Saturday, May 18, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರ ನುಡಿದಂತೆ ನಡೆದುಕೊಳ್ಳಲಿ, ಅದರ ಕ್ರಿಯೆಗಳೇ ಅದರ ಮಾತುಗಳಾಗಲಿ – ”ಎದ್ದೇಳು ಕರ್ನಾಟಕ”ದ ಆಶಯ

”ಮಾತುಗಳು ಹೆಚ್ಚಾದವು. ಈಗ ಕೆಲಸಗಳು ಮಾತನಾಡಬೇಕು”, ಖಾಲಿ ಮಾತುಗಳ ಮೂಲಕ ಅಲ್ಲ
ಸಾಧನೆಗಳ ಜೊತೆ 2024ಕ್ಕೆ ಸಿದ್ಧವಾಗಬೇಕು”, “ಎದ್ದೇಳು ಭಾರತ ಕರೆಗೆ ಪ್ರೇರಣೆಯಾಗಬೇಕು” ಎಂದು ”ಎದ್ದೇಳು ಕರ್ನಾಟಕ” ನಾಗರೀಕ ಅಭಿಮಾನವು ನೂತನ ಕಾಂಗ್ರೆಸ್ ಸರ್ಕಾರಕ್ಕೆ ಬಹಿರಂಗ ಪತ್ರವನ್ನು ಬರೆದು ಮಾರ್ಗದರ್ಶನ ನೀಡಿದೆ.

ಈ ನಾಡಿನ ಅನೇಕ ಜನಪರ ಸಂಘಟನೆಗಳು, ತಳಸಮುದಾಯದ ಸಂಸ್ಥೆಗಳು, ಸಾಹಿತಿ – ಚಿಂತಕರು, ಮಾಧ್ಯಮ ಮಿತ್ರರು ಈ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಮಣಿಸಲು ಅವಿರತ ಕೆಲಸ ಮಾಡಿದ್ದಾರೆ. ದಲಿತ ಸಂಘಟನೆಗಳು, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಂಸ್ಕೃಗಳು, ರೈತ ಸಂಘಟನೆಗಳು, ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆಗಳು, ಹಲವು ಕಾರ್ಮಿಕ ನೌಕರ ಸಂಘಟನೆಗಳು, ಮಹಿಳಾ ಟ್ರಾನ್ಸ್ ಜೆಂಡರ್ ಸಂಘಟನೆಗಳು, ಅನೇಕ ಪ್ರಜಾತಾಂತ್ರಿಕ ಸಂಘಟನೆಗಳು ಬಿಡಿಬಿಡಿಯಾಗಿ ಸಾಕಷ್ಟು ಶ್ರಮ ಹಾಕಿ ದುಡಿದಿವೆ. ಈ ಬಾರಿ ಲಿಂಗಾಯತ, ವೈಶ್ಯ ಬ್ರಾಹ್ಮಣ ಮುಂತಾದ ಸಮುದಾಯದ ಸಂಘಟನೆಗಳು ಮತ್ತು ಸಜ್ಜನರು ಸಹ ಬಿಜೆಪಿಯನ್ನು ಸೋಲಿಸಲು ಮಾಡಿದ ಕೆಲಸವನ್ನು ವಿಶೇಷವಾಗಿ ಗುರುತಿಸುವ ಅಗತ್ಯವಿದೆ, ಈ ಬಿಡಿ ಬಿಡಿ ಪ್ರಯತ್ನಗಳ ಜೊತೆಜೊತೆಗೆ ಅನೇಕ ಸಂಘ-ಸಂಸ್ಥೆ ಮತ್ತು ಗಣ್ಯರ ಸಾಂಘಿಕ ಕ್ರಿಯೆಯಾಗಿ ಹೊರಹೊಮ್ಮಿದ ‘ಎದ್ದೇಳು ಕರ್ನಾಟಕ’ ಒಂದು ವಿಶೇಷ ಪ್ರಯತ್ನವಾಗಿದೆ. ‘ಎದ್ದೇಳು ಕರ್ನಾಟಕ’ ಒಂದು ಹೊಸ ಮಾದರಿಯ ಕಾರ್ಯಯೋಜನೆಯನ್ನು ರೂಪಿಸಿ ಮತದಾನವನ್ನು ಪ್ರಭಾವಿಸುವ ಕೆಲಸ ಮಾಡಿದೆ, ಆ ಕಾರ್ಯದಲ್ಲಿ ಯಶಸ್ವಿಯೂ ಆಗಿದೆ ಎಂದು ‘ಎದ್ದೇಳು ಕರ್ನಾಟಕ’ ಹೇಳಿದೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಮುಂದೆ ಪ್ರಮುಖ 3 ಕೆಲಸಗಳನ್ನು ಮಾಡಿ ರಾಜ್ಯದ ಜನತೆಯ ಕಷ್ಟ- ಕಾರ್ಪಣ್ಯಗಳನ್ನು ಈಡೇರಿಸುವಂತೆ ‘ಎದ್ದೇಳು ಕರ್ನಾಟಕ’ ಸಲಹೆ ನೀಡಿದೆ.

