಯಬೇಕು. ಪರೀಕ್ಷಾರ್ಥಿಗಳು ಮೊಬೈಲ್‌, ಕ್ಯಾಲ್ ಕ್ಯುಲೇಟರ್ ಇನ್ನಿತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ. ಮೊಬೈಲ್‌ ಸ್ವಾಧೀನಾಧಿಕಾರಿಗಳನ್ನು ನೇಮ‌ಕ ಮಾಡಲಾಗಿದ್ದು, ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತಂದರೆ ಸ್ವಾಧೀನ ಮಾಡಿಕೊಂಡ ಪರೀಕ್ಷೆಯ ನಂತರ ನೀಡುವುದು ಎಂದರು.

ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ‌ಸಿ.ಸಿ.ಟಿವಿ. ವ್ಯವಸ್ಥೆಯಾಗಬೇಕು. ಅದರ ಸಮರ್ಪಕ ಕಾರ್ಯನಿರ್ವಹಣೆಯ ಬಗ್ಗೆ ಮುಂಚಿತವಾಗಿ ಖಾತ್ರಿ ಮಾಡಿಕೊಳ್ಳಬೇಕು. ಬೇಕಿರುವ ಸ್ಥಳಗಳಲ್ಲಿ ವಿಡಿಯೋಗ್ರಫಿ ವ್ಯವಸ್ಥೆಯಾಗಬೇಕು. ಪರೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರ, ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯಾಗಬೇಕು. ಎಲ್ಲಾ ವ್ಯವಸ್ಥೆಗಳ ಬಗ್ಗೆ ಜಿಲ್ಲಾಧಿಕಾರಿಗಳನ್ನೊಳಗೊಂಡ ತಂಡ ನ.5 ರಂದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ ಒಬ್ಬರು ಶ್ರವಣ ತಜ್ಞರನ್ನು ನೇಮಕ ಮಾಡಲಾಗುವುದು. ಅವರು ಶ್ರವಣ ಸಾಧನ ಹೊಂದಿರುವ ಅಭ್ಯರ್ಥಿಗಳ ಸಾಧನವನ್ನು ಪರೀಕ್ಷಿಸಲಿದ್ದಾರೆ. ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಪ್ರತಿ ಪರೀಕ್ಷಾ ‌ಕೇಂದ್ರಕ್ಕೆ ಅಧೀಕ್ಷಕರು, ಸ್ಥಾನಿಕ ಜಾಗೃತದಳ ಅಧಿಕಾರಿ ಹಾಗೂ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯನ್ನು ಪರೀಕ್ಷಾ ದಿನದಂದು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಪವನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಶಿಕ್ಷಣಾಧಿಕಾರಿ ಮಹೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!