Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಮರಗಳ ಮಾರಣಹೋಮ – ಜಿಲ್ಲಾಧಿಕಾರಿ ಮತ್ತು ಶಾಸಕರಿಗೊಂದು ಪತ್ರ

ಕೇವಲ ಒಂದು ವರ್ಷದ ಹಿಂದೆ ಮಂಡ್ಯದ ಡಾ:ಬಿ.ಆರ್. ಅಂಬೇಡ್ಕರ್ (ಹಂಡ್ರೆಡ್ ಫೀಟ್) ರೋಡಿನ‌ ಶೆಟ್ಟರ ಟೀ ಅಂಗಡಿಯ ಮುಂದೆ ಸಂಜೆ ಹೊತ್ತು ಗಾಡಿ ನಿಲ್ಲಿಸಲೂ ನಾವು ಹೆದರುತ್ತಿದ್ದೆವು. ಸಾವಿರಾರು ಪಕ್ಷಿಗಳ ಸಮೂಹ ಆ ಬೃಹದಾಕಾರದ ಸಾಲು ಮರಗಳಲ್ಲಿ ತಮ್ಮ ಗೂಡುಗಳನ್ನು ಕಟ್ಡಿಕೊಂಡು ಸಂಸಾರ ಹೂಡಿದ್ದವು. ಅರ್ಧ ತಾಸಿಗೆಲ್ಲಾ ನಮ್ಮ ಬೈಕು, ಕಾರುಗಳನ್ನು ತಮ್ಮ ಹಿಕ್ಕೆಗಳಿಂದ ಸಿಂಗಾರ ಮಾಡಿಬಿಡುತ್ತಿದ್ದವು. ಹಕ್ಕಿಗಳ ಚಿಲಿಪಿಲಿ ಕೇಳಲೆಂದೇ ಮುಂಜಾನೆ ಐದೂವರೆ ಮತ್ತು ಸಂಜೆ ಆರಕ್ಕೆಲ್ಲಾ ನೂರಡಿ ರಸ್ತೆಗೆ ಬಂದು ನಾವು ನಿಲ್ಲುತ್ತಿದ್ದೆವು.

ಕಳೆದ ಎರಡು ವರ್ಷಗಳಲ್ಲಿ 300ಕ್ಕೂ ಅಧಿಕ ಮರಗಳನ್ನು ಮಂಡ್ಯ ನಗರದಲ್ಲಿ ಕಡಿದು ಉರುಳಿಸಲಾಗಿದೆ. 2023ರಲ್ಲಿ ಪ್ರಧಾನಿ ರೋಡ್‌ ಶೋ‌ಗೆ ಅಡ್ಡವಾಗುತ್ತಿವೆ. ಫೋಟೋ ಚೆನ್ನಾಗಿ ಬರೋದಿಲ್ಲ ಅಂತ ಮೊದಲ ಬಾರಿಗೆ ಬೃಹತ್ ಗಾತ್ರದ 34 ಮರಗಳಿಗೆ ಅರಣ್ಯ ಇಲಾಖೆ ಕೊಡಲಿ ಹಾಕಿತ್ತು.

2024ರ ನವೆಂಬರ್ ತಿಂಗಳಿನಲ್ಲಿ ಅಪಾಯಕಾರಿ ಮರಗಳು ಎಂಬ ಹಣೆಪಟ್ಟಿ ಹೊರಿಸಿ, ಹೊಸಳ್ಳಿ ಸರ್ಕಲ್ಲಿನಿಂದ ಬನ್ನೂರು ರಸ್ತೆಯ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ನೂರಡಿ ರಸ್ತೆಯ ಎರಡೂ ಬದಿಯಲ್ಲಿದ್ದ ನೂರಾರು ಮರಗಳನ್ನು ಮನಸೋಇಚ್ಛೆ ತರಿದುಹಾಕಲಾಯಿತು.

nudikarnataka.com
ಡಾ:ಬಿ.ಆರ್. ಅಂಬೇಡ್ಕರ್ (ನೂರಡಿ) ರಸ್ತೆಯಲ್ಲಿ ಮರಗಳ ಕೊಂಬೆಗಳನ್ನು ಕಡಿದು ಬೋಳಾಗಿ ನಿಂತಿರುವ ಮರಗಳ ನೋಟ

