Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಅಕ್ಕಿ ನಿರಾಕರಿಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ರಸ್ತೆಗಿಳಿದು ಪ್ರತಿಭಟಿಸಿದ ಕಾಂಗ್ರೆಸ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ಸಹಕಾರ ನೀಡದೇ ಒಕ್ಕೂಟ ವ್ಯವಸ್ಥೆಕ್ಕೆ ಧಕ್ಕೆ ತಂದಿದೆ, ರಾಜ್ಯದ ಬಡಜನರಿಗೆ ಅಗತ್ಯವಾದ ಅಕ್ಕಿಯನ್ನು ರಾಜ್ಯ ಸರ್ಕಾರ ಹಣ ಕೊಟ್ಟು ಖರೀದಿಸಲು ಮುಂದಾಗಿದ್ದರೂ, ಕೇಂದ್ರ ಸರ್ಕಾರಕ್ಕೆ ನೀಡುವ ಮನಸ್ಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ನಾಯಕರು, ಕಾರ್ಯಕರ್ತರು ಮಂಗಳವಾರ ಬೀದಿಗಿಳಿದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ  ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದದರು. ಈ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ  ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ದುರಾಡಳಿತ ನಡೆಸಿದ ಬಿಜೆಪಿಯನ್ನು ಸೋಲಿಸುವ ಮೂಲಕ ರಾಜ್ಯದ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ಕಾರಣದಿಂದಾಗಿ ಕೇಂದ್ರ ಬಿಜೆಪಿ ನಾಯಕರು ರಾಜ್ಯವನ್ನು ದ್ವೇಷಿಸುವ ಹೀನ ಕೆಲಸಕ್ಕೆ ಇಳಿದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಅಕ್ಕಿ ಕೊಡುತ್ತೇವೆಂದು ಹೇಳಿ, ನಂತರ ಇಲ್ಲವೆಂದರು

ರಾಜ್ಯಕ್ಕೆ ಅಕ್ಕಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಇಂತಹ ನೀಚ ಕೆಲಸಕ್ಕೆ ಇಳಿಯಬಾರದು. ಮೊದಲು ಅಕ್ಕಿ ಕೊಡುತ್ತೇವೆಂದು ಹೇಳಿದವರು ಬಳಿಕ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಕೊಡಲ್ಲ ಎನ್ನುತ್ತಿದ್ದಾರೆ. ಇದು ಅನ್ಯಾಯವಲ್ಲವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಭಯ ಶುರುವಾಗಿದೆ. ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕ್ರಮಗಳಿಗೆ ತಡೆ ಮಾಡುತ್ತಿದ್ದಾರೆ. ಅಕ್ಕಿ ಬದಲು ರಾಗಿ, ಜೋಳ ಕೊಡಿ ಎಂಬ ಬಿಜೆಪಿ ನಾಯಕರು ಹೇಳುತ್ತಾರೆ. ಅವರು ಯಾರು ಹೇಳೋಕೆ. ನಮ್ಮ ತೀರ್ಮಾನ ನಮಗೆ ಬಿಟ್ಟಿದ್ದು. ಅವರು ಐದು ವರ್ಷ ಇದ್ದರು. ಈ ಯೋಜನೆ ಮಾಡಬೇಡಿ ಎಂದು ಹೇಳಿದ್ವಾ? ಕೇಂದ್ರ ಸರ್ಕಾರಕ್ಕೆ ಅಕ್ಕಿ ಕೊಡುವ ಅವಕಾಶವಿದೆ, ಕೊಡಿ. ನಾವು ಅಕ್ಕಿಯನ್ನ ಸಾಲ ಕೇಳುತ್ತಿಲ್ಲ. ಹಣ ಕೊಡುತ್ತೇವೆ ಕೊಡಿ. ಲೋಕಸಭಾ ಚುನಾವಣೆಯಲ್ಲಿ ಈ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ. ಬಿಜೆಪಿ ಸರ್ಕಾರದ ಹಿಂದಿನ ಡ್ಯಾಮೆಜ್‌ಗಳು ಸಹ ನಮಗೆ ಅನುಕೂಲವಾಗುತ್ತದೆ. ಒಳ್ಳೆಯ ಅಭಿವೃದ್ಧಿ, ಸಧೃಢ ಆಡಳಿತ ಕೊಡುತ್ತೇವೆ ಎಂದರು.

ಭಾಗ್ಯಗಳನ್ನು ನಿಲ್ಲಿಸಿದ್ದರು

ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಬಿಜೆಪಿ ಸರ್ಕಾರದಲ್ಲಿ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದರು. ಕ್ಷೀರ ಭಾಗ್ಯ, ಆಶ್ರಯ ಮನೆ, ಪಿಂಚಣಿ, ಕೃಷಿ ಭಾಗ್ಯ ಎಲ್ಲ ಭಾಗ್ಯಗಳನ್ನೂ ನಿಲ್ಲಿಸಿದ್ದರು. ಮಾತ್ರವಲ್ಲದೆ 2 ಲಕ್ಷ ಕೋಟಿ ರೂ. ಇದ್ದ ಸಾಲವನ್ನು ಕುಮಾರಸ್ವಾಮಿ, ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ 5 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ರಾಜ್ಯವನ್ನು 3 ಲಕ್ಷ ಕೋಟಿ ರೂ. ಸಾಲದ ಸುಳಿಗೆ ತಳ್ಳಿದ್ದರು ಎಂದು ಕಿಡಿಕಾರಿದರು.

