Saturday, May 18, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ವ್ಯಕ್ತಿತ್ವ ಕುಬ್ಜಗೊಳಿಸಲು ಸಾಧ್ಯವಿಲ್ಲ

ರಾಹುಲ್ ಗಾಂಧಿಯವರು ದೇಶದ ಜನರ ನೋವು ತಿಳಿದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರದ್ದು ಬಹುದೊಡ್ಡ ವ್ಯಕ್ತಿತ್ವ. ಬಿಜೆಪಿಯವರು ಅವರ ವ್ಯಕ್ತಿತ್ವವನ್ನು ಕುಬ್ಜ ಗೊಳಿಸುವುದಾಗಲಿ ತೇಜೋವಧೆ ಮಾಡುವುದಾಗಲಿ ಎಂದಿಗೂ ಸಾಧ್ಯವಿಲ್ಲ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ತಿಳಿಸಿದರು.

ನಾಗಮಂಗಲ ತಾಲೂಕಿನ ಅಂಚೆ ಚಿಟ್ಟನಹಳ್ಳಿ ಬಳಿ ಭಾರತ್ ಜೋಡೋ ಯಾತ್ರೆಯ ಬಿಡುವಿನ ಸಂದರ್ಭದಲ್ಲಿ ನುಡಿ ಕರ್ನಾಟಕ.ಕಾಮ್ ಜೊತೆ ಅವರು ಮಾತನಾಡಿದರು.

ಬಿಜೆಪಿಗೆ ಉರಿ

ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಗೆ ಇಂದಿಗೆ ಒಂದು ತಿಂಗಳು ತುಂಬಿದೆ. ಯಾತ್ರೆಯ ಯಶಸ್ಸನ್ನು ತಡೆದುಕೊಳ್ಳಲಾರದ ಬಿಜೆಪಿ ಪಕ್ಷ ಉರಿ ತಾಳಲಾರದೆ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಿದೆ. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಅವರ ವ್ಯಕ್ತಿತ್ವವನ್ನು ತೇಜೋವಧೆ ಮಾಡುವ ಹೀನ ಕೆಲಸಕ್ಕೆ ಕೈ ಹಾಕಿದೆ. ರಾಹುಲ್ ಗಾಂಧಿಯವರದ್ದು ತ್ಯಾಗಮಯಿ ಪರಿವಾರ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಎರಡು ಬಾರಿ ಈ ದೇಶದ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅವರು ಅದನ್ನು ತ್ಯಾಗ ಮಾಡುವ ಮೂಲಕ ದೊಡ್ಡ ವ್ಯಕ್ತಿಯಾದರು ಎಂದರು.

ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ಕೆಲವು ಆರ್ ಎಸ್ ಎಸ್ ಗಿರಾಕಿಗಳು ಸುಳ್ಳಿನ ಕಾರ್ಖಾನೆಯ ಮೂಲಕ, ವಾಟ್ಸಪ್ ಯೂನಿವರ್ಸಿಟಿಯ ಮೂಲಕ ಎಷ್ಟೇ ಸುಳ್ಳುಗಳನ್ನು ಹೇಳಿದರೂ ದೇಶದ ಜನ ಸತ್ಯವನ್ನು ತಿಳಿದಿದ್ದಾರೆ. ದೇಶದ ಬೆಳವಣಿಗೆ ಅಭಿವೃದ್ಧಿಗೆ ಏನೊಂದು ಕೊಡುಗೆ ಕೊಡದ ಬಿಜೆಪಿ ರಾಹುಲ್ ಗಾಂಧಿಯವರ ವ್ಯಕ್ತಿತ್ವದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ ಎಂದರು.

