Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 29ನೇ ದಿನಕ್ಕೆ ಕಾವೇರಿ ಹೋರಾಟ: ಅನ್ನದಾನಿ ಬೆಂಬಲ

ತಮಿಳುನಾಡಿಗೆ ನೀರು ಬಿಡದಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಂಡ್ಯ ನಗರದ ಸರ್ ಎಂ. ವಿಶ್ವೇಶ್ವರಯ ಪ್ರತಿಮೆ ಎದರು ನಡೆಯುತ್ತಿರುವ ಧರಣಿ ಸತ್ಯಾಗ್ರಹ 29ನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಸಹ ಮುಂದುವರಿಯಿತು.

ಪಟಾಪಟಿ ಚಡ್ಡಿ, ಎಣ್ಣೆ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರ ವಿರುದ್ಧ ಘೋಷಣೆ ಕೂಗಿದರಲ್ಲದೆ, ಕೂಡಲೇ ನೀರು ನಿಲ್ಲಿಸುವಂತೆ ಒತ್ತಾಯಿಸಿದರು. ರಾಜ್ಯಕ್ಕೆ ಒಂದು ನ್ಯಾಯ, ತಮಿಳುನಾಡಿಗೆ ಮತ್ತೊಂದು ನ್ಯಾಯದಾನ ನೀಡುತ್ತಿರುವ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸಮಿತಿಯನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.

ರಾಜ್ಯ ಸರ್ಕಾರದ ಮಂತ್ರಿಗಳಿಗೆ ಚಡ್ಡಿಯ ಚಿಂತೆ, ಹಳ್ಳಿ ಹಳ್ಳಿಗಳಿಗೆ ಬಾರು-ಬೀರು ಬೇಡ, ನೀರಾವರಿ ಯೋಜನೆಗಳನ್ನು ರೂಪಿಸಿ, ರೈತರಿಗೆ ನೀರಿನ ಭಾಗ್ಯ ಕಲ್ಪಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ಹಳೇ ಮೈಸೂರು ಭಾಗದ ಕೃಷಿಕರಿಗೆ ಪೂಜನೀಯ ಸ್ಥಾನದಲ್ಲಿ ರೈತರು ನೋಡುತ್ತಾರೆ. ಇರ್ವಿನ್ ನಾಲಾ ಚಳವಳಿ, ವರುಣಾ ಚಳವಳಿಯಲ್ಲಿ ಮಂಡ್ಯದ ರೈತರು ಚಡ್ಡಿ ಧರಿಸಿಯೇ ಹೋರಾಟ ಮಾಡಿ ನ್ಯಾಯ ಪಡೆದರು. ಇಂತಹ ಚಡ್ಡಿಯ ಬಗ್ಗೆ ಸಚಿವರು ಮಾತನಾಡುವುದನ್ನು ಬಿಟ್ಟು ಆಡಳಿತಾತ್ಮಕ ವಿಚಾರಗಳತ್ತ ಗಮನ ಹರಿಸಿ, ಮೊದಲು ರೈತರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸುವತ್ತ ಚಿಂತನೆ ನಡೆಸಬೇಕು. ಚಡ್ಡಿಯ ಬಗ್ಗೆ ಮಾತನಾಡುವವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಇಂದಿನ ಧರಣಿ ಸತ್ಯಾಗ್ರಹದಲ್ಲಿ ಮಾಜಿ ಶಾಸಕ ಡಾ. ಕೆ. ಅನ್ನದಾನಿ ಮತ್ತವರ ಬೆಂಬಲಿಗರು ಪಾಲ್ಗೊಂಡಿದ್ದರು. ಚಡ್ಡಿ-ಮದ್ಯದ ಬಾಟಲಿಗಳನ್ನು ಹಿಡಿದು ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಷಫಿ ಮೊಹಮ್ಮದ್, ಮಂಜುನಾಥ್, ಹಿತರಕ್ಷಣಾ ಸಮಿತಿಯ ಸುನಂದಾ ಜಯರಾಂ, ಅಂಬುಜಮ್ಮ, ಬೋರಯ್ಯ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!