Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಣಿಪುರ ಹಿಂಸಾಚಾರ| 87 ಮೃತದೇಹಗಳ ಸಾಮೂಹಿಕ ಅಂತ್ಯ ಸಂಸ್ಕಾರ

ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ ಕುಕಿ ಝೋ ಸಮುದಾಯದ 87 ಜನರ ಮೃತದೇಹಗಳಿಗೆ ಮಣಿಪುರದ ಚುರಚಂದ್‌ಪುರ ಜಿಲ್ಲೆಯಲ್ಲಿ ಬುಧವಾರ(ಡಿ.20) ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಡಿಸೆಂಬರ್ 14 ರಂದು ಇಂಫಾಲ್‌ನ ವಿವಿಧ ಶವಾಗಾರಗಳಿಂದ 41 ಮೃತದೇಹಗಳನ್ನು ವಿಮಾನದಲ್ಲಿ ಏರ್‌ಲಿಫ್ಟ್‌ ಮಾಡಲಾಗಿತ್ತು ಮತ್ತು 46 ಮೃತದೇಹಗಳನ್ನು ಚುರಚಂದ್‌ಪುರ ಜಿಲ್ಲಾಸ್ಪತ್ರೆಯಿಂದ ತರಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತ್ಯ ಸಂಸ್ಕಾರಕ್ಕೂ ಮುನ್ನ ನಿಷೇಧಾಜ್ಞೆ ನಡುವೆಯೂ ಸಹಸ್ರಾರು ಜನರು ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ಹಿಂಸಾಚಾರದಲ್ಲಿ ಮೃತಪಟ್ಟ 30 ಮಂದಿಯ ಅಂತ್ಯ ಸಂಸ್ಕಾರ ಇನ್ನೂ ಬಾಕಿಯಿದೆ. ಈ ಸಂಬಂಧ ಕಳೆದ ಸೋಮವಾರ ರಾತ್ರಿ ಚುರಚಂದ್‌ಪುರ ಜಿಲ್ಲೆಯಲ್ಲಿ ಘರ್ಷಣೆ ನಡೆದಿತ್ತು. ನಂತರ ಸೆಕ್ಷನ್ 144ರಡಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಈ ನಡುವೆ ಚುರಚಂದ್‌ಪುರದ ತುಯಿಬುಂಗ್‌ನಲ್ಲಿ ಮೃತದೇಹಗಳ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

“>

ಇದಕ್ಕೂ ಮುನ್ನ ಡಿಸೆಂಬರ್ 15ರಂದು, ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ 19 ಮೃತದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಮೈತೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3, 2023ರಂದು ‘ಬುಡಕಟ್ಟು ಐಕಮತ್ಯ ಮೆರವಣಿಗೆ’ ಆಯೋಜಿಸಲಾಗಿತ್ತು. ಇದು ಬಳಿಕ ಜನಾಂಗೀಯ ಹಿಂಸಾಚಾರಕ್ಕೆ ತಿರುಗಿತ್ತು.

ಪರಿಣಾಮ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣ ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ಅನೇಕ ಜನರು ಜೈಲಿನಲ್ಲಿದ್ದಾರೆ. ಹಿಂಸಾಚಾರ ಪ್ರಾರಂಭಗೊಂಡು 7-8 ತಿಂಗಳು ಕಳೆದರೂ, ಇಂದಿಗೂ ಮಣಿಪುರದಲ್ಲಿ ಸಂಪೂರ್ಣ ಶಾಂತಿ ಸ್ಥಾಪನೆಯಾಗಿಲ್ಲ.

ಮಣಿಪುರದ ಜನಸಂಖ್ಯೆಯ ಶೇ. 53ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರು, ನಾಗಾಗಳು ಮತ್ತು ಕುಕಿಗಳು ಶೇ. 40 ಕ್ಕಿಂತ ಹೆಚ್ಚಿದ್ದು, ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಮೃತದೇಹಗಳ ಅಂತ್ಯ ಸಂಸ್ಕಾರದ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪತ್ರಕರ್ತ ಮೊಹಮ್ಮದ್ ಝುಬೈರ್, “ಮಣಿಪುರ ಹಿಂಸಾಚಾರದ 87 ಬಲಿಪಶುಗಳಿಗೆ ಅಂತಿಮವಾಗಿ ಚುರಚಂದ್‌ಪುರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎಷ್ಟು ಮುಖ್ಯವಾಹಿನಿ ನ್ಯೂಸ್ ಏಜೆನ್ಸಿಗಳು ಮತ್ತು ನ್ಯೂಸ್ ಚಾನೆಲ್‌ಗಳು ಇದರ ಬಗ್ಗೆ ವರದಿ ಮಾಡಿವೆ?” ಎಂದು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!