Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮಾತೃಭಾಷೆಗೆ ಒತ್ತು ಕೊಡದಿದ್ದರೆ ಕನ್ನಡ ಬೆಳವಣಿಗೆಗೆ ಕುತ್ತು: ಬದ್ರುದ್ದೀನ್ ಮಾಣಿ

ಪ್ರತಿಯೊಬ್ಬ ಕನ್ನಡಿಗನೂ ಮಾತೃಭಾಷೆಗೆ ಒತ್ತು ಕೊಡದಿದ್ದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಕುತ್ತು ಬರಲಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥ ಬದ್ರುದ್ದೀನ್ ಕೆ.ಮಾಣಿ ಆತಂಕ ವ್ಯಕ್ತಪಡಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವಸೇನೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ಹಬ್ಬ, ರಾಜ್ಯ ಮಟ್ಟದ 30ನೇ ಕವಿಕಾವ್ಯ ಮೇಳ, ಕನ್ನಡ ರತ್ನ ಹಾಗೂ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಮಾತೃಭಾಷೆ ಕನ್ನಡದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ನಮ್ಮ ಸಾಧನೆ ಶೂನ್ಯವಾಗುತ್ತದೆ. ಕನ್ನಡ ಭಾಷೆ ಗಟ್ಟಿಗೊಳಿಸುವ ಕೆಲಸದಲ್ಲಿ ನಾವೆಲ್ಲರೂ ಭಾಗಿಯಾಗಬೇಕು. ಪರಭಾಷಾ ಹೇರಿಕೆಯಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ಕರೆ ನೀಡಿದರು.

ರಾಜ್ಯದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಇಳಿಮುಖವಾಗುತ್ತಿದ್ದು, ದೇಶದಲ್ಲಿರುವ 19,500 ಭಾಷೆಯಲ್ಲಿ 70 ಭಾಷೆಗಳು ಮಾನ್ಯತೆ ಕಳೆದುಕೊಂಡು ನಾಶವಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾಷಾವಾರು ಗಣತಿಯಲ್ಲಿ ಪ್ರತಿಯೊಬ್ಬ ಕರ್ನಾಟಕದ ವಾಸಿ ಮಾತೃಭಾಷೆ ಕನ್ನಡವೆಂದು ಉಲ್ಲೇಖ ಮಾಡದಿದ್ದರೆ, ಕನ್ನಡಕ್ಕೆ ನಿಜಕ್ಕೂ ಕುತ್ತು ಬರಲಿದೆ. ಕನ್ನಡಿಗರು ಪರಭಾಷಾ ವ್ಯಾಮೋಹ ತ್ಯಜಿಸಿ ಕನ್ನಡ ಭಾಷೆ ಉಳಿಸಬೇಕೆಂದು ಮನವಿ ಮಾಡಿದರು.

ಇತ್ತೀಚೆಗೆ ಕಾಂತಾರ ಎಂಬ ಸಿನಿಮಾದ ಮೂಲಕ ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲ ಕನ್ನಡ ಸಿನಿಮಾದಲ್ಲೇ ಹಿಂದಿ, ತೆಲುಗು, ತಮಿಳು ಬಳಸುತ್ತಾರೆ. ಆದರೆ ಕಾಂತಾರ ಸಂಪೂರ್ಣ ಕನ್ನಡ ಭಾಷೆಯಲ್ಲೇ ತಯಾರಾಗಿ ವಿಶ್ವಮಟ್ಟದಲ್ಲಿ ಕನ್ನಡದ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. ಈ ಸಿನಿಮಾದ ನಿರ್ಮಾಪಕರು ಮಂಡ್ಯದವರು ಎಂಬುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.

ಹಿರಿಯ ಸಾಹಿತಿ ಡಾ.ಹೆಚ್.ಎಸ್.ಮುದ್ದೇಗೌಡ ಮಾತನಾಡಿ, ಕನ್ನಡಿಗರಾದ ನಾವು ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕೇರಳದಲ್ಲಿ ಶೇ.92ರಷ್ಟು ಮಲೆಯಾಳಿ ಮಾತನಾಡುವವರಿದ್ದಾರೆ. ತಮಿಳುನಾಡಿನಲ್ಲಿ ಶೇ.62ರಷ್ಟು, ಆಂಧ್ರ, ತೆಲಂಗಾಣದಲ್ಲಿ ಶೇ.72ರಷ್ಟು ತೆಲುಗು ಮಾತನಾಡುವವರಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಕನ್ನಡ ಮಾತನಾಡುವವರ ಸಂಖ್ಯೆ ಕೇವಲ 39ರಷ್ಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಕವಿಕಾವ್ಯ ಮೇಳದ ಸಮ್ಮೇಳನಾಧ್ಯಕ್ಷೆ ಬಿ.ಆರ್.ಉಮಾ, ಮೈಸೂರು ವಿವಿಯ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜೇಗೌಡ, ತಾ.ಪಂ.ಮಾಜಿ ಸದಸ್ಯ ಸಂತೋಷ್ ಅರಕೆರೆ, ಜೀ.ಶಂ.ಪ. ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಂದಗಾಲು, ಶಿಕ್ಷಕ ಮಂಗಲ ಶಿವಣ್ಣ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!