Tuesday, May 14, 2024

ಪ್ರಾಯೋಗಿಕ ಆವೃತ್ತಿ

ಯುವಜನರ ಸಮಾವೇಶ | ಪಕೋಡಾ ಪ್ರದರ್ಶಿಸಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ

ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತೇವೆ ಎಂದಿದ್ದ ಮೋದಿ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆಂದು ಭರವಸೆ ನೀಡಿದ್ದರು. ಆದರೆ, ಉದ್ಯೋಗಗಳನ್ನು ಎಲ್ಲಿ ಸೃಷ್ಟಿಸಿದ್ದೀರಿ ಎಂದು ಹೇಳಿದರೆ, ಪಕೋಡಾ ಮಾರುವುದು ಉದ್ಯೋಗವೇ ಎಂದು ಹೇಳಿ, ಯುವಜನರನ್ನು ಕಡೆಗಣಿಸುವ ಮಾತನಾಡಿದ್ದಾರೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್‌) ಸಂಚಾಲಕ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೆವಿಎಸ್‌ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ದೇಶಪ್ರೇಮಿ ಯುವಜನರ ಸಮಾವೇಶ’ವನ್ನು ಮೋದಿ ಹೇಳಿದ್ದ ‘ಪಕೋಡಾ’ ಪ್ರದರ್ಶಿಸುವ ಮೂಲಕ ಬಹುಭಾಷಾ ನಟ ಪ್ರಕಾಶ್ ರಾಜ್ ಉದ್ಘಾಟಿಸಿದರು.

ಉದ್ಘಾಟನೆ ವೇಳೆ ಮಾತನಾಡಿದ ಸರೋವರ್, “ಯುವಜನರಿಗೆ ಉದ್ಯೋಗ ಎಲ್ಲಿ ಅಂತ ಹೇಳಿದರೆ, ಪಕೋಡಾ ಮಾರುವುದು ಉದ್ಯೋಗವೆಂದು ಮೋದಿ ಹೇಳಿದ್ದಾರೆ. ಪಕೋಡಾ ಮಾರುವುದು ಅವಮಾನವಲ್ಲ. ಆದರೆ, ಪಕೋಡಾ ಮಾರಲು ಕೇಂದ್ರ ಸರ್ಕಾರ ಯಾವ ಯೋಜನೆಯನ್ನೂ ಕೊಟ್ಟಿಲ್ಲ. ಪಕೊಡಾ ಮಾರಿಯೇ ಜೀವನ ನಡೆಸೋಣ ಎಂದರೆ, ಅಡುಗೆ ಅನಿಲ, ಅಡುಗೆ ಎಣ್ಣೆಯ ಬೆಲೆಯನ್ನೂ ಪ್ರಧಾನಿ ಮೋದಿ ಸರ್ಕಾರ ಏರಿಸಿದೆ. ಪಕೋಡಾ ಮಾರುವುದೂ ಕಷ್ಟವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆಂದು 2014ರ ಚುನಾವಣೆಯಲ್ಲಿ ಹೇಳಿದ್ದರು. ಈಗ ಅವರು ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. 10 ವರ್ಷದಲ್ಲಿ ಸೃಷ್ಟಿಯಾಗಬೇಕಿದ್ದ 20 ಕೋಟಿ ಉದ್ಯೋಗಗಳು ಎಲ್ಲಿವೆ. ಆ 20 ಕೋಟಿ ಉದ್ಯೋಗಗಳು ನಮ್ಮ ಕಣ್ಣಿಗೆ ಕಾಣುತ್ತಿಲ್ಲ ಯಾಕೆ” ಎಂದು ಸರೋವರ್ ಪ್ರಶ್ನಿಸಿದರು.

“ಪದವಿ, ಸ್ನಾತಕೋತ್ತರ ಪದವಿ, ಡಿಪ್ಲಮಾ, ಎಂಜಿನಿಯರಿಂಗ್, ಎಂಬಿಬಿಎಸ್‌ ಸೇರಿದಂತೆ ನಾನಾ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಪಡೆದ ನಮಗೆ ಮೋದಿ ಅವರು ಪಕೋಡಾ ಮಾರಲು ಹೇಳಿದ್ದೇಕೆ? ಸರ್ಕಾರ ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಮೋದಿ ಆಡಳಿತದಲ್ಲಿ 60 ಲಕ್ಷ ಸರ್ಕಾರ ಹುದ್ದೆಗಳು ಖಾಲಿ ಉಳಿದಿವೆ. ಅವುಗಳನ್ನು ಭರ್ತಿ ಮಾಡಲು ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ದೇಶದಲ್ಲಿ 3.8 ಕೋಟಿ ಯುವಜನರು ನಿರುದ್ಯೋಗಿಗಳಾಗಿದ್ದಾರೆ. ಮೋದಿ ಆಡಳಿತದಲ್ಲಿ ಕಳೆದ 45 ವರ್ಷಗಳಲ್ಲಿಯೂ ಕಂಡರಿಯದಷ್ಟು ಪ್ರಮಾಣದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಯುವಜನರಿಗೆ ಉದ್ಯೋಗ ನೀಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ” ಎಂದು ಕಿಡಿಕಾರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!