Friday, May 17, 2024

ಪ್ರಾಯೋಗಿಕ ಆವೃತ್ತಿ

ಮಾ.3ಕ್ಕೆ ಮಂಡ್ಯದಲ್ಲಿ ಶ್ರಮಜೀವಿಗಳ ಸಮಾವೇಶ: ಕೃಷ್ಣೇಗೌಡ

ಕೃಷಿ ಪ್ರಧಾನವಾಗಿರುವ ಮಂಡ್ಯ ಜಿಲ್ಲೆಯ ದುಡಿಮೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗಾಗಿ ಮಾ.3ರಂದು ಸಕ್ಕರೆನಗರ ಮಂಡ್ಯದಲ್ಲಿ ಶ್ರಮಜೀವಿಗಳ ಸಮಾವೇಶ ಆಯೋಜಿಸಲಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಮಾ.3ರ ಭಾನುವಾರದಂದು ಬೆಳಿಗ್ಗೆ 11.30ಕ್ಕೆ ಸಮಾವೇಶ ಆಯೋಜನೆಗೊಳ್ಳಲಿದ್ದು, ರಾಜ್ಯಸಭಾ ಮಾಜಿ ಸದಸ್ಯ, ಸಿಪಿಐಎಂ ಪಕ್ಷದ ಮಹಿಳಾ ನಾಯಕಿ ಬೃಂದಾ ಕಾರಟ್ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವ ಈ ಸಮಾವೇಶದಲ್ಲಿ ಮಹಿಳೆಯರು, ಕಾರ್ಮಿಕರು, ಯುವಜನರು ಸೇರಿದಂತೆ ಹಲವು ವರ್ಗಗಳನ್ನು ಪ್ರತಿನಿಧಿಸುವ ಜನಸಾಮಾನ್ಯರು ಪಾಲ್ಗೊಳ್ಳಲಿದ್ದಾರೆಂದರು.

ಸಮಾವೇಶವನ್ನುದ್ದೇಶಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಮುಸ್ಲಿಂ ಸೌಹಾರ್ದ ಒಕ್ಕೂಟ ಇಲಿಯಾಸ್ ಅಹಮದ್ ಖಾನ್, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು, ಕಾರ್ಮಿಕ ನಾಯಕ ಮೀನಾಕ್ಷಿ ಸುಂದರಂ ಮಾತನಾಡಲಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ತಾವು ವಹಿಸುವುದಾಗಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.

ರಸಋಷಿ ಕುವೆಂಪು ಅವರ ಆಶಯದಂತೆ ಶಾಂತಿಯ ಬೀಡಾಗಿದ್ದ ಮಂಡ್ಯ ನೆಲದಲ್ಲಿ ಕೋಮುವಾದಿ ಹಾಗೂ ಪ್ರಗತಿ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ದೇಶದ ಅನ್ನದಾತರು ಕೊರೆಯುವ ಚಳಿ ಹಾಗೂ ಬಿರಿಯುವ ಬಿಸಿಲಿನ ನಡುವೆ ತಮ್ಮ ಹಕ್ಕಿಗಳ ರಕ್ಷಣೆಗಾಗಿ ಪ್ರತಿಭಟಿಸಲು ಮುಂದಾದಾಗ, ಪ್ರತಿಭಟನೆ ಹತ್ತಿಕ್ಕಲು ಡ್ರೋನ್ ಬಳಸಿ, ಟಿಯರ್ ಗ್ಯಾಸ್ ಹಾಗೂ ರಬ್ಬರ್ ಗುಂಡುಗಳನ್ನು ರೈತರ ಎದೆಗೆ ಹೊಡೆಯುತ್ತಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಸಿಪಿಐಎಂ ಕಾರ್ಯದರ್ಶಿ ದೇವಿ ಮಾತನಾಡಿ, ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಅತೀ ಹೆಚ್ಚು ಸುಳ್ಳುಗಳ ಮೂಲಕ ದೇಶದ ಜನರನ್ನು ವಂಚಿಸುತ್ತಿರುವ ಪ್ರದಾನಿ ನರೇಂದ್ರಮೋದಿಯವರು ತಮ್ಮ ಪ್ರಣಾಳಿಕಾ ಭರವಸೆಯಂತೆ ಮಹಿಳಾ ಮೀಸಲಾತಿ, 15 ಲಕ್ಷ ನಗದು ಜಮೆ, ಸ್ವಾಮಿನಾಥನ್ ವರದಿ ಜಾರಿಗೆ ಮೀನಾಮೇಷ ಎಣಿಸುತ್ತಿರುವುದು ದುರಂತ ಎಂದು ಬಣ್ಣಿಸಿದರು.

ಶಾಂತಿಯ ಮಂಡ್ಯ ನೆಲದಲ್ಲಿ ಕೆರಗೋಡು ಮತ್ತು ಶ್ರೀರಂಗಪಟ್ಟಣದಂತಹ ಕೋಮು ಘಟನೆಗಳನ್ನು ಮುಂದು ಮಾಡಿ, ಕೋಮು ದಳ್ಳೂರಿ ಪಸರಿಸಲು ಮುಂದಾಗಿ ಹಸಿವು ಮತ್ತು ನಿರುದ್ಯೋಗದ ಬಗ್ಗೆ ಚರ್ಚಿಸಲು ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರ ಧೋರಣೆ ಖಂಡಿಸಲು ಸಮಾವೇಶ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಗೋಷ್ಠಿಯಲ್ಲಿ ಎಂ.ಪುಟ್ಟಮಾದು, ಸಿ.ಕುಮಾರಿ, ಎನ್.ಎಲ್.ಭರತ್ ರಾಜ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!