Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಕೇಸರಿ ಶಾಲು ಹಾಕಿ‌ ಪಾಕ್ ಪರ ಘೋಷಣೆ ಕೂಗಿದ‌ವರನ್ನು ಬಿಜೆಪಿ ಸರ್ಕಾರ ಏಕೆ ಬಂಧಿಸಲಿಲ್ಲ: ಡಿಕೆ ಶಿವಕುಮಾರ್

ನಮ್ಮ ಸರ್ಕಾರದ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಬಿಜೆಪಿ ತನ್ನ ಅವಧಿಯಲ್ಲಿ ಪಾಕ್ ಪರ ಘೋಷಣೆ ಕೂಗಿದಾಗ ತನಿಖೆಯೇ ನಡೆಸಲಿಲ್ಲ. ಅವರಿಗೆ ದೇಶದ ಬಗ್ಗೆ ಬದ್ಧತೆ ಇದೆಯಾ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಅವರಿಗೆ ರಾಜೀನಾಮೆ ಯಾವಾಗ ಬೇಕಂತೆ? ಯಾರಿಗೆ ರಾಜೀನಾಮೆ ನೀಡಬೇಕೆಂದು ಕೇಳಿ. ರಾಜೀನಾಮೆ ಕೊಡೋಣ” ಎಂದು ವ್ಯಂಗ್ಯವಾಡಿದರು.

“ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗ ಬಿಜೆಪಿ ಸರ್ಕಾರ ಅವರನ್ನು ಯಾಕೆ ಬಂಧನ‌ ಮಾಡಲಿಲ್ಲ? ಬಿಜೆಪಿಯವರು ಕೇಸರಿ ಶಾಲು ಹಾಕಿ‌ ಘೋಷಣೆ ಕೂಗಿದ್ದರು. ಈ ಪ್ರಕರಣಕ್ಕೆ ಯಾವುದೇ ಎಫ್ಎಸ್ಎಲ್ ವರದಿ ಅವಶ್ಯಕತೆ ಇಲ್ಲ. ನಾವು ರಾಜಕೀಯ ಮಾಡಬಾರದು ಎಂದು ಸುಮ್ಮನೆ ಇದ್ದೆವು. ಅವರ ಈ ಡೋಂಗಿ ಆಟಗಳನ್ನು ನೋಡಿ ನಮ್ಮ ಸ್ಥಳೀಯ ಶಾಸಕರು ದೂರು ನೀಡಿದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದರು.

ಕೊಲೆ ಕೊಲೆಯೇ, ಕಳ್ಳತನ ಕಳ್ಳತನವೇ, ನುಡಿಮುತ್ತು ನುಡಿಮುತ್ತೇ ಅಲ್ಲವೇ? ದೇಶದ್ರೋಹ ದೇಶದ್ರೋಹವೇ ಅಲ್ಲವೇ? ನಮ್ಮ ಸರ್ಕಾರದಲ್ಲಿ ಘೋಷಣೆ ಕೂಗಿದವರ ವಿರುದ್ಧ ವಿಚಾರಣೆ ನಡೆಸುತ್ತಿದ್ದೇವೆ. ದೇಶದ ಬಗ್ಗೆ ಬದ್ಧತೆ ನಮಗಿದೆಯೋ? ಬಿಜೆಪಿಯವರಿಗೆ ಇದೆಯೋ?” ಎಂದು ತಿರುಗೇಟು ನೀಡಿದರು.

1.26 ಲಕ್ಷ ಕೋಟಿ ಅನುದಾನ

“ಅಥಣಿಯಲ್ಲಿ 1 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ‌ಗೆ ನಾವು ತೆರಳುತ್ತಿದ್ದು, ಸಿಎಂ ಸಿದ್ಧರಾಮಯ್ಯ ಕೂಡ ಆಗಮಿಸುತ್ತಿದ್ದಾರೆ. ಬಜೆಟ್ ನಲ್ಲಿ 1.26 ಲಕ್ಷ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಮೀಸಲಿಟ್ಟಿದ್ದು, ಎಲ್ಲ‌ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.