1.ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು: ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು [ಆಹಾರ ಧಾನ್ಯದ ಹೆಚ್ಚಳ, 200 ಯುನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ ಮಾಸಿಕ 2000, ಮಹಿಳೆಯರಿಗೆ ಉಚಿತ ಪಯಾಣ ಮತ್ತು ನಿರುದ್ಯೋಗಿಗಳಿಗೆ ಮಾಸಿಕ 3000 ಭತ್ಯೆ] ಚಾಚೂ ತಪ್ಪದೆ ಜಾರಿಗೆ ತರಬೇಕು. ಸರಿಯೋ ತಪ್ಪೋ ಜನರಿಗೆ ಮಾತು ಕೊಟ್ಟಿದ್ದೀರಿ, ಉಳಿಸಿಕೊಳ್ಳಬೇಕು. ನಮ್ಮ ಪ್ರಕಾರ ಇವೆಲ್ಲಾ ಸಮಾಜದ ಸಂಕಷ್ಟ ನಿವಾರಣೆಗೆ ಮಾಡುವ ತುರ್ತು ಕ್ರಮಗಳು ಮಾತ್ರ ಶಾಶ್ವತ ಪರಿಹಾರಗಳು ಜನರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ನಿಜವಾದ ಪರಿಹಾರ ಇರುವುದು ಜನರ ಆದಾಯ ಹೆಚ್ಚಳದಲ್ಲಿ ಉದ್ಯೋಗ ಖಾತ್ರಿಯಲ್ಲಿ, ವೆಚ್ಚ ಕಡಿತದಲ್ಲಿ ಮತ್ತು ಸೌಹಾರ್ದ ಪರಿಸರ ರೂಪಿಸುವುದರಲ್ಲಿ ಸರ್ಕಾರದ ಒತ್ತು ಅತ್ತ ಇರಬೇಕು. ಆದೇನೇ ಇದ್ದರೂ ಈಗ ಸರ್ಕಾರ ಕೊಟ್ಟ ಮಾತನ್ನಂತೂ ಉಳಿಸಿಕೊಳ್ಳಬೇಕು.

2. ದುರಾಡಳಿತ ತಂದಿರುವ ವಿನಾಶವನ್ನು ಸರಿಪಡಿಸಬೇಕು: ಬಿಜೆಪಿ ಎರಡು ರೀತಿಯ ವಿನಾಶ ಕಾರ್ಯಗಳನ್ನು ನಡೆಸಿತು. ಕಾರ್ಪೋರೇಟ್ ಹಿತಾಸಕ್ತಿ ಮತ್ತು ದ್ವೇಷ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ಹಲವು ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿತು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಕಾಯ್ ಎನ್ ಇ ಪಿ, ಮತಾಂತರ ನಿಷೇಧ ಕಾಯ್ದೆ ವಿದ್ಯುತ್ ಖಾಸಗೀಕರಣ ಕಾಯ್ದೆ, ಪಠ್ಯದ ಮನುವಾದೀಕರಣ, ಅಲ್ಪಸಂಖ್ಯಾತರಿಗೆ ಮೀಸಲಾತಿ ರದ್ದತಿ, ಮೀಸಲಾತಿ ಹೆಸರಿನಲ್ಲಿ ಮಹಾದ್ರೋಹ, ಇತ್ಯಾದಿ ತಂತ್ರ ಕುತಂತ್ರಗಳನ್ನು ಜನರ ಮೇಲೆ ಹೇರಿದ ಈ ದುಷ್ಟ ನೀತಿಗಳ ವಿರುದ್ಧ ಹೋರಾಡಿದವರ ಮೇಲೆ ಕೇಸುಗಳನ್ನು ಹಾಕಿದೆ. ಹೋರಾಟ ಮಾಡುವ ಅವಕಾಶಗಳನ್ನೇ ಕಸಿದುಕೊಂಡಿದೆ.

