Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೀಸಲಾತಿ ಹೆಸರಿನಲ್ಲಿಅಹಿಂದ ವರ್ಗಗಳಿಗೆ ಬಿಜೆಪಿ ಮಹಾದ್ರೋಹ : ಪ್ರೊ.ರವಿವರ್ಮ ಕುಮಾರ್

ಮೀಸಲಾತಿ ನೀಡುವುದಾಗಿ ಹೇಳಿ ಅದನ್ನು ಅನುಷ್ಠಾನ ಮಾಡದೇ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಬಿಜೆಪಿ ಸರ್ಕಾರ ಮಹಾದ್ರೋಹ ಮಾಡಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಕರೆ ನೀಡಿದರು.

ಬಿಜೆಪಿ ಸರ್ಕಾರ ಧರ್ಮ-ಧರ್ಮಗಳ ನಡುವೆ ಹಾಗೂ ಜಾತಿ-ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಕೋಮು ಗಲಭೆಯನ್ನು ನಡೆಸುತ್ತಿದೆ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂವಿಧಾನದ ಆಶಯಗಳನ್ನು ಜಾರಿಗೆ ತಂದು ಅಂಬೇಡ್ಕರ್ ಕನಸುಗಳನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಇದನ್ನು ಸಹಿಸದೆ ಅವರನ್ನು ಮುಗಿಸಬೇಕೆಂದು ಹೇಳಿಕೆ ನೀಡುತ್ತಿದ್ದರೂ ಸಹ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮತದಾರರು ಭ್ರಷ್ಟರಾದರೆ ಭ್ರಷ್ಟ ಸರ್ಕಾರ
ಮತದಾರರು ಭ್ರಷ್ಟರಾದರೆ ಭ್ರಷ್ಟ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಆದ್ದರಿಂದ ಮತದಾರರು ನಿಷ್ಠರಾಗಿ ಒಳ್ಳೆಯ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ಈ ಸರ್ಕಾರದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರು ನಿರ್ಭೀತಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್ ಕಪಿಮುಷ್ಠಿಯಲ್ಲಿ ಸರ್ಕಾರ
ಗ್ರಾಮ ಪಂಚಾಯಿತಿಯಲ್ಲಿ ನಿಂತು ಜಯಗಳಿಸದ ಆರ್‌ಎಸ್‌ಎಸ್ ನಾಯಕ ಬಿಜೆಪಿ ಪಕ್ಷ ಮತ್ತು ಸರ್ಕಾರವನ್ನು ನಿಯಂತ್ರಿಸುತ್ತಿದ್ದಾನೆ. ರಾಜ್ಯದಲ್ಲಿ ಪ್ರವಾಹ ಬಂದಾಗ ಮತ್ತು ಕೊರೊನಾದಿಂದ ಸಾವಿರಾರು ಜನ ಸತ್ತಾಗ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಜನರ ಹಿತ ಕೇಳಲು ಬರದವರು ಇಂದು ಮತ ಕೇಳಲು ರಾಜ್ಯಕ್ಕೆ ದಾಂಗುಡಿ ಇಡುತ್ತಿದ್ದಾರೆ, ಅವರ ಬಗೆ ಮತದಾರರು ಎಚ್ಚರವಹಿಸಬೇಕೆಂದು ಕರೆ ನೀಡಿದರು.

ಒತ್ತಾಯಗಳು
ಸಂವಿಧಾನವನ್ನು ಸಂರಕ್ಷಣೆ ಮಾಡಬೇಕು, ಸಂವಿಧಾನಕ್ಕೆ ಅಪಮಾನ ಆಗುವಂತಹ ಹೇಳಿಕೆ ನೀಡುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು.

ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು.

ವಿಧಾನ ಪರಿಷತ್ ಮತ್ತು ರಾಜ್ಯಸಭೆಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಹಿಂದುಳಿದ ವರ್ಗಗಳ ಜನಸಂಖ್ಯೆ ಆಧರಿಸಿ ಮೀಸಲಾತಿ ಹೆಚ್ಚಿಸಬೇಕು.

ಎನ್‌ಇಪಿಯನ್ನು ತಕ್ಷಣ ರದ್ದುಪಡಿಸಬೇಕು, ವಿದ್ಯಾರ್ಥಿ ವೇತನ ಇತ್ಯಾದಿ ಶುಲ್ಕಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಮಹಾ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಸಂಚಾಲಕರಾದ ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಆರ್.ರಾಮಕೃಷ್ಣ, ಎಸ್.ಅನಂತನಾಯಕ್, ಪ್ರೊ. ಹುಲ್ಲುಕೆರೆ ಮಹದೇವ್, ಆದರ್ಶ್ ಯಲ್ಲಪ್ಪ, ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!