Saturday, May 18, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯೊಳಗಿನ ಬೆಂಕಿಗೆ ತುಪ್ಪ ಸುರಿಯುತ್ತಿದೆಯೇ ಜೆಡಿಎಸ್?

✍️ ಮಾಚಯ್ಯ ಎಂ ಹಿಪ್ಪರಗಿ

ಇಂತದ್ದೊಂದು ಸಾಧ್ಯತೆಯ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ನಿನ್ನೆಯಷ್ಟೇ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಸಚಿವ ಅರ್ಜುನ್ ಮುಂಡಾ, ಇಲ್ಲಿನ ಯಾವೊಬ್ಬ ರಾಜ್ಯ ನಾಯಕರನ್ನೂ ಭೇಟಿಯಾಗದೆ ನೇರವಾಗಿ ದೇವೇಗೌಡರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು ಈ ನಿಟ್ಟಿನಲ್ಲಿ ಗಮನ ಸೆಳೆಯುತ್ತದೆ. ಯಾಕೆಂದರೆ ಅವರು ಬಂದದ್ದು, ಕುಮಾರಸ್ವಾಮಿಯವರನ್ನು ಜನವರಿ 15ಕ್ಕೆ ದೆಹಲಿಗೆ ಬರುವಂತೆ ಆಹ್ವಾನ ನೀಡಲು! ಮುಂಡಾ ಮೂಲಕ ಈ ಆಹ್ವಾನ ಕಳಿಸಿದ್ದು ಮೋದಿ-ಶಾ ಜೋಡಿ!! ರಾಜ್ಯ ಬಿಜೆಪಿ ನಾಯಕರ ಮೂಲಕವೇ ಹೈಕಮಾಂಡ್ ಜೆಡಿಎಸ್ ನಾಯಕರಿಗೆ ಈ ಸಂದೇಶ ತಲುಪಿಸಬಹುದಿತ್ತು. ಆದರೆ, ರಾಜ್ಯ ನಾಯಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇಂದ್ರ ಮಂತ್ರಿಯನ್ನೇ ಜೆಡಿಎಸ್ ಮನೆ ಬಾಗಿಲಿಗೆ ಕಳಿಸುತ್ತಾರೆಂದರೆ, ಜೆಡಿಎಸ್ ಮೈತ್ರಿಯ ನಂತರ ಸ್ಥಳೀಯ ಬಿಜೆಪಿಗರನ್ನು ಹೈಕಮಾಂಡ್ ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂಬುದು ಸಾಬೀತಾಗುತ್ತದೆ.

ಅದಕ್ಕೆ ತಕ್ಕಂತೆ ಜೆಡಿಎಸ್ ಕೂಡಾ, ಈ ಸಂದರ್ಭದ ಲಾಭ ಪಡೆದು ರಾಜ್ಯ ಬಿಜೆಪಿಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುವ ತಂತ್ರಗಾರಿಕೆಗೆ ಮುಂದಾಗಿದೆ. ವಿ. ಸೋಮಣ್ಣ, ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡು ಬಿಜೆಪಿಯಿಂದ ಹೊರಹೋಗುವ ಮಾತನ್ನಾಡುತ್ತಿರುವುದು ಹೊಸ ಸಂಗತಿಯೇನಲ್ಲ. ಇದುವರೆಗೂ ಅವರನ್ನು ಸಮಾಧಾನ ಮಾಡುವ ಯಾವ ಪ್ರಯತ್ನಗಳೂ ರಾಜ್ಯಮಟ್ಟದಲ್ಲಿ ನಡೆದಿಲ್ಲ. ಆ ಸಾಹಸಕ್ಕೆ ದೇವೇಗೌಡರು ಮುಂದಾಗಿದ್ದು, ’ಸೋಮಣ್ಣ ಬಿಜೆಪಿಯಲ್ಲಿ ಇರಬೇಕು, ಅವರ ಜೊತೆ ನಾನು ಮಾತುಕತೆ ನಡೆಸುತ್ತೇನೆ’ ಎಂಬ ಹೇಳಿಕೆ ನೀಡಿದ್ದಾರೆ. ಬಿಜೆಪಿ ಜೊತೆ ಮೈತ್ರಿಯಾಗಿರಬಹುದು, ಆದರೆ ಇದು ಅವರ ಪಕ್ಷದ ವಿಚಾರವಲ್ಲ. ಆದಾಗ್ಯೂ, ದೇವೇಗೌಡರು ಬಿಜೆಪಿಯೊಳಗೆ ಹಸ್ತಕ್ಷೇಪಕ್ಕೆ ಮುಂದಾಗಿದ್ದಾರೆ. ಆ ಮೂಲಕ ಮೈತ್ರಿಯನ್ನು ಪರೋಕ್ಷವಾಗಿ ವಿರೋಧಿಸುತ್ತಿರುವ ಯಡಿಯೂರಪ್ಪನವರ ವಿರುದ್ಧ ದಾಳ ಉರುಳಿಸಲು ಜೆಡಿಎಸ್ ಯತ್ನಿಸುತ್ತಿದೆ.

