Friday, May 17, 2024

ಪ್ರಾಯೋಗಿಕ ಆವೃತ್ತಿ

ಸುಳ್ಳು ಸುದ್ದಿ ಹರಡುವ ಟಿವಿ ವಾಹಿನಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ : ಡಿ.ಕೆ.ಶಿವಕುಮಾರ್ ಎಚ್ಚರಿಕೆ

ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿರುವ ಟಿವಿ ವಾಹಿನಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಕೆಪಿಸಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಯಾವುದೇ ಚಾನೆಲ್ ವರದಿ ಮಾಡುತ್ತಿದ್ದರೆ, ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ . ಕೆಲವರು ನಾನು ರಾಜೀನಾಮೆ ನೀಡುತ್ತೇನೆ ಎಂದು ವರದಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನನ್ನ ತಾಯಿ. ನಾನು ಈ ಪಕ್ಷವನ್ನು ಕಟ್ಟಿದ್ದೇನೆ” ಎಂದು ಸುಳ್ಳು ಸುದ್ದಿ ಹರಡಿದ ಚಾನೆಲ್‌ ವಿರುದ್ಧ ಆಕ್ರೋಶ ಹೊರಹಾಕಿದರು.

“135 ಶಾಸಕರ ಜೊತೆಗೆ ಹೈಕಮಾಂಡ್ ಕೂಡ ನನ್ನ ಜೊತೆಗಿದೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷವೇ ನನ್ನ ದೇವರು. ನಾನು ಈ ಪಕ್ಷವನ್ನು ಕಟ್ಟಿ ಬೆಳಸಿದ್ದೇನೆ. ನಾನು ಅದರ ಭಾಗವಾಗಿದ್ದೇನೆ ಮತ್ತು ಇದರಲ್ಲಿ ನಾನು ಒಬ್ಬಂಟಿಯಾಗಿಲ್ಲ. ತಾಯಿ ತನ್ನ ಮಗುವಿಗೆ ಎಲ್ಲವನ್ನೂ ನೀಡುತ್ತಾಳೆ ”ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷರಾಗಿ ಅವರ ನಿರೀಕ್ಷೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಹಿಂದೆ ಏನಾಯಿತು ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾವು ಬಹುಮತ ಗಳಿಸಿದ್ದೇವೆ, ಸರ್ಕಾರವನ್ನು ರಚಿಸುತ್ತೇವೆ. ನಾವು ಹಿಂದೆ ಸಮ್ಮಿಶ್ರ ಸರ್ಕಾರವನ್ನು ಕಳೆದುಕೊಂಡಿದ್ದೇವೆ ಎಂಬುದು ಮುಗಿದ ಅಧ್ಯಾಯ. ಸೋಲು-ಗೆಲುವಿಗೆ ಯಾರು ಹೊಣೆ ಎಂದು ಈಗ ಮಾತನಾಡುವುದರಿಂದ ಪ್ರಯೋಜನವಿಲ್ಲ. ಕಟ್ಟುಕತೆಗಳನ್ನು ಸೃಷ್ಟಿಸಬೇಡಿ. ಭವಿಷ್ಯದ ಬಗ್ಗೆ ಮಾತನಾಡೋಣ” ಎಂದರು.

ಮಂಗಳವಾರ ಸಂಜೆಯ ನಂತರ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸುವ ನಿರೀಕ್ಷೆಯಿರುವುದರಿಂದ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಸಿಎಂ ರೇಸ್ ಕೊನೆಗೊಳ್ಳುವ ಸಾಧ್ಯತೆಯಿದೆ.

ಡಿ ಕೆ ಶಿವಕುಮಾರ್ ಅವರು ಸೋಮವಾರ ಅನಾರೋಗ್ಯದ ಹಿನ್ನೆಲೆ ದೆಹಲಿ ಪ್ರವಾಸ ರದ್ದುಗೊಳಿಸಿದ್ದರು. ಸಿದ್ದರಾಮಯ್ಯ ಅವರು ಮಾತ್ರ ದೆಹಲಿಗೆ ಪ್ರಯಾಣ ಬೆಳೆಸಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಹಲವು ಸಭೆಗಳನ್ನು ನಡೆಸಿ ಸಿಎಂ ಸ್ಥಾನಕ್ಕೆ ಹೆಸರು ಘೋಷಿಸಲಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದ ಸಿಎಲ್‌ಪಿ ಸಭೆಯಲ್ಲಿದ್ದ ವೀಕ್ಷಕರ ತಂಡವು ದೆಹಲಿಯಲ್ಲಿ ಪಕ್ಷದ ವರಿಷ್ಠರಿಗೆ ತಮ್ಮ ವರದಿಯನ್ನು ಸಲ್ಲಿಸಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ 66 ಸ್ಥಾನ ಗಳಿಸಿ ಹೀನಾಯ ಸೋಲು ಕಂಡಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!