Monday, May 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿಶ್ವಗುರು ಬಸವೇಶ್ವರರ ಪುತ್ಥಳಿ ಸ್ಥಾಪನೆ ಮನವಿ

ಪ್ರಜಾಪ್ರಭುತ್ವ ವ್ಯವಸ್ಥೆಗೆ ಹನ್ನೆರಡನೇ ಶತಮಾನದಲ್ಲೇ ಭದ್ರಬುನಾದಿ ಹಾಕಿ ಅನುಭವಮಂಟಪದ ಮೂಲಕ ಎಲ್ಲಾ ಜಾತಿ, ವರ್ಗದವರಿಗೂ ಸಮಾನತೆಯನ್ನು ಕಲ್ಪಿಸಿದ ವಿಶ್ವಗುರು ಬಸವೇಶ್ವರರ ಅಶ್ವರೂಢ ಪುತ್ಥಳಿಯನ್ನು  ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಉದ್ಯಾನವನದಲ್ಲಿ ಸ್ಥಾಪಿಸಬೇಕೆಂದು ಲಿಂಗಾಯತ ಮಹಾಸಭಾ ಟ್ರಸ್ಟ್ ಪದಾಧಿಕಾರಿಗಳು ಸೋಮವಾರ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು.

ಲಿಂಗಪಟ್ಟಣದ ಶ್ರೀಗುರುಬಸವ ಮಂಟಪದ ಓಂಕಾರೇಶ್ವರಸ್ವಾಮೀಜಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಮಹಾಸಭೆಯ ಮುಖಂಡರು,  ಕಾಯಕವೇ ಕೈಲಾಸವೆಂದು ಜಗತ್ತಿಗೆ ಸಾರಿದ ಬಸವಣ್ಣನವರ ಅಶ್ವಾರೂಢ ಪುತ್ಥಳಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸ್ಥಾಪಿಸಬೇಕೆಂಬ ಜಿಲ್ಲೆಯ ಜನತೆಯ ಬಹುದಿನಗಳ ಒತ್ತಾಯ ಇದುವರೆಗೂ ಬೇಡಿಕೆಯಾಗಿಯೇ ಉಳಿದಿದ್ದು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಸಾಮಾಜಿಕಕ್ರಾಂತಿಗೆ ಮುನ್ನುಡಿ ಬರೆದು ಸಮಾನತೆ, ದಾಸೋಹ, ವಚನಸಾಹಿತ್ಯ, ಶರಣತತ್ವ ಸಿದ್ದಾಂತಗಳ ಮೂಲಕ ಸೌಹಾರ್ಧಯುತ ಸಮಾಜವನ್ನು ನಿರ್ಮಾಣ ಮಾಡಿದ ಕ್ರಾಂತಿಪುರುಷ, ಮಹಾಮಾನವತಾವಾದಿ ಬಸವೇಶ್ವರರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಅಣ್ಣನವರ ವಿಚಾರಧಾರೆಗಳನ್ನು ಭವಿಷ್ಯದ ಪೀಳಿಗೆಗೆ ಪರಿಚಯಿಸುವ ಮಹತ್ತರ ಕಾಯಕಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಆಗ್ರಹಿಸಿದರು.

ಬಸವಣ್ಣವರ ಪುತ್ಥಳಿ ಸ್ಥಾಪಿಸಲು ಮಂಡ್ಯ ನಗರಸಭೆ ಕಳೆದ ಕೆಲ ತಿಂಗಳ ಹಿಂದೆ ನಗರಸಭೆಯ ಸರ್ವ ಸದಸ್ಯರು ನಿರ್ಣಯವನ್ನು ಸಹ ಕೈಗೊಂಡಿದ್ದಾರೆ. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಪ್ರಗತಿ ಕಾಣದಿರುವುದು ವಿಷಾದನೀಯ ಎಂದು ಮಹಾಸಭೆಯ ಅಧ್ಯಕ್ಷ ಎಂ.ಬೆಟ್ಟಹಳ್ಳಿ ಎಂ.ಎಸ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಮಹಾಸಭೆಯ ಕಾರ್ಯದರ್ಶಿ ಬಿದರಹಳ್ಳಿ ನಿರಂಜನ್, ಪದಾಧಿಕಾರಿಗಳಾದ ವದೇಸಮುದ್ರ, ಸೋಮಶೇಖರ್, ನಾಗಮಂಗಲ ಮಲ್ಲಿಕಾರ್ಜುನ್, ಗೌಡಗೆರೆ ಕುಮಾರ್, ಬೇಬಿ ಗಿರೀಶ್, ಹುಲಿವಾನ ಚೇತನ್‌ಕುಮಾರ್, ಹುಲಿಕೆರೆಕೊಪ್ಪಲು ಮಲ್ಲೇಶ್, ಆನವಾಳು ವಿಶ್ವನಾಥ್, ಮಹೇಶ್ ಮದ್ದೂರು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!