ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷ ಭ್ರಷ್ಟಾಚಾರ ವ್ಯವಸ್ಥೆಯನ್ನು ಪೋಷಣೆ ಮಾಡುತ್ತಿದ್ದು, ಈಗಾಗಲೇ 12 ಮಂತ್ರಿಗಳು ಅಭ್ಯರ್ಥಿ ರವಿಶಂಕರ್ ಪರವಾಗಿ ಸಭೆ ನಡೆಸಿದ್ದಾರೆ. 12 ಮಂತ್ರಿಗಳು ಮತಯಾಚನೆ ಮಾಡದೆ ಸಭೆ ನಡೆಸಿರುವ ಹಿಂದೆ ವಾಮಮಾರ್ಗದ ಹುನ್ನಾರವಿದೆ. ಮತದಾರರನ್ನು ಸೆಳೆಯಲು ಹಲವು ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದರು.
ಮಂಡ್ಯ,ಮೈಸೂರು, ಹಾಸನ ,ಚಾಮರಾಜನಗರ ಜಿಲ್ಲೆಯ ನಾಲ್ಕು ಡಿಡಿಪಿಐ ಹಾಗೂ 39 ಬಿಇಓಗಳನ್ನು ಸೇರಿಸಿ ಸಿಎಂ ಸಭೆ ಮಾಡಿದ್ದಾರೆ. ನೀವೇ ಮತದಾರರನ್ನು ಕರೆತಂದು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಬೇಕು. ಇಲ್ಲದಿದ್ದರೆ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹತ್ತರಿಂದ ಹದಿನೈದು ಮತದಾರರಿಗೆ ಒಬ್ಬರನ್ನು ನೇಮಕ ಮಾಡಿ ಮತ ಹಾಕಿಸುವಂತೆ ಹೇಳುತ್ತಿರುವ ಬಗ್ಗೆ ಕೆಲವು ಶಿಕ್ಷಕರು ನಮಗೆ ಮಾಹಿತಿ ನೀಡಿದ್ದಾರೆ. ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದರು. ಸುಮಾರು 40 ಸಾವಿರ ಮತದಾರರನ್ನು ನೋಂದಣಿ ಮಾಡಿಕೊಳ್ಳಲಾಗಿದೆ.ಅವರ ವಿಳಾಸವೇ ಸರಿಯಾಗಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ. ಹಾಗಾದರೆ ಈ 40,000 ಮತದಾರರು ಎಲ್ಲಿಂದ ಬಂದರು, ಅವರಿಗೆ ಖಚಿತವಾದ ವಿಳಾಸವಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು.
ಚುನಾವಣಾ ಆಯೋಗ ಪಾರದರ್ಶಕವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು.ಬಿಜೆಪಿ ಪಕ್ಷ ಈಗಾಗಲೇ ಮತದಾರರಿಗೆ ಹಣವನ್ನು ಆನ್ ಲೈನಲ್ಲಿ ಹಾಕುವ ವ್ಯವಸ್ಥೆಯನ್ನು ಮಾಡಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 6ನೇ ವೇತನ ಆಯೋಗ ರಚಿಸಿ, ಸುಮಾರು 65,000 ಮತದಾರರಿಗೆ ವೇತನ ಹೆಚ್ಚಳ ಮಾಡಿದ್ದಾರೆ.ಈ ಚುನಾವಣೆಯಲ್ಲಿ ಶೇಕಡ 50ರಷ್ಟು ಸರ್ಕಾರಿ ನೌಕರರು ನೋಂದಣಿ ಮಾಡಿಸಿದ್ದು ಅವರೆಲ್ಲ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಕಾಂಗ್ರೆಸ್ ಸರ್ಕಾರ ನಿಮ್ಮ ಹಿತವನ್ನು ಕಾಯಲಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುತ್ತದೆ ಎಂದು ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಮಾತನಾಡಿ, ರಾಜ್ಯದಲ್ಲಿ ಗುಣಮಟ್ಟದ ಕೆಲಸ ಆಗಬೇಕು ಎಂದರೆ ಕಾಂಗ್ರೆಸ್ ಬೆಂಬಲಿಸಲು ಮುಂದಾಗಬೇಕು. ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಲು ಕಾಂಗ್ರೆಸ್ ಬದ್ಧವಾಗಿದ್ದು, ಸಣ್ಣ ಮತ್ತು ಮಧ್ಯಮ ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ರೂಪಿಸಿದೆ ಎಂದು ಹೇಳಿದರು.
ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವು ಯಾವುದೇ ಅರ್ಜಿ ಹಾಕಿಲ್ಲ. ದಿ.ಜಿ.ಮಾದೇಗೌಡರು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ಪದವೀಧರರನ್ನು ಸೃಷ್ಟಿ ಮಾಡಿದ್ದಾರೆ.ಅವರ ಪುತ್ರ ಮಧು ಜಿ. ಮಾದೇಗೌಡ ಆಯ್ಕೆ ಉತ್ತಮವಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಅವರ ಗೆಲುವಿಗೆ ಒಗ್ಗೂಡಿ ಶ್ರಮಿಸುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಡಿ ಗಂಗಾಧರ್, ಮಹಿಳಾ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ದೀಪಕ್, ಸ್ವರ್ಣಸಂದ್ರ ಸೋಮು ಸುಂದರ್ ಮಂಜುನಾಥ್ ಉಮೇಶ್ ಉಪಸ್ಥಿತರಿದ್ದರು.