Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | 6 ಕ್ಷೇತ್ರಗಳಲ್ಲಿ ಜೆಡಿಎಸ್, ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ದರ್ಶನ್ ಪುಟ್ಟಣ್ಣಯ್ಯಗೆ ಸಿಪಿಐಎಂ ಬೆಂಬಲ

ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದ ರೊಂದಿಗೆ ಮೇಲುಕೋಟೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುವುದಾಗಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಮಂಡ್ಯ ಜಿಲ್ಲಾ ಸಮಿತಿ ಪ್ರಕಟಿಸಿದೆ.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಮತ್ತು ಮೇಲುಕೋಟೆ ಕ್ಷೇತ್ರದಲ್ಲಿ ರೈತ ಚಳವಳಿಯ ಪ್ರತಿನಿಧಿ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಹಾಗೂ ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಕೋಮು ಧ್ರುವೀಕರಣ ಉಂಟು ಮಾಡಲು ಉರೀಗೌಡ – ನಂಜೇಗೌಡ ಎಂಬ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಜಿಲ್ಲೆಗೆ ಅವಮಾನ ಮಾಡಲು ಬಿಜೆಪಿ ನಿರಂತರವಾಗಿ ಪ್ರಯತ್ನ ನಡೆಸಿದೆ. ಆದಿಚುಂಚನಗಿರಿಯ ಮಠಾಧೀಶರಾದ ಶ್ರೀನಿರ್ಮಲಾನಂದ ಸ್ವಾಮೀಜಿಯವರು ಉರಿಗೌಡ – ನಂಜೇಗೌಡ ವಿಷಯವನ್ನು ಎತ್ತಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ ಮೇಲೂ ಕೇಂದ್ರ ಸಚಿವ ರಾಜನಾಥ್ ಸಿಂಗ್, ಸಿ.ಟಿ.ರವಿ ಈ ಬಗ್ಗೆ ಮಾತನಾಡಿದ್ದಾರೆ ಈ ಮೂಲಕ ಶ್ರೀಮಠ ಹಾಗೂ ಮಂಡ್ಯ ಜನತೆಯನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಭ್ರಷ್ಟಾಚಾರಿ ಶಾಸಕ ಅನ್ನದಾನಿ ಬಂಧಿಸಲು ಸಿಪಿಐಎಂ ಆಗ್ರಹ

ಜೆಡಿಎಸ್ ಪಕ್ಷವು ಬಾಗೇಪಲ್ಲಿ, ಕೆ.ಆರ್. ಪುರಂ ಮತ್ತು ಗುಲ್ಬರ್ಗ ಗ್ರಾಮೀಣ ಕ್ಷೇತ್ರಗಳಲ್ಲಿ ಸಿಪಿಐಎಂ ಅಭ್ಯರ್ಥಿಗಳಿಗೆ ಬೆಂಬಲ ನೀಡಿದೆ. ಈ ಎಲ್ಲಾ ಅಭ್ಯರ್ಥಿಗಳ ಪರವಾಗಿ ಸಿಪಿಐಎಂ ಪಕ್ಷ ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದು, ಜಿಲ್ಲೆಯ ಮತದಾರರು ಸಿಪಿಐಎಂ ಬೆಂಬಲಿಸಿರುವ ಸರ್ವೋದಯ ಕರ್ನಾಟಕ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಒಂದು ವೇಳೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವು ಕೋಮುವಾದಿ ಬಿಜೆಪಿಯ ಜತೆ ಸೇರಿ ಸರ್ಕಾರ ರಚನೆ ಮಾಡಿದರೆ, ಮೊದಲು ನಾವು ಅದನ್ನು ವಿರೋಧಿಸುತ್ತೇವೆ ಎಂದರು.

ಶಾಸಕ ಅನ್ನದಾನಿಯನ್ನು ಬಂಧಿಸಿ ಎಂದವರೇ ಬೆಂಬಲ ನೀಡಿದರು 

ಕಳೆದ ಮಾರ್ಚ್ 30ರಂದು ಆಪ್ಟಿಕಲ್ ಫೈಬರ್ ಕೇಬಲ್ ಕಂಪನಿಯರಿಂದ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ ಲಂಚ ಪಡೆದಿದ್ದು, ಅವರನ್ನು ಕೂಡಲೇ ಬಂಧಿಸಬೇಕೆಂದು ಸಿಪಿಐಎಂ ಹೇಳಿಕೆ ನೀಡಿತ್ತು. ಆದರೆ ಈಗ ಅದೇ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಸಿಪಿಐಎಂ ಪ್ರಕಟಿಸಿರುವುದು ಪಕ್ಷದ ನಿಲುವನ್ನು ಪ್ರಶ್ನಿಸುವಂತಿದೆ.

ಮೇಲುಕೋಟೆಯಲ್ಲಿ ಜೆಡಿಎಸ್ ಗೆ ಬೆಂಬಲವಿಲ್ಲ
ಮೇಲುಕೋಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರನ್ನು ಬಿಟ್ಟು, ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವುದಾಗಿ ಸಿಪಿಐಎಂ ಪ್ರಕಟಿಸಿದ್ದು, ಇದು ಇಬ್ಬಂದಿತನದ ನಿಲುವು ಅಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆ ಪ್ರತಿಕ್ರಿಯಿಸಿದ ಕೃಷ್ಣೇಗೌಡ, ತಾವು ರೈತ ಚಳವಳಿ ಬೆಂಬಲಿಸುವ ಉದ್ದೇಶದಿಂದ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪುಟ್ಟರಾಜು ಅವರನ್ನು ಸೋಲಿಸಲು ಕೆಲಸ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪುಟ್ಟರಾಜು ಅವರನ್ನು ವಿರೋಧಿಸುವುದಿಲ್ಲ, ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನಮ್ಮ ಬೆಂಬಲ ನೀಡುತ್ತೇವೆ ಎನ್ನುವ ಮೂಲಕ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ತಮ್ಮ ಬೆಂಬಲವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಎಂ.ಪುಟ್ಟಮಾದು, ಸಿ.ಕುಮಾರಿ, ಎನ್.ಎಲ್.ಭರತ್ ರಾಜ್, ಜಿ.ರಾಮಕೃಷ್ಣ ಹಾಗೂ ಬಿ.ಹನುಮೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!