ಶಾಂತಿ ಕದಡುವ ಪ್ರಯತ್ನ

ಈ ದೇಶದಲ್ಲಿ ಧರ್ಮ- ಧರ್ಮಗಳನ್ನು ನಡುವೆ ವಿಷಬೀಜ ಬಿತ್ತಿ ಅವುಗಳನ್ನು ಒಡೆದು ಶಾಂತಿ ಕದಡುವ ಪ್ರಯತ್ನವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಬೆಲೆ ಏರಿಕೆ ಆಕಾಶಕ್ಕೆ ಮುಟ್ಟಿದೆ, ನೋಟ್ ಬ್ಯಾನ್, ಅಸಮರ್ಪಕ ಜಿಎಸ್‌ಟಿ, ಕೊರೋನಾ ಒಂದು ಮತ್ತು ಎರಡನೇ ಅಲೆಗಳ ನಂತರ ಜನರ ಬಳಿ ದುಡ್ಡಿಲ್ಲದಂತಾಗಿದೆ. ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಇವರ ಸಮಸ್ಯೆಗಳನ್ನು ಬಗೆಹರಿಸದ ಬಿಜೆಪಿ ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚಿ ದ್ವೇಷ ಹರಡುವ ಪ್ರಯತ್ನ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿಯವರು ದೇಶದ ಜನರಲ್ಲಿ ಸಾಮರಸ್ಯ ಮೂಡಿಸುತ್ತಾ ಜನರನ್ನು ಒಂದುಗೂಡಿಸಲು ಐಕ್ಯತೆಯಾತ್ರೆ ಮಾಡುತ್ತಿದ್ದಾರೆ ಎಂದರು.

40% ಸರ್ಕಾರ

ರಾಜ್ಯ ಸರ್ಕಾರ 40% ಕಮಿಷನ್ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರೇ 40% ಸರ್ಕಾರ ಎಂದು ಆರೋಪಿಸಿ ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ನೇರವಾಗಿ ಬಿಜೆಪಿ ನಾಯಕರು ಹಣ ಪಡೆದಿದ್ದಾರೆ. ಹಗರಣದ ಬಗ್ಗೆ ಸಾಕಷ್ಟು ಆಡಿಯೋ, ವಿಡಿಯೋಗಳು ಬಹಿರಂಗವಾಗಿದೆ. 40 ಪರ್ಸೆಂಟ್ ಕೊಡಲಾಗದೆ ಅವರ ಪಕ್ಷದ ಕಾರ್ಯಕರ್ತನೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಾಗ್ದಾಳಿ ನಡೆಸಿದರು.

ಅಧಿಕಾರ ಖಚಿತ

ರಾಹುಲ್ ಗಾಂಧಿಯವರ ಐಕ್ಯತಾ ಯಾತ್ರೆಗೆ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ರಾಹುಲ್ ಗಾಂಧಿಯವರು ಯಾತ್ರೆಯ ಸಂದರ್ಭದಲ್ಲಿ ರೈತರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಯುವಕರು ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸುವ ಪ್ರಯತ್ನದ ಬಗ್ಗೆ ಮಾತನಾಡುತ್ತಿದ್ದಾರೆ. ಜನರ ನೋವು ತಿಳಿದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರು ಕೊರೋನಾ ದುಷ್ಪರಿಣಾಮದ ಬಗ್ಗೆ ಮೊದಲೇ ಹೇಳಿದ್ದರು. ಬೆಲೆ ಏರಿಕೆ, ಲಾಕ್ ಡೌನ್, ಆರ್ಥಿಕ ವ್ಯವಸ್ಥೆ ಹಾಳು, ರೈತ ವಿರೋಧಿ ಕಾಯ್ದೆಗಳು ಮಾರಕವಾಗುತ್ತದೆ ಎಂದು ಮೊದಲೇ ಹೇಳಿಕೆ ನೀಡಿದ್ದರು. ಅವೆಲ್ಲವೂ ನಿಜವಾಗಿದೆ, ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸಲು ಬರುವುದಿಲ್ಲ ಎಂದು ಕಿಡಿಕಾರಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!