ಹೇಳಿಕೇಳಿ, ಸೋಮಣ್ಣ ಯಡಿಯೂರಪ್ಪನವರ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡವರು. ಲಿಂಗಾಯತ ನಾಯಕತ್ವದಲ್ಲೇ ಒಡಕು ತಂದಿಟ್ಟು, ಆ ಮೂಲಕ ಬಿಜೆಪಿ ಮೇಲೆ ಯಡಿಯೂರಪ್ಪನವರ ಕುಟುಂಬಕ್ಕಿರುವ ಹಿಡಿತವನ್ನು ಸಡಿಲಗೊಳಿಸಿದರೆ, ಭವಿಷ್ಯದಲ್ಲಿ ಬಿಜೆಪಿಯನ್ನು ತನ್ನ ಮೂಗಿನ ನೇರಕ್ಕೆ ಬಗ್ಗಿಸಿಕೊಳ್ಳಬಹುದೆಂಬ ಇರಾದೆ ದೇವೇಗೌಡ-ಕುಮಾರಸ್ವಾಮಿಯವರಿಗೆ ಇದ್ದರೂ ಇರಬಹುದು. ಅದರ ಭಾಗವಾಗಿಯೇ ಆ ಹೇಳಿಕೆ ಹೊರಬಂದಿದೆ. ಆಶ್ಚರ್ಯವೆಂದರೆ, ತಮ್ಮ ಪಕ್ಷದ ಆಂತರಿಕ ವಿಚಾರಕ್ಕೆ ಹೀಗೆ ಮೂಗು ತೂರಿಸಬೇಡಿ ಎಂದು ಇದುವರೆಗೆ ಯಾವೊಬ್ಬ ರಾಜ್ಯ ನಾಯಕನಾಗಲಿ, ಹೈಕಮಾಂಡ್ ವರಿಷ್ಠರಾಗಲಿ ಪ್ರತಿಹೇಳಿಕೆ ನೀಡಿಲ್ಲ. ಬದಲಿಗೆ, ಆ ಹೇಳಿಕೆಯ ಬೆನ್ನಲ್ಲೇ ಕೇಂದ್ರ ಮಂತ್ರಿಯನ್ನೇ ಗೌಡರ ಮನೆಗೆ ಕಳಿಸಿ, ಬಿಜೆಪಿ ಹೈಕಮಾಂಡ್ ಅವರಿಗೆ ಮಣೆ ಹಾಕಿದೆ. ಇದು ರಾಜ್ಯ ನಾಯಕರ ಉರಿ ಹೆಚ್ಚಿಸದೇ ಇದ್ದೀತಾ?

