Sunday, May 19, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ

ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಗೆ ನಾಗಮಂಗಲದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಎರಡು ದಿನಗಳಲ್ಲೂ ಮೂವತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ ಉತ್ಸಾಹದಿಂದ ನಡೆದರು.

ಭಾರತ್ ಜೋಡೋ ಯಾತ್ರೆ ಗುರುವಾರ ರಾತ್ರಿ ವಾಸ್ತವ್ಯ ಹೂಡಿದ್ದ ಬೀದರ್- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಚೆನ್ನಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ರಾಹುಲ್ ಗಾಂಧಿಯವರು ಪಾದಯಾತ್ರೆ ಆರಂಭಿಸಿದರು.

ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿಯಿಂದ ಇಂದು ಬೆಳಗ್ಗೆ 7ಗಂಟೆಗೆ ಆರಂಭಗೊಂಡ 2ನೇ ದಿನದ ಪಾದಯಾತ್ರೆಗೆ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ರಾಹುಲ್ ಗಾಂಧಿಯವರಿಗೆ ಆರತಿ ಎತ್ತಿ ಪೂರ್ಣಕುಂಭ ಸ್ವಾಗತ ನೀಡಿದರು.

ಅಭಿಮಾನಿಗಳ ಹರ್ಷ
ನಾಗಮಂಗಲ ಪಟ್ಟಣ ಪ್ರವೇಶಿಸಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಹರ್ಷದಿಂದ ಜೈಕಾರ ಹಾಕಿದರು.ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತು ಕಾಂಗ್ರೆಸ್ ಅಭಿಮಾನಿಗಳು ರಾಹುಲ್ ಗಾಂಧಿಯವರನ್ನು ರಾಹುಲ್ ಗೌಡ ಎಂದು ಕರೆದಾಗ ಕಾರ್ಯಕರ್ತರು ಚಪ್ಪಾಳೆ, ಶಿಳ್ಳೆ ಹಾಕಿ ಅಭಿಮಾನ ಮೆರೆದರು.

ಟಿ.ಬಿ.ಬಡಾವಣೆಯ ಬಿ.ಜಿ.ಎಸ್ ವೃತ್ತದ ಸನಿಹ ರಸ್ತೆಯ ಪಕ್ಕ ನಿಂತಿದ್ದ ಬಾಲಕಿಯರನ್ನು ಬಳಿಗೆ ಕರೆದು ಅವರೊಂದಿಗೆ ರಾಹುಲ್ ಗಾಂಧಿಯವರು ಸ್ವಲ್ಪದೂರ ಹೆಜ್ಜೆ ಹಾಕಿದರು. ಬಿಜಿಎಸ್ ವೃತ್ತದಲ್ಲಿ ವಕೀಲರ ತಂಡವು ನೀಡಿದ ಟಿಪ್ಪು, ಬುದ್ದ ಫೋಟೋ ಮತ್ತು ಪುಸ್ತಕ ಸ್ವೀಕರಿಸಿದ ರಾಹುಲ್ ಗಾಂಧಿಯವರು ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಕೈಬೀಸಿದ ಮಹಿಳೆಯರು ಮತ್ತು ಮಕ್ಕಳಿಗೆ ಪ್ರತಿಯಾಗಿ ರಾಹುಲ್ ಗಾಂಧಿ ಕೂಡ ಸಂತಸದಿಂದ ಕೈಬೀಸಿದರು.

ಮಗು ಎತ್ತಿ ಮುದ್ದಾಡಿದರು

ಅಂಚೆ ಚಿಟ್ಟನಹಳ್ಳಿ ಗ್ರಾಮದ ಬಳಿ ರಾಹುಲ್ ನೋಡಲು ಹೆದ್ದಾರಿ ಪಕ್ಕದಲ್ಲಿ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯಿಂದ ರಾಹುಲ್ ಗಾಂಧಿ ಮಗುವನ್ನು ಎತ್ತಿಕೊಂಡು ಫೋಟೋಗೆ ಫೋಸ್ ನೀಡಿದರು. ಕಾದು ನಿಂತ ಮಹಿಳೆಯರು ಭಾರತ್ ಐಕ್ಯತಾ ಯಾತ್ರೆ ಆಗಮನದ ವೇಳೆ ರಾಹುಲ್ ನೋಡಲು ತೊಳಲಿ ಗ್ರಾಮದ ಮಹಿಳೆಯರು ರಸ್ತೆ ಪಕ್ಕದಲ್ಲಿ ಕಾಯುತ್ತಾ ನಿಂತಿದ್ದರು. ಅವರ ಬಳಿಗೆ ಬಂದ ರಾಹುಲ್ ನಗುತ್ತಾ ಎಲ್ಲರಿಗೂ ಕೈ ಮುಗಿದರು.

ಚೌಡೇನಹಳ್ಳಿ ಬಳಿ ದಲಿತ ಸಂಘರ್ಷ ಸಮಿತಿಯ ಮುಖಂಡರೊಂದಿಗೆ ನಿಂತಿದ್ದ ಹಿರಿಯ ದಲಿತ ಮುಖಂಡ ನಾಗರಾಜಯ್ಯ ಅವರನ್ನು ಬಳಿಗೆ ಕರೆದು ಹೆಗಲ ಮೇಲೆ ಕೈಹಾಕಿ ಕಿ.ಮೀ ಗಟ್ಟಲೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.

ಪಾದಯಾತ್ರೆಯಲ್ಲಿ ಡೊಳ್ಳುಕುಣಿತ, ಪೂಜಾ ಕುಣಿತದೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.

ರಾಹುಲ್ ಗಾಂಧಿ ಜೊತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್, ಕೇಂದ್ರದ ಮಾಜಿ ಕಾನೂನು ಸಚಿವ ಜೈರಾಮ್ ರಮೇಶ್, ಶಾಸಕರಾದ ರಿಜ್ವಾನ್ ಹರ್ಷದ್, ಅಂಜಲಿ ನಿಂಬಾಳ್ಕರ್, ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರ ಸ್ವಾಮಿ, ಉಮಾಶ್ರೀ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಘುವೀರ್ ಗೌಡ, ಸಚ್ಚಿನ್ ಚಲುವರಾಯಸ್ವಾಮಿ, ಸುನೀಲ್ ಲಕ್ಷ್ಮೀಕಾಂತ್, ಕೆಪಿಸಿಸಿ ಸದಸ್ಯ ಕೊಣನೂರು ಹನುಮಂತು, ಮಹಿಳಾ ಕಾಂಗ್ರೆಸ್ ಮುಖಂಡೆ ಗೀತಾ ದಾಸೇಗೌಡ ಮತ್ತಿತರರು ಹೆಜ್ಜೆ ಹಾಕಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!