Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ₹ 6,10 ಕೋಟಿ ಮೌಲ್ಯದ ಮದ್ಯ, ನಗದು ವಶ – ಡಾ.ಎಚ್.ಎನ್.ಗೋಪಾಲಕೃಷ್ಣ

ಚುನಾವಣೆ ಹಿನ್ನೆಲೆಯಲ್ಲಿ ಮಾ.29ರಿಂದ ಮೇ.8ರವರೆಗೆ ಜಿಲ್ಲೆಯಲ್ಲಿ 3,48,48,253 ರೂ, 2,35,21,991 ರೂ ಮೌಲ್ಯದ ಮದ್ಯ, 55,550 ರೂ ಮೌಲ್ಯದ 1,805 ಕೆ.ಜಿ ಡ್ರಗ್ಸ್, 24,79,270 ರೂ 22,557 ಪದಾರ್ಥಗಳು ಸೇರಿದಂತೆ ಒಟ್ಟು 6,10,05,064 ಮೌಲ್ಯದ ನಗದು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಆರಕ್ಷಕ ಇಲಾಖೆಯಿಂದ 19 ಪ್ರಕರಣ, ಅಬಕಾರಿ ಇಲಾಖೆಯಿಂದ 1322 ಪ್ರಕರಣ ದಾಖಲಿಸಿ ಈ ಪೈಕಿ 128 ವಾಹನಗಳನ್ನು ಜಫ್ತಿ ಮಾಡಲಾಗಿದೆ. ಆರ್‌ಟಿಒ ಅಧಿಕಾರಿಗಳು 506 ಪ್ರಕರಣ ದಾಖಲಿಸಿ 16,50,696 ರೂ ದಂಡ ವಿಧಿಸಿದ್ದಾರೆ. ಚುನಾವಣಾಧಿಕಾರಿಗಳ ತಂಡದಿಂದ 4 ಪ್ರಕರಣ ದಾಖಲಿಸಲಾಗಿದೆ. ಹಣ, ಮದ್ಯ ಹಂಚಿಕೆ ತಡೆಯುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ಮೂವರಂತೆ ಪ್ಲೇಯಿಂಗ್ ಸ್ಕ್ಟಾಡ್ ನಿಯೋಜಿಸಲಾಗಿದೆ. ಈ ತಂಡ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ರವರೆಗೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಮೇ.9ರಂದು ಮಳವಳ್ಳಿ ಪಟ್ಟಣದ ಶಾಂತಿ ಪದವಿ ಪೂರ್ವ ಕಾಲೇಜು, ಮದ್ದೂರಿನಲ್ಲಿ ಎಚ್.ಕೆ.ವೀರಣ್ಣಗೌಡ ಪ.ಪೂ ಕಾಲೇಜು, ಮೇಲುಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಮಂಡ್ಯದಲ್ಲಿ ವಿಶ್ವವಿದ್ಯಾನಿಲಯ, ಶ್ರೀರಂಗಪಟ್ಟಣದಲ್ಲಿ ಪಟ್ಟಣದ ಸರ್ಕಾರಿ ಪ.ಪೂ ಕಾಲೇಜು, ನಾಗಮಂಗಲದಲ್ಲಿ ಪಟ್ಟಣದ ಸರ್ಕಾರಿ ಪ.ಪೂ ಕಾಲೇಜು ಹಾಗೂ ಕೆ.ಆರ್.ಪೇಟೆ ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮತದಾನ ಮುಕ್ತಾಯಕ್ಕೆ 48 ಗಂಟೆ ಅವಧಿಯಲ್ಲಿ ಅಂದರೆ 8ರಂದು ಸಂಜೆ 5ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಬದಲಿಗೆ ಐವರು ಮಾತ್ರ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಬಹುದು. ಅದಕ್ಕೂ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು ಒಂದು ವಾಹನ ಹಾಗೂ ಚಾಲಕ ಸೇರಿದಂತೆ ಐವರು ತೆರಳಬಹುದು ಎಂದು ವಿವರಿಸಿದರು.