ಮಾಧ್ಯಮಗಳು ಈಗ ಸುಮ್ಮನಾಗಿವೆ

ಇ.ಡಿ ಪ್ರಕರಣ ರದ್ದು ವಿಚಾರವಾಗಿ ಕೇಳಿದಾಗ, “ಮಾಧ್ಯಮಗಳು ಇ.ಡಿ ದಾಳಿಯಾದಾಗ ಒಂದು ರೀತಿ, ಬಂಧನ‌ ಆದಾಗ ಇನ್ನೊಂದು ರೀತಿ ತೋರಿಸ್ತೀರಿ. ಈಗ ನನ್ನ ವಿರುದ್ಧದ ಪ್ರಕರಣ ರದ್ದಾದ ಮೇಲೆ ಸುಮ್ಮನೇ ಇದೀರ” ಎಂದು ತಿಳಿಸಿದರು.

ನಾಳೆ ಸಭೆ ನಂತರ ಟಿಕೆಟ್ ನಿರ್ಧಾರ

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ‌ ಆಯ್ಕೆ ಬಗ್ಗೆ ಕೇಳಿದಾಗ, “ನಾಳೆ ಪಕ್ಷದ ಚುನಾವಣಾ ಸಮಿತಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಸಭೆಯ ನಂತರ ಕಾಂಗ್ರೆಸ್ ಟಿಕೆಟ್ ವಿಚಾರದ‌ ಬಗ್ಗೆ ಎಐಸಿಸಿ‌ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ” ಎಂದರು.

ಬಿಜೆಪಿಯಿಂದ ಅನೇಕ ಶಾಸಕರು ಬರುತ್ತಾರೆ

ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, “ಕೇವಲ ಇಬ್ಬರು‌ ಮೂವರಲ್ಲ ಬಿಜೆಪಿಯಿಂದ ಅನೇಕ‌ ಶಾಸಕರು ಕಾಂಗ್ರೆಸ್‌ಗೆ ಆಗಮಿಸಲಿದ್ದಾರೆ” ಎಂದು ಮಾರ್ಮಿಕವಾಗಿ ಹೇಳಿದರು.

ಮಹಾದಾಯಿ ವಿಳಂಬ ಬಗ್ಗೆ ಜೋಶಿ ಚಕಾರ ಎತ್ತಲಿಲ್ಲ

ಮಹದಾಯಿ ಕಾಮಗಾರಿ ವಿಳಂಬದ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ‌ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ‌ ಉತ್ತರ ನೀಡಬೇಕು. ಇದೇ ವಿಚಾರದಲ್ಲಿ ಹುಬ್ಬಳ್ಳಿಯಲ್ಲಿ‌ ವಿಜಯೋತ್ಸವ ಮಾಡಿದ್ದರು. ಆದರೂ ಯಾಕೆ ಇನ್ನೂ ಮಹದಾಯಿ ತೊಡಕುಗಳ ನಿವಾರಣೆ ಮಾಡುತ್ತಿಲ್ಲ? ನಾನು ಸಚಿವನಾದ ನಂತರ ಇದಕ್ಕೆ ಟೆಂಡರ್ ಕರೆಯಲಾಗಿದೆ. ಅನುಮತಿ ಸಿಗುತ್ತಿದ್ದಂತೆ ಕೆಲಸ ಆರಂಭವಾಗಲಿದೆ. ಅನುಮತಿ ಕೊಡಿಸಿದರೆ ಅವರಿಗೂ ಒಂದು ಗೌರವ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರlಲ್ಹಾದ್ ಜೋಶಿ ಯಾಕೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ? ಈ ಬಗ್ಗೆ ಅವರು ಉತ್ತರಿಸಲಿ” ಎಂದು ಆಗ್ರಹಿಸಿದರು.

ಶೆಟ್ಟರ್ ಪಶ್ಚಾತಾಪ

ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ‌ ಸಿಎಂ‌ ಜಗದೀಶ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, “ಈ ತಿಂಗಳು ಕಳೆದ ಮೇಲೆ‌ ಶೆಟ್ಟರ್ ಅವರಿಂದ ಪಶ್ಚಾತಾಪದ ಹೇಳಿಕೆ ಹೊರಬರಲಿದೆ” ಎಂದು ತಿರುಗೇಟು ನೀಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!