Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ: ಜೆಡಿಎಸ್ ಟಿಕೆಟ್ ಗೆ ಶುರುವಾಯ್ತು ಫೈಟಿಂಗ್

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಿಬ್ಬರ ಮಾತಿನ ವರಸೆ ರಂಗೇರಿದೆ. ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಹಾಗೂ ಹಾಲಿ ಶಾಸಕ ಎಂ. ಶ್ರೀನಿವಾಸ್ ಅವರ ಅಳಿಯ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ನಡುವೆ ಜೆಡಿಎಸ್ ಟಿಕೆಟ್ ಹಿನ್ನೆಲೆಯಲ್ಲಿ ಮಾತಿನ ಸಮರ ಶುರುವಾಗಿದೆ.

ಧರ್ಮಸ್ಥಳ ಯಾತ್ರೆ
ಮನ್ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರು ಕಳೆದ 3-4 ತಿಂಗಳಿಂದ ಧರ್ಮಸ್ಥಳ ಯಾತ್ರೆಯ ಮೂಲಕ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈಗಾಗಲೇ 12,000ಕ್ಕೂ ಹೆಚ್ಚು ಜನರನ್ನು ಧರ್ಮಸ್ಥಳ ಯಾತ್ರೆಗೆ ಕರೆದುಕೊಂಡು ಹೋಗಿದ್ದರೆ,ಎಚ್.ಎನ್.ಯೋಗೇಶ್ ಕೂಡ ತಮ್ಮ ಮಾವ ಎಂ.ಶ್ರೀನಿವಾಸ್ ಧರ್ಮಸ್ಥಳ ಯಾತ್ರೆಯ ಮೂಲಕ 8,000 ಜನರಿಗೆ ಮಂಜುನಾಥ ಸ್ವಾಮಿಯ ದರ್ಶನ ಮಾಡಿಸಿದ್ದಾರೆ.

ರಾಮಚಂದ್ರು ಅವರು ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಮಳೆ ಹಾನಿಯಿಂದ ನೊಂದವರಿಗೆ ಪರಿಹಾರ, ದೇವಸ್ಥಾನಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಂಡ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದರೆ,ಎಚ್.ಎನ್. ಯೋಗೇಶ್ ಕೂಡ ಮಳೆ ಹಾನಿಗೆ ಒಳಗಾದವರಿಗೆ ಪರಿಹಾರ, ದೇವಸ್ಥಾನಗಳಿಗೆ ನೆರವು,ವ್ಯಕ್ತಿಗತ ಪರಿಹಾರ ನೀಡುವ ಮೂಲಕ ಕ್ಷೇತ್ರದಲ್ಲಿ ಹವಾ ಸೃಷ್ಟಿಸಿದ್ದಾರೆ.

ಇವರಿಬ್ಬರ ಅಬ್ಬರದ ಮಧ್ಯೆ ಮತ್ತೊಬ್ಬ ಜೆಡಿಎಸ್ ಟಿಕೆಟ್ ಆಕಾಂಕ್ಷಿ ನಿತ್ಯ ಸಚಿವ ಕೆ.ವಿ. ಶಂಕರಗೌಡರ ಮೊಮ್ಮಗ, ಪಿಇಟಿ ಅಧ್ಯಕ್ಷ ವಿಜಯಾನಂದ ಹೆಸರು ಜೆಡಿಎಸ್ ನಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.

