Sunday, May 19, 2024

ಪ್ರಾಯೋಗಿಕ ಆವೃತ್ತಿ

ಮತದಾರರ ಪ್ರಣಾಳಿಕೆ…..

✍️ ವಿವೇಕಾನಂದ ಎಚ್.ಕೆ

ಪಕ್ಷಗಳ ಪ್ರಣಾಳಿಕೆಗಳನ್ನು ಎಲ್ಲಾ ರೀತಿಯ ಚುನಾವಣೆಗಳ ಸಂದರ್ಭದಲ್ಲಿ ನಾವು ಗಮನಿಸಿದ್ದೇವೆ. ಭರವಸೆಗಳ ಆಶಾ ಗೋಪುರಗಳೇ ನಮ್ಮ ಮುಂದೆ ಇಡಲಾಗುತ್ತದೆ. ಅದು ಎಷ್ಟರಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನಾರ್ಹ.

ಆದರೆ ಕರ್ನಾಟಕದ ಮತದಾರನ ಕೆಲವು ಅತಿಮುಖ್ಯ ಪ್ರಣಾಳಿಕೆಗಳು – ನಿರೀಕ್ಷೆಗಳು ಹೀಗಿರಬಹುದೆ……

1) ಜೀವಿಗಳ ಅತಿಮುಖ್ಯ ಅವಶ್ಯಕತೆ ಗಾಳಿ. ಇದು ಪ್ರಕೃತಿ ನಮಗೆ ನೀಡಿರುವ ವರ. ಅದನ್ನು ಶುದ್ದವಾಗಿಡುವುದು ಯಾವುದೇ ನಾಗರಿಕ ಸರ್ಕಾರದ ಮೊದಲ ಆದ್ಯತೆಯಾಗಿರಬೇಕು.

ಎಚ್ಚರಿಕೆ :; ಗೆಳೆಯರೆ ಇತ್ತೀಚಿನ ಒಂದು ವರದಿಯ ಪ್ರಕಾರ ವಿಶ್ವದಲ್ಲಿ ಗಾಳಿಯ ಧೂಳು ಮತ್ತು ವಿಷಯುಕ್ತ ಕಣಗಳ ಸೇರ್ಪಡೆಯಿಂದ ವರ್ಷಕ್ಕೆ ಲಕ್ಷಾಂತರ ಜನ ಅನಾರೋಗ್ಯ ಪೀಡಿತರಾಗುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ಒಳ್ಳೆಯ ಗಾಳಿ ಇಲ್ಲದ ಮೇಲೆ ಬದುಕಿಗೆ ಅರ್ಥವಿದೆಯೇ ?

2) ವಾತಾವರಣದ ಎರಡನೇ ಅತಿ ಮುಖ್ಯ ವಸ್ತು ನೀರು. ಕರ್ನಾಟಕದ ಮಟ್ಟಿಗೆ ಒಟ್ಟು ಜನಸಂಖ್ಯೆಯ ಶೇಕಡಾ 60% ಕ್ಕೂ ಹೆಚ್ಚು ಜನ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ವ್ಯವಸಾಯ ಮತ್ತು ಇತರ ಅವಶ್ಯಕತೆಗಳಿಗೆ ಕನಿಷ್ಠ ಪ್ರಮಾಣದ ನೀರು ಸಹ ಸಿಗುತ್ತಿಲ್ಲ. ಜನರಿಗೆ ಸ್ವಚ್ಛ ನೀರಿನ ಲಭ್ಯತೆ ಒದಗಿಸುವುದೇ ಸರ್ಕಾರದ ಅತಿಮುಖ್ಯ ಕರ್ತವ್ಯವಾಗಬೇಕು.

ಎಚ್ಚರಿಕೆ :; ಈಗಲೂ ಪ್ರಕೃತಿ ಸಾಕಷ್ಟು ನೀರನ್ನು ಸುರಿಸುತ್ತದೆ‌. ಆದರೆ ಆಡಳಿಗಾರರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ನೀರು ವ್ಯರ್ಥವಾಗುತ್ತಿದೆ. ಮಲಿನ ನೀರು ಜೀವಿಗಳು ಮತ್ತು ಸಸ್ಯಗಳ ಆಯಸ್ಸನ್ನೇ ನುಂಗುತ್ತಿದೆ. ಅಂತರ್ಜಲದ ಮಟ್ಟ ಕುಸಿದಿದೆ. ನೀರೇ ಇಲ್ಲದ ಜೀವನ ಸಾಗಿಸುವುದು ಹೇಗೆ ?