ಜಿಲ್ಲಾದ್ಯಂತ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆಕ್ಟರ್ ಮ್ಯಾಜಿಸ್ಟ್ರೇಟ್, ಎಎಸ್‌ಟಿ ಮತ್ತು ಎಫ್‌ಎಸ್‌ಸಿ ಅಧಿಕಾರಿಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ. ಚೆಕ್‌ಫೋಸ್ಟ್, ವಿವಿಧ ತಂಡ ಹಾಗೂ ಮತಗಟ್ಟೆಗಳಿಗೆ ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮೇ.8ರ ಸಂಜೆ 5ಗಂಟೆಯಿಂದ 11ರ ಬೆಳಗ್ಗೆ 10ಗಂಟೆವರೆಗೆ ಹಾಗೂ ಮತ ಎಣಿಕೆಯಂದು 13ರಂದು ಬೆಳಗ್ಗೆ 6ಗಂಟೆಯಿಂದ 14ರ ಬೆಳಗ್ಗೆ 10ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತದಾನದ ದಿನವಾದ ಮೇ.10ರಂದು ಜಿಲ್ಲಾದ್ಯಂತ ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ. ಅಂತೆಯೇ 8ರಂದು ಸಂಜೆ 6ಗಂಟೆಯಿಂದ 11ರ ಬೆಳಗ್ಗೆ 6ಗಂಟೆವರೆಗೆ ಸಿಆರ್‌ಪಿಸಿ 1970ರ ಕಲಂ 144ರ ರೀತ್ಯಾ ಷರತ್ತು ವಿಧಿಸಿ ಪ್ರತಿಬಂಧಕಾಜ್ಞೆ ಹೊರಡಿಸಲಾಗಿದೆ. ಈ ಆದೇಶವು ಅಭ್ಯರ್ಥಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸುವುದಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಒಟ್ಟು 12674 ಜನರು ಅಂಚೆ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದು, ಈ ಪೈಕಿ 10,075 ಜನರು ಮತ ಹಾಕಿದ್ದಾರೆ. 80 ವರ್ಷ ಮೇಲ್ಪಟ್ಟ 2603 ಜನರು ಮನೆಯಿಂದಲೇ ಮತದಾನಕ್ಕೆ ಅವಕಾಶ ಪಡೆದಿದ್ದರು. ಈ ಪೈಕಿ 2502 ಜನರು ಮತದಾನ ಮಾಡಿದ್ದಾರೆ. ಅಂತೆಯೇ 91 ಜನರು ನಿಧನರಾಗಿದ್ದು, ಉಳಿದವರು ಮತ ಹಾಕಿಲ್ಲ. ಅಂತೆಯೇ 778 ಜನ ಅಂಗವಿಕಲರು ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ 759 ಜನರು ಮತ ಹಾಕಿದ್ದಾರೆ ಎಂದು ಮಾಹಿತಿ ನೀಡಿದರು.

ಅಗತ್ಯ ಸೇವೆ ಸಲ್ಲಿಸುತ್ತಿರುವ 239 ಜನರ ಪೈಕಿ 188 ಜನರು, ಪೋಲಿಂಗ್ ಕರ್ತವ್ಯದಲ್ಲಿರುವ 9027 ಅಧಿಕಾರಿ, ಸಿಬ್ಬಂದಿ ಪೈಕಿ 6626 ಜನರು ಮತ ಚಲಾಯಿಸಿದ್ದಾರೆ. ಇನ್ನು ಅಂಚೆ ಪತ್ರದ ಮೂಲಕ ಮತದಾನ ಮಾಡಿರದ ಪೋಲಿಂಗ್ ಸಿಬ್ಬಂದಿಗೆ ಮೇ.9ರಂದು ತಾಲೂಕು ಮಸ್ಟರಿಂಗ್ ಕೇಂದ್ರದಲ್ಲಿ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿರುವ ಸಿಬ್ಬಂದಿ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಮೇ.9ರಂದು ಆಯಾ ತಾಲೂಕಿನಲ್ಲಿ ಬೆಳಗ್ಗೆ 6ಗಂಟೆಯಿಂದ 7ಗಂಟೆವರೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಮತದಾನ ಮಾಡಲು ಜಿಲ್ಲಾಡಳಿತ, ಸ್ವೀಪ್ ವತಿಯಿಂದ ಪ್ರತಿ ಕುಟುಂಬಕ್ಕೆ ಕರಪತ್ರ ನೀಡಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಚುನಾವಣೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 1350 ರೌಡಿ ಶೀಟರ್‌ಗಳಿಗೆ ಸೂಚನೆ ಕೊಟ್ಟು ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಅಂತೆಯೇ 21 ಜನರನ್ನು ಗಡಿಪಾರು ಮಾಡಲಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಶಾಂತಿ, ಸುವ್ಯವಸ್ಥೆಗೂ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಅಬಕಾರಿ ಜಿಲ್ಲಾ ಅಧಿಕಾರಿ ಮಹಾದೇವಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!