Tuesday, May 21, 2024

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶ| ಗೋಹತ್ಯೆ ಮಾಡಿಸಿ ಸಿಕ್ಕಿಬಿದ್ದ ಬಜರಂಗದಳ ಕಾರ್ಯಕರ್ತರು !

ಉತ್ತರ ಪ್ರದೇಶದ ಮೊರಾದಾಬಾದ್‌ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸುವುದಕ್ಕೆ ಹಾಗೂ ಪೊಲೀಸ್ ಅಧಿಕಾರಿಯೋರ್ವರನ್ನು ಹುದ್ದೆಯಿಂದ ಕಿತ್ತೊಗೆಯುವ ಷಡ್ಯಂತ್ರಗೈದಿದ್ದ ಬಜರಂಗದಳದ ಮುಖಂಡರು, ವ್ಯವಸ್ಥಿತವಾಗಿ ಗೋಹತ್ಯೆಗೈದು ಸಿಕ್ಕಿಬಿದ್ದಿರುವ ವಿಚಿತ್ರ ಘಟನೆ ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಮುಖಂಡರ ಸಹಿತ ಒಟ್ಟು ನಾಲ್ವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತರನ್ನು ಮೊರಾದಾಬಾದ್ ಬಜರಂಗದಳದ ಜಿಲ್ಲಾ ಮುಖ್ಯಸ್ಥ ಸುಮಿತ್ ವಿಷ್ಣೋಯ್ ಅಲಿಯಾಸ್ ಮೋನು ಬಜರಂಗಿ, ರಮನ್ ಚೌಧರಿ, ರಾಜೀವ್ ಚೌಧರಿ ಹಾಗೂ ಇವರೊಂದಿಗೆ ಸಹಕರಿಸಿದ್ದ ಸ್ಥಳೀಯ ಶಹಾಬುದ್ದೀನ್ ಎಂಬಾತನನ್ನು ಬಂಧಿಸಿರುವುದಾಗಿ ಮೊರಾದಾಬಾದ್ ಎಸ್‌ಎಸ್‌ಪಿ ಹೇಮರಾಜ್ ಮೀನಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಕರಣದ ಷಡ್ಯಂತ್ರವನ್ನು ಇಂಚಿಂಚಾಗಿ ವಿವರಿಸಿರುವ ಹೇಮರಾಜ್ ಮೀನಾ, “ಪೊಲೀಸ್ ಠಾಣೆಯ ಉಸ್ತುವಾರಿಯನ್ನು ತೆಗೆದುಹಾಕುವ ಉದ್ದೇಶದಿಂದ ಈ ಗ್ಯಾಂಗ್ 15 ದಿನಗಳಲ್ಲಿ ಎರಡು ಸ್ಥಳಗಳಲ್ಲಿ ಗೋಹತ್ಯೆ ಮಾಡಿದೆ. ಬಳಿಕ ಪೊಲೀಸರ ಮೇಲೆ ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯಿಸಿ ಒತ್ತಡ ಹೇರಲು ಬೆಂಬಲಿಗರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿದ್ದರು. ಸದ್ಯ ಪ್ರಕರಣವನ್ನು ಭೇದಿಸಿದಾಗ ಎಲ್ಲ ಷಡ್ಯಂತ್ರಗಳು ಬಯಲಿಗೆ ಬಂದಿದೆ. ನಾಲ್ವರನ್ನು ಬಂಧಿಸಿದ್ದೇವೆ. ಮತ್ತೊಂದೆಡೆ, ಆರೋಪಿಗಳೊಂದಿಗೆ ಶಾಮೀಲಾಗಿದ್ದ ಛಜಲತ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ನರೇಂದ್ರ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಇಲಾಖೆ ತನಿಖೆಗೂ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“>

ಬಜರಂಗದಳ ಮಾಡಿದ್ದ ಷಡ್ಯಂತ್ರ ಏನು?