ಪ್ರತಿಸ್ಪರ್ಧಿ ಅಲ್ಲ
ಈ ಮಧ್ಯ ಜೆಡಿಎಸ್ ಟಿಕೆಟ್ ಆಕಾಂಕ್ಷಿತರ ಪಟ್ಟಿಯಲ್ಲಿ ನನ್ನ ಹೆಸರು ಖಂಡಿತ ಇದೆ ಎಂದು ಹೇಳಿರುವ ಎಚ್.ಎನ್. ಯೋಗೇಶ್, ಮನ್ಮುಲ್ ಅಧ್ಯಕ್ಷ ರಾಮಚಂದ್ರು ನನ್ನ ಪ್ರತಿಸ್ಪರ್ಧಿಯಲ್ಲ. ಮಂಡ್ಯ ಕ್ಷೇತ್ರಕ್ಕೆ ಅವರು ಯಾರು? ಮಂಡ್ಯ ಕ್ಷೇತ್ರದಲ್ಲಿ ನಾನು ಕಳೆದ 7 ವರ್ಷಗಳಿಂದ ಜನರ ಪರ ಕೆಲಸ ಮಾಡಿದ್ದೇನೆ.ರಾಜಕಾರಣ ಮಾಡುವ ಉದ್ದೇಶದಿಂದ ತಳಮಟ್ಟದಿಂದ ಪಕ್ಷ ಸಂಘಟಿಸಿ ಗ್ರಾಮ ಪಂಚಾಯಿತಿ ಚುನಾವಣೆ, ಸೊಸೈಟಿ ಹಾಗೂ ಮನ್ಮಲ್ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಹೀಗಿರುವಾಗ ಆರು ತಿಂಗಳ ಹಿಂದೆ ಬಂದು ಧರ್ಮಸ್ಥಳ ಯಾತ್ರೆಯ ಮೂಲಕ ಜನರನ್ನು ತಲುಪಿದ್ದೇನೆ ಎಂದು ರಾಮಚಂದ್ರು ಹೇಳುತ್ತಾರೆ. ಅವರು 5 ಬಸ್ ಕಳಿಸಿದರೆ,ನಾನು 10ಬಸ್ ಕಳಿಸುತ್ತೇನೆ. ಧರ್ಮಸ್ಥಳಕ್ಕೆ ಕಳಿಸಿದ ಮಾತ್ರಕ್ಕೆ ಗೆದ್ದು ಬಿಡುತ್ತೇವೆ ಅಂತ ಅಂದುಕೊಳ್ಳುವಷ್ಟು ಮುಟ್ಟಾಳತನ ನನಗಿಲ್ಲ ಎಂದು ರಾಮಚಂದ್ರು ವಿರುದ್ಧ ವ್ಯಂಗ್ಯವಾಡಿದ್ದಾರೆ.

ಅಲ್ಲದೆ ನನ್ನ ವಿಜಯಾನಂದ್ ಅವರ ಮಧ್ಯೆ ಯಾವುದೇ ಭಿನ್ನಮತ ಇಲ್ಲ. ಟಿಕೆಟ್ ಹಿನ್ನಲೆಯಲ್ಲಿ ಒಂದಷ್ಟು ಅಂತರ ಕಾಯ್ದುಕೊಂಡಿದ್ದೇವೆ. ಯಾರಾದರೂ ಒಬ್ಬರಿಗೆ ಟಿಕೆಟ್ ಕೊಡಬಹುದು, ಎಲ್ಲರಿಗೂ ಕೊಡಲು ಸಾಧ್ಯವಿಲ್ಲ. ವಿಜಯಾನಂದ ನನಗೂ ಆಗುವುದಿಲ್ಲ ಅಂತ ಬಿಂಬಿಸಿದ್ದಾರೆ. ಆದರೆ ನಾವಿಬ್ಬರೂ ಚೆನ್ನಾಗಿದ್ದೇವೆ, ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಲ್ಲದೆ, ರಾಮಚಂದ್ರು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಜಿಲ್ಲಾಧ್ಯಕ್ಷ ಡಿ.ರಮೇಶ್ ಮನೆಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಟಿಕೆಟ್ ಅಕಾಂಕ್ಷಿಗಳಾದ ಬಿ.ಆರ್. ರಾಮಚಂದ್ರು, ಹೆಚ್.ಎನ್. ಯೋಗೇಶ್ ಹಾಗೂ ಕೆ.ಎಸ್. ವಿಜಯಾನಂದ ಅವರಿಗೆ ಒಗ್ಗಟ್ಟಿನ ಪಾಠ ಮಾಡಿ ಜೆಡಿಎಸ್ ವರಿಷ್ಠರು ಟಿಕೆಟ್ ಯಾರಿಗೆ ನೀಡುತ್ತಾರೋ ಅವರ ಪರ ಕೆಲಸ ಮಾಡಬೇಕೆಂದು ತಿಳಿಸಿ ಒಬ್ಬರ ವಿರುದ್ಧ ಮತೊಬ್ಬರು ಮಾತನಾಡದೆ ಪಕ್ಷ ಸಂಘಟಿಸಿ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಮಂಡ್ಯ ಜೆಡಿಎಸ್ ಟಿಕೆಟ್ ಯಾರಿಗೆ ಸಿಗುವುದು ಎಂಬ ಕುತೂಹಲ ಜನರಲ್ಲಿ ಮೂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!