ಇಷ್ಟೇ ಅಲ್ಲ, ಮೈತ್ರಿ ಮತ್ತು ಸೀಟು ಹಂಚಿಕೆಯ ವಿಚಾರವಾಗಿ ದೇವೇಗೌಡರ ಕುಟುಂಬ ಗೋವಾದ ಸಿಎಂ ಸಾವಂತ್‌ರ ಮೂಲಕ ನೇರವಾಗಿ ಹೈಕಮಾಂಡನ್ನು ಎಡತಾಕುತ್ತಿದೆಯೇ ವಿನಾ, ರಾಜ್ಯ ನಾಯಕರ ಜೊತೆ ಒಂದೇಒಂದು ಗಂಭೀರ ಚರ್ಚೆ ನಡೆಸಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ, ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ರಾಜ್ಯ ಬಿಜೆಪಿ ನಾಯಕರು ಮತ್ತು ಪಕ್ಷದ ಹೈಕಮಾಂಡ್ ನಡುವೆ ಸೃಷ್ಟಿಯಾಗಿರುವ ಕಂದಕವನ್ನು ಜೆಡಿಎಸ್ ಮತ್ತಷ್ಟು ಹಿರಿದು ಮಾಡುವ ಯತ್ನದಲ್ಲಿದೆಯೇ ಎಂಬ ಗುಮಾನಿ ಮೂಡುತ್ತದೆ. ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಕೂಲಂಕಷವಾಗಿ ಗಮನಿಸಿದರೆ ಇದು ನಿಜ ಅನ್ನಿಸದಿರದು.

ಹೈಕಮಾಂಡ್ ಮತ್ತು ರಾಜ್ಯ ಬಿಜೆಪಿ ನಾಯಕರ ನಡುವೆ ಈಗ ಸಂಬಂಧ ಹೇಗಿದೆಯೆಂದರೆ, ದಿಲ್ಲಿಗೆ ಹೋದರೂ ವರಿಷ್ಠರ ಭೇಟಿಗೆ ದಿನಗಟ್ಟಲೇ ಕಾದು, ಬರಿಗೈಲಿ ವಾಪಾಸು ಬರಬೇಕಾಗಿದೆ. ಈಗಾಗಲೇ ಬಸವರಾಜ ಬೊಮ್ಮಾಯಿ, ಸದಾನಂದ ಗೌಡರಂತಹ ಮಾಜಿ ಮುಖ್ಯಮಂತ್ರಿಗಳೇ ಈ ಅವಮಾನ ಅನುಭವಿಸಿದ್ದಾರೆ. ಮೋದಿ-ಶಾ ಯಾರನ್ನೂ ಹತ್ತಿರಕ್ಕೆ ಸೇರಿಸುತ್ತಿಲ್ಲ. ಗರಿಷ್ಠವೆಂದರೆ, ನಾಮಕಾವಸ್ಥೆ ಅಧ್ಯಕ್ಷ ನಡ್ಡಾರ ಮುಂದೆ ತಮ್ಮ ಅಳಲು ತೋಡಿಕೊಳ್ಳಬಹುದಷ್ಟೆ. ಅಂತದ್ದರಲ್ಲಿ ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಮೋದಿ-ಶಾ ಸಲೀಸಾಗಿ ಭೇಟಿಯಾಗಿ, ಖುಷಿಯಾಗಿ ಫೋಟೊ ತೆಗೆಸಿಕೊಂಡು, ಗೌರವದಿಂದ ಚರ್ಚಿಸಿ ಕಳಿಸುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಯಡಿಯೂರಪ್ಪನವರನ್ನೂ ಒಳಗೊಂಡು ಯಾವೊಬ್ಬ ರಾಜ್ಯ ನಾಯಕನ ಜೊತೆ ಮೋದಿ-ಶಾ ಅಷ್ಟು ಆತ್ಮೀಯತೆಯಿಂದ ತೆಗೆಸಿಕೊಂಡ ಒಂದೇಒಂದು ಫೋಟೊ ಸಿಗಲಾರದು. ಒಂದುಕಡೆ ತನ್ನದೇ ಪಕ್ಷದ ನಾಯಕರನ್ನು ದೂರ ಇಟ್ಟು, ಜೆಡಿಎಸ್ ನಾಯಕರಿಗೆ ವರಿಷ್ಠರು ಮಣೆ ಹಾಕುತ್ತಿರೋದು ರಾಜ್ಯ ನಾಯಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಇದನ್ನು ಬಿಜೆಪಿ ಮೂಲಗಳೇ ಖಚಿತಪಡಿಸುತ್ತಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!