ಕಳೆದ ವರ್ಷ ಇಂಥದ್ದೇ ಒಂದು ಮುಂಜಾನೆ ಹಕ್ಕಿಗಳ ಗೂಡುಗಳ ಸಮೇತ ಮರದ ಕೊಂಬೆಗಳನ್ನು ಮರಗಡುಕರ ಲಾರಿಗಳಿಗೆ ತುಂಬಲಾಗುತ್ತಿತ್ತು. ಮಗಳನ್ನು ಶಾಲೆಗೆ ಬಿಟ್ಟು ಹಿಂತಿರುಗುವಷ್ಟರಲ್ಲಿ ಮರಗಡುಕರ ಅತ್ಯಾಧುನಿಕ ಗರಗಸಗಳು ಇನ್ನೂ ಮೂರ್ನಾಲ್ಕು ಮರಗಳನ್ನು ಧರೆಗುರುಳಿಸಿ, ತನ್ನ ಸಾಹಸ ಮೆರೆಯುತ್ತಿದ್ದವು. ಹಕ್ಕಿಗಳು ಸಮರೋಪಾದಿಯಲ್ಲಿ ಯಾವುದೋ ಗಂಡಾಂತರ ಬಂದೊದಗಿದೆಯೇನೋ ಎಂಬಂತೆ ಚೀರಿಕೊಂಡು ತಮ್ಮ ನೆಲೆಯನ್ನು ಬಿಟ್ಟು ಗೊತ್ತು ಗುರಿಯಿಲ್ಲದೆ ಹಾರಿ ಹೋಗುತ್ತಿದ್ದವು.

ಇದನ್ನೂ ಓದಿ : ಮಂಡ್ಯ| ಮರಗಳ ಮಾರಣಹೋಮಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ; ತಪ್ಪಿಸ್ಥರ ಮೇಲೆ ಕ್ರಮಕ್ಕೆ ಆಗ್ರಹ

ಮರಗಳ ಹತ್ಯಾಕಾಂಡ ಇಷ್ಟೆಲ್ಲಾ ಅಧ್ವಾನ ಎಸಗುತ್ತಿದ್ದರೂ ಅರಣ್ಯ ಇಲಾಖೆಯ ಯಾವ ಆಸಾಮಿಯೂ ಅಲ್ಲಿ ಕಾಣಲಿಲ್ಲ. ವಾಟ್ಸಾಪ್ ಗ್ರೂಪಿನಲ್ಲಿ ಈ ಅಮಾನವೀಯ ಮಾರಣಹೋಮದ ಫೋಟೋ ತೆಗೆದುಹಾಕಿ, ಮರ ಮತ್ತು ಗರಗಸದ ನಡುವೆ ಹೋಗಿ ನಿಂತೆವು. ಎಳೆದಾಟ, ಜಗ್ಗಾಟ ಜೋರಾಗುವ ವೇಳೆಗೆ ಒಂದಷ್ಟು ಮೀಡಿಯಾದವರು ಮತ್ತು ಚಿತ್ರಕೂಟದ ಗೆಳೆಯರು ಬಂದು ಸೇರಿಕೊಂಡರು. ಕೆಲವೇ ಮಂದಿಯ ನಮ್ಮ ಪ್ರತಿಭಟನೆಯ ಸುದ್ದಿ ಸೋಷಿಯಲ್ ಮೀಡಿಯಾ, ಲೋಕಲ್ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದಂತೆ. ಮರಕಡಿಯುವುದನ್ನು ನಿಲ್ಲಿಸಲಾಯಿತು.