ಒಂದು ಕಡೆ ಸಾಲ ಮಾಡಿದ್ದರು, ಮತ್ತೊಂದು ಕಡೆ ಅಭಿವೃದ್ಧಿ ನಿಲ್ಲಿಸಿದ್ದರು. ಆದರೆ, ನಾವು ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಜನರಿಗೆ ಕೊಟ್ಟ ಐದೂ ಭರವಸೆಗಳನ್ನು ಈಡೇರಿಸಿದ್ದೇವೆ. 56 ಸಾವಿರ ಕೋಟಿ ರೂಗಳ ಯೋಜನೆಗೆ ಒಂದೇ ದಿನದಲ್ಲಿ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಅದನ್ನು ಜಾರಿಗೊಳಿಸಿದ್ದೇವೆ. ಇದನ್ನು ಸಹಿಸದ ಕೇಂದ್ರದ ಬಿಜೆಪಿ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಜಾಹೀರಾತು

ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ

ಇಷ್ಟೆಕ್ಕೇ ನಾವೇನು ಸುಮ್ಮನಿಲ್ಲ. ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕಿಸಿ ಎಲ್ಲೆಲ್ಲಿ ಎಷ್ಟುಷ್ಟು ಅಕ್ಕಿ ಸಿಗುತ್ತದೋ ಅಲ್ಲಿ ಅಕ್ಕಿ ಪಡೆದು ಬಡವರಿಗೆ ವಿತರಿಸುವ ಕೆಲಸವನ್ನು ಮಾಡುತ್ತೇವೆ. ಇದರ ಭಾಗವಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಎಲ್ಲ ಜನಪ್ರತಿನಿಧಿಗಳು, ಮಂತ್ರಿಗಳು, ಶಾಸಕರು, ಕಾರ್ಯಕರ್ತರೊಟ್ಟಿಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಇನ್ನಾದರೂ ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡದೆ ಆಹಾರ ನಿಗಮದಲ್ಲಿರುವ ಅಕ್ಕಿಯನ್ನು ತಕ್ಷಣ ರಾಜ್ಯ ಸರ್ಕಾರಕ್ಕೆ ರವಾನಿಸಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ನಿರ್ಧಾರದಿಂದ ಗೊಂದಲ ಉಂಟಾಗುತ್ತದೆ. ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹ ಜನರಿಗೆ ತಿಳಿಯುತ್ತಿದೆ. ಅಂತೆಯೇ ಜನರು ಮುಂದಿನ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಅವಾಂತರಗಳ ಸೃಷ್ಟಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲಿಯೆ ಬಸ್‌ಗಳ ಸಂಖ್ಯೆ ಹೆಚ್ಚಳ ಮಾಡುತ್ತೇವೆ. ನಾವು ಸಾರಿಗೆ ಮಂತ್ರಿಗಳ ಗಮನಕ್ಕೆ ತರುತ್ತೇವೆ.

ಪುರುಷರಿಗೆ ಶೇ.50ರಷ್ಟು ರಿಸರ್ವ್ ಮಾಡಲಾಗಿದೆ. ಆಷಾಢ ಬಂದಿರುವುದರಿAದ ಮಹಿಳೆಯರು ದೇವಸ್ಥಾನಕ್ಕೆ ಹೆಚ್ಚು ಹೋಗುತಿದ್ದಾರಷ್ಟೇ. ಕೆಲವು ಕಡೆ ಗಲಾಟೆಯಾಗಿದೆ. ಮುಂದೆ ಎಲ್ಲವೂ ಸರಿ ಹೋಗುತ್ತದೆ. ಶೀಘ್ರದಲ್ಲೇ ಸರ್ಕಾರ ಸಮಸ್ಯೆ ಬಗೆಹರಿಸುತ್ತದೆ ಎಂದು ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್ ಕದಲೂರು, ರಮೇಶ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಎಚ್.ಬಿ.ರಾಮು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ, ಯುವ ಘಟಕದ ಅಧ್ಯಕ್ಷ ವಿಜಯಕಮಾರ್, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ರಘುನಂದನ್, ಕೆ.ಕೆ.ರಾಧಾಕೃಷ್ಣ, ಚಿದಂಬರ್, ಸಿದ್ದಾರೂಢ ಸತೀಶ್‌ಗೌಡ, ಶುಭದಾಯಿನಿ, ನಯೀಂ, ಶ್ರೀಧರ್, ಸಿ.ಎಂ.ದ್ಯಾವಪ್ಪ, ಜಾರ್ಜ್ ಮೋಹನ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!