ಬೆಚ್ಚು ಬೀಳಿಸುವ ಬೆಲೆ ಏರಿಕೆ, 40% ಭ್ರಷ್ಟಾಚಾರ ಮತ್ತು ನಂಜು ಪೂರಿತ ರಾಜಕಾರಣದ ಹರಡುವಿಕೆ ಮೂಲಕ ಜನ ಸಾಮಾನ್ಯರ ಬದುಕಿಗೆ ನೆಮ್ಮದಿ ಇಲ್ಲದಂತೆ ಮಾಡಿದೆ, ಕಾಂಗ್ರೆಸ್ ಸರ್ಕಾರ ಮಾಡಬೇಕಾದ ಎರಡನೇ ಮುಖ್ಯ ಕೆಲಸವೆಂದರೆ ಈ ಜನವಿರೋಧಿ ಕ್ರಮ ಮತ್ತು ಕಾಯ್ಕೆಗಳನ್ನೆಲ್ಲಾ ರದ್ದುಗೊಳಿಸಿ ಜನಹಿತದ ಕಾಯ್ದೆಗಳನ್ನು ರೂಪಿಸಬೇಕು, ಜಾತಿ ಗಣತಿಯನ್ನು ಬಹಿರಂಗಗೊಳಿಸುವ ಮೂಲಕ ವಿವಿಧ ಸಮುದಾಯಗಳ ಸ್ಥಿತಿಗತಿಯನ್ನು ಪಾರದರ್ಶಕವಾಗಿ ಮುಂದಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಗ್ರ ಪರಿಹಾರ ರೂಪಿಸಬೇಕು, ಹಿಂದಿನ ಸರ್ಕಾರ ಹೋರಾಟಗಾರರ ಮೇಲೆ ಹಾಕಿರುವ ಕೇಸುಗಳನ್ನೆಲ್ಲಾ ಹಿಂಪಡೆಯಬೇಕು, ಜನರ ಪ್ರತಿಭಟಿಸುವ ಅವಕಾಶಗಳನ್ನು ಮರುಸ್ಥಾಪಿಸಬೇಕು ಮತ್ತು ಭ್ರಷ್ಟಾಚಾರ ನಿಗ್ರಹಕ್ಕೆ, ಬೆಲೆ ಏರಿಕೆಯ ಕಡಿವಾಣಕ್ಕೆ ಮತ್ತು ಕೂಡಿ ಬಾಳುವ ವಾತಾವರಣ ಮೂಡಿಸಲಿಕೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು.

3. ಜನತೆಯ ಆಗ್ರಹಗಳಿಗೆ ಸರ್ಕಾರ ಸ್ಪಂದಿಸಬೇಕು: ಸರ್ಕಾರ ಏನು ಮಾಡಬೇಕು ಎಂದು ಯೋಚಿಸುವ ಮೊದಲು ಜನರೇನು ಕೇಳುತ್ತಿದ್ದಾರೆ ಎಂಬುದನ್ನು ಆಳುವವರು ಆಲಿಸಬೇಕು. ನಾನಾ ರೀತಿಯ ಜನ ವರ್ಗಗಳು ನಾನಾ ರೀತಿಯ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟ ನಡೆಸಿದ್ದಾರೆ, ಮೊದಲು ಅವರನ್ನು ಕರೆದು ಮಾತನಾಡಿ, ಅವರ ಅಗ್ರಹಗಳನ್ನು ಮನಬಿಚ್ಚಿ ಆಲಿಸಬೇಕು. ಪರಿಹಾರವನ್ನು ಕೂಡ ಹುಡುಕಬೇಕು, ಜನ ಸರ್ಕಾರದ ಬಳಿ ಹೆಚ್ಚೇನೂ ಕೇಳುತ್ತಿಲ್ಲ. ರೈತರ ಬೆಳೆಗೆ ನ್ಯಾಯಯುತ ಬೆಲೆ, ಬಗರ್ ಹುಕುಂ ರೈತರಿಗೆ ಹಕ್ಕುಪತ್ರ, ವಸತಿ ಹೀನರಿಗೆ ನಿವೇಶನ, ನರೇಗಾ ಯೋಜನೆಯ ಬಲವರ್ದನೆ ಮತ್ತು ನಗರಕ್ಕೂ ವಿಸ್ತರಣೆ, ಕನಿಷ್ಠ ಕೂಲಿಯ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ಸೂಕ್ತವಾದ ಪಾಲು, ಒಳ ಮೀಸಲಾತಿಯ ಅನುಷ್ಠಾನ, ಸುಲಿಗೆ ಇಲ್ಲದ ಶಿಕ್ಷಣ, ಸುಲಭ ಚಿಕಿತ್ಸೆಯ ಸೌಲಭ್ಯ, ಪೌಷ್ಟಿಕ ಆಹಾರ, ಓಲ್ಡ್ ಪೆನ್ನನ್ ಸೀಂ, ನಿರ್ಗತಿಕರಿಗೆ ನೆಲೆ, ಮಹಿಳೆಯರಿಗೆ ರಕ್ಷಣೆ ಮತ್ತು ಸೂಕ್ತ ಸ್ಥಾನಮಾನ, ಮಲಬಾಚುವಂತಹ ಹೀನ ಆಚರಣೆಗಳ ರದ್ದತಿ, ಸಾಲದಿಂದ ಮುಕ್ತಿ, ಇತ್ಯಾದಿ.