ಸಾಬರು ಮೆತ್ತಗೆ ಸೈಡಿಗೆ ಕರೆದು “ಸಂಜೆ ಕ್ಲಬ್ಬಿಗೆ ಬಂದ್ಬುಡಿ ಸಾ.. ಸುಮ್ನೆ ಯಾಕೆ ಗದ್ಲ ಎಬ್ಬುಸ್ತೀರಿ.. ಪಾರೆಸ್ಟ್ ಸಾಹೇಬ್ರೂ ಅಲ್ಲೇ ಬತ್ತಾರೆ, ಮಾತಾಡ್ಕವ” ಅಂದ. ತೆಗೆದು ಕಪಾಳಕ್ಕೆ ಎರಡು ಬಿಗಿಯುವ ಅನ್ನುಷ್ಟರಲ್ಲಿ ನಮ್ಮ ವಕೀಲರು ಕಾರಿಳಿದು ಓಡಿ ಬಂದು “ಡಿಸಿ 11 ಗಂಟೆಗೆ ಸಭೆ ಕರೆದಿದ್ದಾರೆ. ಬಂದ್ಬಿಡಿ ಅರವಿಂದ್, ಇವರನ್ನು ಅಲ್ಲೇ ವಿಚಾರಿಸಿಕೊಳ್ಳುವ” ಅಂದರು.

ಕಳೆದ ಜುಲೈನಲ್ಲೂ ಮರಗಳ ಕೊಂಬೆಗಳನ್ನು ಕಡಿದಿದ್ದ ದೃಶ್ಯ

ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ಷಮೆಯಾಚಿಸಿ, ಮರ ಕಡಿಯುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರಜಾವಾಣಿ, ವಾರ್ತಾಭಾರತಿ, ನುಡಿಕರ್ನಾಟಕದ ವರದಿಗಾರರ ಹರಿತ ಲೇಖನಿಗೆ ಬೆಚ್ಚಿದ ಜಿಲ್ಲಾಡಳಿತ ಮರಗಳನ್ನು ಮನಸೋಇಚ್ಛೆ ಕತ್ತರಿಸಿದ ಗುತ್ತಿಗೆದಾರನ ವಿರುದ್ಧ ಎಫೈಆರ್ ದಾಖಲಿಸಿ. ಗಂಭೀರ ಕ್ರಮದ ಎಚ್ಚರಿಕೆ ನೀಡಿತು.

ಇದನ್ನೂ ಓದಿ :  ಮಂಡ್ಯದಲ್ಲಿ ಮರಗಳ ಮಾರಣಹೋಮ | ಮರಕಡಿಯುವಂತೆ ಅರಣ್ಯಇಲಾಖೆಗೆ ಅರ್ಜಿ ಸಲ್ಲಿಸಿದವರ್‍ಯಾರು ? ; ಪರಿಸರ ಪ್ರೇಮಿಗಳ ಪ್ರಶ್ನೆ


“ನಾವು ಹಕ್ಕಿಗಳ ಪರಿಸರವನ್ನು ನಾಶಮಾಡಿ. ಅವುಗಳು ಬದುಕುವ ಹಕ್ಕನ್ನು ಕಸಿದುಕೊಂಡರೆ, ಅವಕ್ಕೆ ನಮ್ಮಂತೆ ಮಾತಾಡಲು ಬರುವುದಿಲ್ಲ. ಅವು ತಮಗಾಗುಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟಿಗೆ ಹೋಗಲಾರವು. ಅವಕ್ಕೆ ಓಟಿನ ಹಕ್ಕೂ ಇಲ್ಲ.

ಅವು ನಮ್ಮತ್ತ ನಿಸ್ಸಹಾಯಕ ಮುಗ್ಧ ನೋಟ ಬೀರಿ ನಿರ್ಗಮಿಸುತ್ತವೆ. ಕೆಲವೊಮ್ಮೆ ಶಾಶ್ವತವಾಗಿ. ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೆ. ಏಕೆಂದರೆ ಅವು ಬದುಕಲಾರದ ಪರಿಸರದಲ್ಲಿ ನಾವೂ ಬದುಕಲಾಗುವುದಿಲ್ಲ”
–ಕೆ.ಪಿ. ಪೂರ್ಣಚಂದ್ರ ತೇಜಸ್ವಿ

 