3) ನೀರು ಮತ್ತು ಗಾಳಿಯ ನಂತರ ಅತಿಮುಖ್ಯ ವಸ್ತು ಆಹಾರ. ಅವಶ್ಯಕತೆ ಇರುವಷ್ಟು ಆಹಾರ ಎಲ್ಲರಿಗೂ ಸಿಗುವಂತೆ ಮಾಡುವುದು ಮಾತ್ರವಲ್ಲದೆ ಉತ್ತಮ ಗುಣಮಟ್ಟದ ಪೌಷ್ಟಿಕ ಆಹಾರ ಬಹಳ ಪ್ರಮುಖವಾದುದು. ರಾಸಾಯನಿಕ ಸಿಂಪಡಿಸಿದ ಕಲಬೆರಕೆ ಆಹಾರ ನಿಧಾನ ವಿಷವಾಗಿ ನಮ್ಮ ಬದುಕನ್ನು ಭೂಮಿಯ ಮೇಲೆಯೇ ನರಕ ಮಾಡುತ್ತಿದೆ. ಈಗಾಗಲೇ ಬಹುತೇಕ ಹಣ್ಣು ತರಕಾರಿ ಬೇಳೆಕಾಳುಗಳು, ಅಕ್ಕಿ ರಾಗಿ ಗೋಧಿ ಹಾಲು ಎಲ್ಲವೂ ಅಪಾಯಕಾರಿ ಹಂತ ತಲುಪಿದೆ. ಹೆಚ್ಚುತ್ತಿರುವ ಔಷಧೀಯ ಉದ್ಯಮ ಇದಕ್ಕೆ ಸಾಕ್ಷಿ. ಆಹಾರದ ಕಲಬೆರಕೆ ಜೀವ ವಿರೋಧಿ ಕೆಲಸ ಎಂದು ಪರಿಗಣಿಸಿ ಈ ಕ್ಷಣದಿಂದಲೇ ಆಡಳಿತದ ಕಾರ್ಯಾಚರಣೆ ಪ್ರಾರಂಭಿಸಬೇಕು.

ಎಚ್ಚರಿಕೆ :; ಕರ್ನಾಟಕದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ವಿಷಯುಕ್ತ ಆಹಾರದಿಂದ ಸಾಯುವವರು ಹೆಚ್ಚಾಗುತ್ತಿದ್ದಾರೆ. ಕ್ಯಾನ್ಸರ್ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಗಂಡು ಹೆಣ್ಣುಗಳು ಸಂತಾನಾಭಿವೃದ್ಧಿಯ ಶಕ್ತಿಯೇ ಆತಂಕಕಾರಿಯಾಗಿದೆ. ಆಯಸ್ಸು ಜಾಸ್ತಿಯಾಗುತ್ತಿದ್ದರೂ ಆರೋಗ್ಯವಂತ ದಿನಗಳು ಕಡಿಮೆಯಾಗಿವೆ. 35/4೦ ವಯಸ್ಸಿಗೇ ಒಂದಲ್ಲಾ ಒಂದು ಅನಾರೋಗ್ಯ ಕಾಡತೊಡಗಿದೆ.
ಆರೋಗ್ಯವೇ ಭಾಗ್ಯ ಅಲ್ಲವೇ ?

4) ಮಾನವೀಯ ಮೌಲ್ಯಗಳ ಪುನರುತ್ಥಾನ.
ಹೌದು, ಇದೂ ಸಹ ಆಡಳಿತಗಾರರೇ ಮಾಡಬೇಕಾಗಿರುವ ಬಹುದೊಡ್ಡ ಜವಾಬ್ದಾರಿ. ಎಲ್ಲಿ ನೋಡಿದರೂ, ಎಲ್ಲಾ ಕ್ಷೇತ್ರಗಳಲ್ಲಿಯೂ, ಎಲ್ಲಾ ಸಂಬಂಧಗಳಲ್ಲಿಯೂ ಮತ್ತು ಸಂದರ್ಭದಲ್ಲೂ ಮೋಸ ವಂಚನೆ ನಂಬಿಕೆ ದ್ರೋಹ ಅನುಮಾನ ಸುಳ್ಳು ದುರಾಸೆ ಲಾಭಕೋರ ಪ್ರವೃತ್ತಿ ಹಣದ ಅಸಹ್ಯ ಮೋಹ ರಾರಾಜಿಸುತ್ತಿವೆ. ಒಳ್ಳೆಯತನ ಅಪರೂಪವಾಗಿ, ಆದರ್ಶವಾಗಿ ಕೆಲವೇ ಜನರಲ್ಲಿ ಉಳಿದಿದ್ದರೆ, ದುಷ್ಟತನ ಸಮಾಜದ ಸಹಜ ಧರ್ಮವಾಗಿ ಮಾರ್ಪಟ್ಟಿದೆ. ಅದರ ಪರಿಣಾಮ ಜನರ ನೆಮ್ಮದಿಯ ಮಟ್ಟವೇ ಕುಸಿಯುತ್ತಿದೆ. ಅಸಹನೆ ಆಂತರ್ಯದಲ್ಲಿ ಕುದಿಯುತ್ತಿದೆ.

