Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ಮೇಲಿನ ದಾಳಿ| ಸಂಸದ ಪ್ರತಾಪ್ ಸಿಂಹ ಅಮಾನತಿಗೆ ಕಾಂಗ್ರೆಸ್ ಆಗ್ರಹ

ಸಂಸತ್ ಭವನದ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದ ಯುವಕರಿಗೆ ಪಾಸ್ ವ್ಯವಸ್ಥೆ ಮಾಡಿದ್ದ ಸಂಸದ  ಪ್ರತಾಪ ಸಿಂಹ ಅವರನ್ನು ವಿಚಾರಣೆಗೆ ಒಳಪಡಿಸಬೇಕು, ಅಲ್ಲದೇ ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ ಆಗ್ರಹಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ಭದ್ರತಾ ಲೋಪ ಆಗಿದೆ ಈ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಷಾ ಉತ್ತರ ಕೊಡಬೇಕು. ಪ್ರಧಾನಮಂತ್ರಿ ಇದರ ಬಗ್ಗೆ ಮಾತನಾಡಬೇಕು. ಆ ಯುವಕರಿಗೆ ಪಾಸ್ ವ್ಯವಸ್ಥೆ ಮಾಡಿಕೊಟ್ಟಿರುವ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸರ್ವಾಧಿಕಾರಿ ಕೇಂದ್ರ ಸರ್ಕಾರ

ಲೋಕಸಭೆಯಲ್ಲಿ ಸಂಸತ್ ದಾಳಿ ಬಗ್ಗೆ ಉತ್ತರ ನೀಡುವಂತೆ ಒತ್ತಾಯಿಸಿದ ವಿಪಕ್ಷದ 14 ಸಂಸದರನ್ನು ಅಮಾನತು ಮಾಡಲಾಗಿದೆ. ಸರ್ಕಾರದ ವೈಫಲ್ಯದ ವಿರುದ್ದ ಧ್ವನಿಯೆತ್ತಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಲೋಕಸಭಾ ಸದಸ್ಯರನ್ನು ಅಮಾನತ್ತು ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮಾಡಿದ ಅಪಮಾನವಾಗಿದೆ, ಇದು ಬಿಜೆಪಿ ಸರ್ಕಾರದ  ಸರ್ವಾಧಿಕಾರವಾಗಿದೆ ಎಂದು ಖಂಡಿಸಿದರು.

ಸಂಸತ್‌ನಲ್ಲಿ ಸಂಸತ್ ಸದಸ್ಯರೇ ದನಿಯೆತ್ತಿವುದು ತಪ್ಪು ಎನ್ನುವುದಾದರೆ ಜನಸಾಮಾನ್ಯರ ಪಾಡೇನು ? ಬಿಜೆಪಿ ನೇತೃತ್ವದಲ್ಲಿ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಐ.ಟಿ., ಬಿ.ಡಿ., ಸಿ.ಬಿ.ಐ ಮೂಲಕ ವಿಪಕ್ಷವನ್ನು ಹೆದರಿಸುವುದು. ಬ್ಲಾಕ್ ಮೇಲ್ ಮಾಡುವುದು ಬಿಜೆಪಿ ಸರ್ವಾಧಿಕಾರಿ ಧೋರಣೆಯಾಗಿದೆ ಕಿಡಿಕಾರಿದರು.

ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಮಾತನಾಡಿ, ಸಂಸತ್ತಿನ ಲಾಗಿನ್ ಪಾಸ್ ವರ್ಡ್ ಅನ್ನು ಹಂಚಿಕೊಂಡರು ಎಂಬ ಕಾರಣಕ್ಕೆ ಟಿಎಂಸಿ ಸಂಸದೆ ಮೆಹುವಾ ಮೊಹಿತ್ರಾ ಅವರನ್ನು ಅಮಾನತು ಮಾಡಲಾಗಿದೆ. ಆದರೆ ಸಂಸದ ಪ್ರತಾಪ್ ಸಿಂಹ ದಾಳಿಕೋರರಿಗೆ ಪಾಸ್ ನೀಡಿದರು. ಅವರ ಬಗ್ಗೆ ಇದುವರೆಗೆ ಯಾವುದೇ ವಿಚಾರಣೆ ನಡೆಸಿಲ್ಲ ಇದು ಖಂಡನೀಯ ಎಂದರು.

ಕೇಂದ್ರ ಸರ್ಕಾರವು ಸಂಸದರನ್ನು  ವಜಾಗೊಳಿಸುವ ಬದಲು ಎಲ್ಲಿ ಲೋಪವಿದೆಯೋ ಅವುಗಳನ್ನು ಮುಚ್ಚಿಕೊಳ್ಳಬೇಕು, ಒಂದು ವೇಳೆ ಸಂಸತ್ ಭವನದ ದಾಳಿಕೋರರಿಗೆ ಕಾಂಗ್ರೆಸ್ ಪಕ್ಷದ ಯಾವುದಾದರೂ ಸಂಸದ ಪಾಸ್ ನೀಡಿದ್ದರೇ, ಬಿಜೆಪಿ ಹಾಗೂ ಮಾಧ್ಯಮಗಳು ಯಾವ ರೀತಿ ದೊಡ್ಡ ಮಟ್ಟದ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದವು. ಬಿಜೆಪಿ ಸರ್ಕಾರ ತನ್ನ ಪಕ್ಷ ಉಳುಕನ್ನು ಮುಚ್ಚಿಕೊಳ್ಳುವುದಕ್ಕಾಗಿ ಸಾರ್ವಜನಿಕವಾಗಿ ಮಾತನಾಡಲು ಕೂಡ ಹಿಂಜರಿಯುತ್ತಿದೆ ಎಂದು ಟೀಕಿಸಿದರು.

ಸಂಸತ್ ಒಳಗೆ ಹೋಗಿರುವ ‘ಯುವಕರು ಕೋಟ್ಯಾಂತರ ಜನರಿಗೆ ಉದ್ಯೋಗವಿಲ್ಲ. ರೈತರಿಗೆ ನ್ಯಾಯ ದೊರಕುತ್ತಿಲ್ಲ. ಮಣಿಪುರದಲ್ಲಿ ಅತ್ಯಾಚಾರ ನಿಲ್ಲಲ್ಲಿ, ಭಾರತ್ ಮಾತಾಕೀ ಜೈ. ಅಂಬೇಡ್ಕರ್ ಕೀ ಜೈ, ಸಂವಿಧಾನ್ ಬಜಾವ್, ಭಾರತ್ ಮಾತಾಕೀ ಜೈ ಇನ್ನಿತರೆ ಘೋಷಣೆಗಳನ್ನು ಕೂಗಿರುವುದನ್ನು ನೋಡಿದರೆ ಬಿಜೆಪಿ ಮತ್ತು ನೋದಿಯ ಸರ್ವಾಧಿಕಾರಿ ಸರ್ಕಾರ ಅವರ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದೆ.  ಮೋದಿಯ ಸರ್ವಾಧಿಕಾರಿ ಸರ್ಕಾರ ದೇಶವನ್ನು ರೈತರನ್ನು, ಯುವಕರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎನ್ನುವುದು ಎದ್ದು ಕಾಣುತ್ತದೆ ಎಂದು ತಿಳಿಸಿದರು.

ಗೋ‍ಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಕೃಷ್ಣ, ರಾಧಾಮಣಿ, ಶಾಂಭವಿ ಹಾಗೂ ಭಾಗ್ಯಮ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!