ಇದಾಗಿ ಆರು ತಿಂಗಳೂ ಕಳೆಯಲಿಲ್ಲ. ಸಿಟಿ ಕ್ಲಬ್ಬಿನ ಮುಂಭಾಗದಲ್ಲಿದ್ದ ಮರವನ್ನು ಜನ ನಿದ್ದೆಯಿಂದೇಳುವ ಮುನ್ನವೇ ಕಡಿದುಹಾಕಲಾಯಿತು. ಮೊನ್ನೆ ಗಂಟೆಗೆ ಐದು ಸಾವಿರ ಬಾಡಿಗೆಯ ದೊಡ್ಡ ಕ್ರೇನ್, ಹೈಟೆಕ್ ಕಟಿಂಗ್ ಮಷೀನಗಳನ್ನು ತರಿಸಿ,ಹೆಬ್ಬಾಳದ ಬಳಿ ಹೊಸದಾಗಿ ಆರಂಭವಾಗುತ್ತಿರುವ ಡಿಮಾರ್ಟ್ ಎದುರಿನ ಮರಗಳನ್ನು ತುಂಡರಿಸಲಾಗಿದೆ. ಹೆದ್ದಾರಿ ಪ್ರಯಾಣಿಕರಿಗಾಗಿ ಅಲ್ಲಿ ಮರದ ನೆರಳಿನಲ್ಲಿ ಕಬ್ಬಿನಹಾಲು, ಮಜ್ಜಿಗೆ, ಎಳನೀರುಗಳನ್ನು ಸ್ಥಳೀಯ ವ್ಯಾಪಾರಿಗಳು ಮಾರುತ್ತಿದ್ದರು. ಈ ಅರಣ್ಯ ಇಲಾಖೆ ಕಾರ್ಪೋರೇಟ್ ಮಾಲ್‌ಗಳ ಬೋರ್ಡು ಕಾಣಿಸುತ್ತಿಲ್ಲವೆಂದು ಮರ ಕತ್ತರಿಸಿರುವುದು ಸ್ಪಷ್ಟವಾಗಿದೆ.

ಈ ಹಿಂದೆ ಮಂಡ್ಯ ಸಿಟಿ ಕ್ಲಬ್ ಮುಂಭಾಗ ಮರಗಳನ್ನು ಕಡಿದಿದ್ದ ದೃಶ್ಯ

ಇದು ಮರಗಳ ಮೇಲೆ, ಬಾನಾಡಿಗಳ ಮೇಲೆ, ನಮ್ಮಂಥ ಪರಿಸರ ಪ್ರೇಮಿಗಳ ನಡೆಯುತ್ತಿರುವ ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ. ಜಿಲ್ಲಾಧಿಕಾರಿ ಡಾ.ಕುಮಾರ್ ಅವರೇ ಮತ್ತು ಯುವ ಶಾಸಕರಾದ ರವಿಕುಮಾರ್ ಗೌಡರೇ ಮಂಡ್ಯ ನಗರವನ್ನು ಮರುಭೂಮಿ ಮಾಡಲು ಹೊರಟಿರುವ ಈ ಅವಿವೇಕಿ ಅರಣ್ಯ ಇಲಾಖೆಯ ತಪ್ಪಿತಸ್ತ ಅಧಿಕಾರಿಗಳಿಗೆ ಕರೆದು ಸರಿಯಾಗಿ ಬುದ್ದಿ ಹೇಳಿ.

ಇದನ್ನೂ ಓದಿ : ಮಂಡ್ಯದಲ್ಲಿ ಮರಗಳ ಮಾರಣಹೋಮ | ಗಂಭೀರವಾಗಿ ಪರಿಗಣಿಸಿದ ಸರ್ಕಾರ : ವರದಿ ಕೇಳಿದ ಅರಣ್ಯ ಸಚಿವ ಈಶ್ವರ ಖಂಡ್ರೆ

ಹಾಗೆಯೇ ಇಂದಿನ ಪ್ರಜಾವಾಣಿಯ ಮುಖಪುಟವನ್ನು ಗಮನಿಸಿ ತಾಪಮಾನ 40 ಡಿಗ್ರಿಗೆ ತಲುಪಿದೆ. ಮಂಡ್ಯ ತಣ್ಣಗಿರಲಿ ಎಂಬ ಕಾಳಜಿ ನಿಮಗಿದ್ದರೆ ಮರಗಳ ಮಾರಣಹೋಮ ನಿಲ್ಲಿಸಿ.

~ಅರವಿಂದ ಪ್ರಭು, ಚಿತ್ರಕೂಟ
ಪರಿಸರವಾದಿ, ಮಂಡ್ಯ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