ಬಜರಂಗದಳದ ಮುಖಂಡರು, ಮುಸ್ಲಿಂ ವ್ಯಕ್ತಿಯೋರ್ವನ ಮೇಲಿದ್ದ ಹಳೆಯ ವೈಷ್ಯಮ್ಯ ಹಾಗೂ ಛಜಲತ್ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಹುದ್ದೆಯಿಂದ ತೆಗೆದುಹಾಕುವ ಷಡ್ಯಂತ್ರ ಹೂಡಿದ್ದರು. ಇದಕ್ಕಾಗಿ ಆರೋಪಿ ಶಹಾಬುದ್ದೀನ್‌ ಎಂಬಾತನನ್ನು ಸಂಪರ್ಕಿಸಿದ್ದಾರೆ. ಅಲ್ಲದೇ, ಎರಡು ಸಾವಿರ ರೂ. ಹಣ ನೀಡಿ ಜ.16ರಂದು ಗೋಹತ್ಯೆ ಮಾಡುವಂತೆ ನಿರ್ದೇಶನ ನೀಡಿದ್ದರು.

ಅದರಂತೆ ನಡೆದುಕೊಂಡ ಆರೋಪಿ ಶಹಾಬುದ್ದೀನ್‌, ಗೋಹತ್ಯೆ ನಡೆಸಿದ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಬಜರಂಗದಳದ ಮುಖಂಡರು, ಸತ್ತು ಬಿದ್ದಿದ್ದ ಗೋವುಗಳ ಫೋಟೋಗಳನ್ನು ತೆಗೆದು ಸೋಷಿಯಲ್ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದರು.

ಛಜಲತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಗೋಹತ್ಯೆಯಾಗುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಗಲ್ಲಿಗೇರಿಸುವಂತೆ ಬಜರಂಗದಳದ ಮುಖಂಡರು ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದರು. ಠಾಣೆಯ ಉಸ್ತುವಾರಿ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಠಾಣೆಯ ಎದುರಿನಲ್ಲಿ ಪ್ರತಿಭಟನೆ ಕೂಡ ನಡೆಸಿ, ಹುದ್ದೆಯಿಂದ ತೆಗೆಯುವಂತೆ ಒತ್ತಡ ಹಾಕಿದ್ದರು.

ಬಳಿಕ ಜ.28 ರಾತ್ರಿ ಚೇತ್ರಂಪುರ ಗ್ರಾಮದ ಕಾಡಿನಲ್ಲಿ ರಾತ್ರಿ ಗೋಹತ್ಯೆ ನಡೆದಿರುವುದಾಗಿ ಆರೋಪಿಸಿದ ಬಜರಂಗದಳದ ಮುಖಂಡರು, ಘಟನಾ ಸ್ಥಳದಿಂದಲೇ ಲೈವ್ ವಿಡಿಯೋ ಮಾಡಿದ್ದರು. ಬಳಿಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದರು. ಮಾಹಿತಿಯನ್ನರಿತ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಕ್ಸೂದ್ ಎಂಬಾತನ ಫೋಟೋ, ಪರ್ಸ್‌ ಪತ್ತೆಯಾಗಿದೆ.

ಬಳಿಕ ಮಕ್ಸೂದ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದಾಗ, ಹಳೆಯ ವೈಷಮ್ಯ ಇರುವುದರಿಂದ ನನ್ನನ್ನು ಸಿಲುಕಿಸಲು ಷಡ್ಯಂತ್ರ ಮಾಡಿರಬಹುದು ಎಂದು ಮಾಹಿತಿ ನೀಡಿದ್ದರು. ವೈಷಮ್ಯದ ಹಿನ್ನೆಲೆಯನ್ನು ಅರಿತ ಪೊಲೀಸರು, ಮೊಬೈಲ್ ಲೊಕೇಶನ್ ಆಧಾರದ ಮೇಲೆ ಶಹಾಬುದ್ದೀನ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ತನಿಖೆಯ ವೇಳೆ ಶಹಾಬುದ್ದೀನ್‌ ಎಲ್ಲ ವಿವರಗಳನ್ನು ತಿಳಿಸಿದ್ದಾನೆ. ಈ ವೇಳೆ ಬಜರಂಗದಳದ ಮುಖಂಡರ ಷಡ್ಯಂತ್ರ ಬಯಲಾಗಿದೆ.

