Saturday, May 18, 2024

ಪ್ರಾಯೋಗಿಕ ಆವೃತ್ತಿ

ಬೋವಿ ಜನಾಂಗದವರ ಸ್ಮಶಾನ ಬಳಕೆಗೆ ಮೇಲ್ಜಾತಿಯವರ ಅಡ್ಡಿ

ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಬೋವಿ ಜನಾಂಗವು ಸುಮಾರು 80 ವರ್ಷಗಳಿಂದ ಶವಸಂಸ್ಕಾರಕ್ಕಾಗಿ ಸ್ಮಶಾನವಾಗಿ ಉಪಯೋಗಿಸುತ್ತಿದ್ದ 1 ಎಕರೆ ಸರ್ಕಾರಿ ಜಮೀನನ್ನು ಬಳಕೆ ಮಾಡಲು ಮೇಲ್ಜಾತಿಯ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆಂದು ಭಾರತೀಯ ಭೋವಿ ಜನಾಂಗ ಪರಿಷತ್ ನ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾಗವನ್ನು ಮೇಲ್ಜಾತಿಯ ಪುಟ್ಟರಾಮು ಹಾಗೂ ಅವರ ಮಗ ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸಿ ಮುಳ್ಳು ತಂತಿ ಬೇಲಿಯನ್ನು ಹಾಕುತ್ತಿದ್ದಾಗ, ತಡೆಯಲು ಹೋದ ಭೋವಿ ಜನಾಂಗದವರನ್ನು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿದರು.

ಕ್ಯಾತನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಭೋವಿ ಜನಾಂಗದವರು, ಸರ್ವೆ ನಂ.66ರ ಜಮೀನಿನ ಪಕ್ಕದ ಸರ್ಕಾರಿ ಜಾಗದಲ್ಲಿ, ಹಿಂದಿನಿಂದಲೂ ಇಲ್ಲಿಯವರೆಗೆ ಶವ ಸಂಸ್ಕಾರ ಮಾಡುತ್ತಿದ್ದೇವೆ, ಕಂದಾಯ ಇಲಾಖೆಯಿಂದ ಆಗಲಿ, ಬೇರೆ ಯಾರೇ ಆಗಲಿ ಯಾವುದೇ ರೀತಿಯ ತೊಂದರೆ ನೀಡಿರಲಿಲ್ಲ, ಆದರೆ ಕಳೆದ ನ.1ರಂದು ಪಕ್ಕದ ಜಾಗದ ಮೇಲ್ವಾತಿಯ ಪುಟ್ಟರಾಮು ಮತ್ತು ಅವರ ಮಗ ಹಾಗೂ ಕೆಲವು ಜನ ಆಳುಗಳನ್ನು ಕರೆದುಕೊಂಡು ಬಂದು, 1 ಎಕರೆ ಜಮೀನಿಗೆ ಆಕ್ರಮವಾಗಿ ತಂತಿ ಬೇಲಿ ಹಾಕುತ್ತಿದ್ದರು.

ಈ ಸಮಯದಲ್ಲಿ ತಡೆಯಲು ಹೋದಾಗ ಮಂಜುನಾಥ ಜಿ., ಗೋವಿಂದ, ಜೈಕುಮಾರ, ಕೊಂಡಯ್ಯ, ರಾಮಯ್ಯ, ನಾಗರಾಜು ಮತ್ತು ಕೆ.ಆರ್.ವೆಂಕಟೇಶ್ ಎಂಬುವರನ್ನು ಮೇಲ್ಜಾತಿಯ ಪುಟ್ಟರಾಮು ಹಾಗೂ ಅವನ ಕಡೆಯವರು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ ಹಲ್ಲೆ ಮಾಡಲು ಪ್ರಯತ್ನಿಸಿ ಆಟ್ಟಾಡಿಸಿ ಕೊಂಡು ಬಂದಿದ್ದಾರೆ ಎಂದು ದೂರಿದರು.

ಈಬಗ್ಗೆ ಕಳೆದ ನ.2ರಂದು ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದೇವೆ, ನ.3ರಂದು ಪಾಂಡವಪುರ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೆ ಕ್ರಮವಾಗಿಲ್ಲ ಎಂದು ಆರೋಪಿಸಿದರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೋವಿ ಜನಾಂಗದವರಿಗೆ ಸ್ಮಶಾನ ಭೂಮಿಯನ್ನು ಬಿಡಿಸಿಕೊಡಬೇಕೆಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಅಂಕಯ್ಯ, ಶ್ರೀನಿವಾಸ್ ರಾಜ್, ಡಿ.ಮಂಜುನಾಥ್, ಜೈಕುಮಾರ್, ಗೋವಿಂದರಾಜು, ದಿನೇಶ್, ಟಿ.ಜಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!