ಸಾರಾಂಶದಲ್ಲಿ ಜನ ಕೇಳುತ್ತಿರುವುದು ಒಂದು ಘನತೆಯ, ನೆಮ್ಮದಿಯ ಬದುಕನ್ನು ಮಾತ್ರ ಇವಕ್ಕೂ ಸರ್ಕಾರಗಳು ಸ್ಪಂದಿಸದಿದ್ದರೆ ಹೇಗೆ? ಸರ್ಕಾರ ಏನೆಲ್ಲಾ ಮಾಡಬೇಕು ಎಂಬ ದೊಡ್ಡ ಪಟ್ಟಿಯನ್ನೇ ಮುಂದಿಡಬಹುದು. ಅದನ್ನು ನಾವು ಮಾಡುತ್ತಿಲ್ಲ, ಮೊದಲು ಎಲ್ಲಾ ಇಲಾಖೆಗಳಿಗೂ ಆದೇಶ ಕೊಡಿ – ಜನರನ್ನು, ಜನಪರವಾಗಿ ಹೋರಾಡುತ್ತಿರುವವರನ್ನು ಕರೆಸಿ ಸಂವಾದ ಪ್ರಾರಂಭಿಸಲಿ, ಸಾಮಾಜಿಕ ಸಂಘಟನೆಗಳ ಜೊತೆ ಸಮಾಲೋಚಿಸಿ, ಸಮಗ್ರ ತೀರ್ಮಾನಗಳನ್ನು ತೆಗೆದುಕೊಂಡು ಬಿರುಸಿನ ಕೆಲಸ ಪ್ರಾರಂಭಿಸಲಿ, ಆಡಿದಂತೆ ನಡಿಯುತ್ತಿದ್ದೇವೆಯೇ ಎಂದು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳುವ, ಸರ್ಕಾರ ಸಾರ್ವಜನಿಕ ನಗರಾಣಿಗೆ ಒಳಪಡುವ ಒಂದು ಪುಜಾತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿ ಸರ್ಕಾರ ಜನರಿಗೆ ಸ್ಪಂದಿಸಿದರೆ, ಜನ ಸರ್ಕಾರಕ್ಕೆ ಸ್ಪಂದಿಸುತ್ತಾರೆ. 2024ರಲ್ಲಿ ಇದಕ್ಕಿಂತಲೂ ಉತ್ತಮ ಫಲಿತಾಂಶವನ್ನು ನೀಡುತ್ತಾರೆ. ಇಲ್ಲವಾದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ. ಈಗ ಪರ್ಯಾಯವಿಲ್ಲ. ಹಾಗಾಗಿ ಮತ್ತೆ ಅವೇ ದುಷ್ಟ ಶಕ್ತಿಗಳು ಅಧಿಕಾರವನ್ನು ಆವರಿಸಿಕೊಳ್ಳುವ ಅಪಾಯವಿದೆ. ಈ ಅಪಾಯವನ್ನು ತಡೆಯಬೇಕಾದರೆ ಕಾಂಗ್ರೆಸ್ ಮೇಲ್ಕಂಡ ಮೂರು ಅಂಶಗಳ ಕಡೆ ಗಮನ ಹರಿಸಲೇಬೇಕಿದೆ.

ನಾಗರಿಕ ಸಮಾಜದ ದನಿಯಾಗಿ ನಾವು ನಮ್ಮ ಕರ್ತವ್ಯವನ್ನು ಮುಂದುವರೆಸುತ್ತೇವೆ. ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸರ್ಕಾರದ ಸಕರಾತ್ಮಕ ಕೆಲಸಗಳಿಗೆ ಸಹಕಾರವಿರುತ್ತದೆ, ಸರ್ಕಾರದ ನಿರ್ಲಕ್ಷ್ಯತೆಯ ಜೊತೆ ಸಂಘರ್ಷವೂ ಇರುತ್ತದೆ. ಈ ಸಂಬಂಧವನ್ನು ನೀವು ಗೌರವಿಸುತ್ತೀರಿ ಎಂದು ಆಶಿಸುತ್ತೇವೆ.

ಕೊನೆಯದಾಗಿ ನೊಂದು ಬೆಂದಿರುವ ಎಲ್ಲಾ ಜನರ ಪರವಾಗಿ ಒಂದೇ ಒಂದು ಮಾತನ್ನು ಹೇಳ ಬಯಸುತ್ತೇವೆ – “ಸರ್ಕಾರ ನುಡಿದಂತೆ ನಡೆದುಕೊಳ್ಳಲಿ, ಅದರ ಕ್ರಿಯೆಗಳೇ ಅದರ ಮಾತುಗಳಾಗಲಿ ” ಎಂದು ‘ಎದ್ದೇಳು ಕರ್ನಾಟಕ’ ಆಶಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!