ಬಜರಂಗದಳದ ಮುಖಂಡರ ನಡೆಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ರಚಿಸಿದ್ದ ಪೊಲೀಸರು, ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

“ಬಜರಂಗದಳದ ಮುಖಂಡರ ಸೂಚನೆಯ ಮೇರೆಗೆ ಜನವರಿ 28ರಂದು ರಾತ್ರಿ ಆರೋಪಿಗಳಲ್ಲೋರ್ವನಾದ ಶಹಾಬುದ್ದೀನ್ ಎಂಬಾತ ಮತ್ತೊಬ್ಬ ಸಹಚರ ಜಮ್‌ಶೆಡ್ ಎಂಬಾತನ ಜತೆಗೂಡಿ ಚೇತ್ರಂಪುರ ಗ್ರಾಮದ ಕಮಲಾದೇವಿ ಎಂಬುವವರ ಮನೆಯ ಹೊರಗೆ ಕಟ್ಟಿ ಹಾಕಲಾಗಿದ್ದ ಹಸುವನ್ನು ಕಳವು ಮಾಡಿದ್ದ. ಇದಾದ ಬಳಿಕ ಇಬ್ಬರೂ ಕಾಡಿಗೆ ಹೋಗಿ ಕೊಂದು ಹಾಕಿ, ಅಲ್ಲಿಂದ ತೆರಳಿದ್ದ. ಆ ಬಳಿಕ ಬಜರಂಗದಳದವರಿಗೆ ಮಾಹಿತಿ ನೀಡಿದ್ದ” ಎಂದು ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ.

“>

ಈ ಪ್ರಕರಣದಲ್ಲಿ ಬಜರಂಗದಳ ಜಿಲ್ಲಾಧ್ಯಕ್ಷ ಸುಮಿತ್ ವಿಷ್ಣೋಯ್ ಸೇರಿದಂತೆ ಈವರೆಗೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಎಲ್ಲರನ್ನೂ ಜೈಲಿಗೆ ಕಳುಹಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತಂಡ ರಚಿಸಲಾಗಿದೆ ಎಂದು ಮೊರಾದಾಬಾದ್ ಎಸ್‌ಎಸ್‌ಪಿ ತಿಳಿಸಿದ್ದಾರೆ.

ಆರೋಪಿಗಳೊಂದಿಗೆ ಶಾಮೀಲಾಗಿದ್ದ ಪೊಲೀಸ್ ಇನ್ಸ್‌ ಪೆಕ್ಟರ್

ವಿಶೇಷ ಪೊಲೀಸರ ತನಿಖೆಯ ವೇಳೆ ಛಜಲತ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ನರೇಂದ್ರ ಕುಮಾರ್ ಅವರು ಆರೋಪಿಗಳೊಂದಿಗೆ ಸಹಕರಿಸಿರುವುದು ಬಯಲಾಗಿದೆ.

“ಇನ್ಸ್ ಪೆಕ್ಟರ್ ಕೂಡ ಆರೋಪಿಗಳನ್ನು ಭೇಟಿಯಾಗಿರುವುದು ಬೆಳಕಿಗೆ ಬಂದಿದೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಆರೋಪಿಗಳ ಕಾಲ್ ರೆಕಾರ್ಡ್‌ನಲ್ಲಿ ಸಬ್ ಇನ್ಸ್‌ಪೆಕ್ಟ‌ರ್ ಅವರ ಮೊಬೈಲ್ ನಂಬರ್ ಸಂಖ್ಯೆ ಕಾಣಿಸಿಕೊಂಡ ಬಳಿಕ ತನಿಖೆ ನಡೆಸಿದೆವು. ಈ ವೇಳೆ ಸಬ್ ಇನ್ಸ್‌ಪೆಕ್ಟ‌ರ್ ಆರೋಪಿಗಳೊಂದಿಗೆ ಶಾಮೀಲಾಗಿರುವುದು ಕಂಡುಬಂದಿದೆ. ಪೊಲೀಸರ ಪ್ರತಿಯೊಂದು ನಡೆಯ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನರೇಂದ್ರ ಕುಮಾ‌ರ್ ಅವರನ್ನು ಅಮಾನತು ಮಾಡಲಾಗಿದೆ. ಇಲಾಖಾ ತನಿಖೆಗೂ ಆದೇಶಿಸಲಾಗಿದೆ” ಎಂದು ಎಸ್‌ಎಸ್‌ಪಿ ಹೇಮರಾಜ್ ಮೀನಾ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!