ಎಚ್ಚರಿಕೆ :; ಪ್ರತಿ ಸೆಕೆಂಡಿಗೆ ಒಂದು ಕಳ್ಳತನ, ಪ್ರತಿ ನಿಮಿಷಕ್ಕೆ ಒಂದು ಅಪಘಾತ, ಪ್ರತಿ ಗಂಟೆಗೆ ಒಂದು ಕೊಲೆ, ಪ್ರತಿದಿನ ಅತ್ಯಾಚಾರ – ಆತ್ಮಹತ್ಯೆ, ಪ್ರತಿ ಕ್ಷಣ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಆರೋಗ್ಯ ಶಿಕ್ಷಣ ಸಮಾಜ ಸೇವೆ ಸೇರಿದಂತೆ ಎಲ್ಲವೂ ಅಪನಂಬಿಕೆಯಿಂದ ಬಳಲಿ ಜನರು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ. ನೆಮ್ಮದಿ ಇಲ್ಲದ ಬದುಕೊಂದು ಬದುಕೇ…

5) ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತ ಗ್ರಂಥಾಲಯ, ಕ್ರೀಡಾಂಗಣ, ವಿಶಾಲವಾದ ಆಧುನಿಕ ಕೆರೆಗಳು, ಸಂರಕ್ಷಿತ ಕಿರು ಅರಣ್ಯಗಳು, ಹಣ್ಣು ತರಕಾರಿ ಸಂಗ್ರಹದ ಶೈತ್ಯಾಗಾರಗಳು, ಸಣ್ಣ ನ್ಯಾಯಾಲಯಗಳು ಕಡ್ಡಾಯವಾಗಿ ಸ್ಥಾಪನೆ ಮಾಡಬೇಕು.

ಎಚ್ಚರಿಕೆ : ದೇಶದ ಸಾಂಸ್ಕೃತಿಕ ಮತ್ತು ನೈತಿಕ ಪ್ರಜ್ಞೆ ಕುಸಿಯುತ್ತಿರುವ ಅನುಭವ ಆಗುತ್ತಲೇ ಇದೆ. ಮುಖ್ಯವಾಗಿ ಯುವ ಜನಾಂಗ ಈ ವಿಷಯದಲ್ಲಿ ದಾರಿ ತಪ್ಪುತ್ತಿರುವುದು ವಾಸ್ತವ. ಅದನ್ನು ಕೇವಲ ಬಾಯಿ ಮಾತಿನಲ್ಲಿ ಸರಿಪಡಿಸುವುದು ಕಷ್ಟ. ಅದಕ್ಕಾಗಿಯೇ ಹೊಸ ಆರೋಗ್ಯಪೂರ್ಣ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಬೇಕಾಗಿದೆ.

6) ಮೇಲಿನ ಬಹುಮುಖ್ಯ 5 ಪ್ರಣಾಳಿಕೆಗಳನ್ನು ಆಡಳಿತ ನಡೆಸುವವರು ಸರಿಯಾಗಿ ಜಾರಿ ಮಾಡಿದ್ದೇ ಆದರೆ…..

ಇನ್ನುಳಿದ, ಮನುಷ್ಯನ ಅತಿ ಮಹತ್ವದ ಅವಶ್ಯಕತೆಗಳಾದ ವಾಸಕ್ಕೆ ಯೋಗ್ಯ ಮನೆ, ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ, ಕ್ರೀಡೆ, ವಿಜ್ಞಾನ ತಂತ್ರಜ್ಞಾನ ಸಂಗೀತ ಸಾಹಿತ್ಯ ರಾಜಕೀಯ ವ್ಯಾಪಾರ ಉದ್ಯಮ ಮುಂತಾದ ಎಲ್ಲಾ ಕ್ಷೇತ್ರಗಳು ತನ್ನಿಂದ ತಾನೇ ಅಭಿವೃದ್ಧಿಯ ಕಡೆ ವಿಶ್ವಾಸದಿಂದ ಹೆಜ್ಜೆ ಹಾಕತೊಡಗುತ್ತದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಸಂಕಷ್ಟ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ.

ಇಲ್ಲಿ ಕಷ್ಟಗಳು ಬರುವುದೇ ಇಲ್ಲ ಎಂದಲ್ಲ. ಅವು ಬಂದೇ ಬರುತ್ತವೆ. ಅದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೆ ಅದನ್ನು ಸ್ವೀಕರಿಸುವ ಮನೋಭಾವ ನಮಗೆ ಸಿದ್ದಿಸುತ್ತದೆ.

ಇಲ್ಲದಿದ್ದರೆ,
ರಸ್ತೆ ಮಾಡಿ, ಮೆಟ್ರೋ ಮಾಡಿ, ವಿಮಾನ ನಿಲ್ದಾಣ ಮಾಡಿ, ದೊಡ್ಡ ದೊಡ್ಡ ಆಸ್ಪತ್ರೆ ಶಾಲೆ ಕಟ್ಟಿಸಿ, ಸಾಲಾ ಮನ್ನಾ ಮಾಡಿ, ವಿಶ್ವವಿದ್ಯಾಲಯ ಸ್ಥಾಪಿಸಿ, ಬಾಹ್ಯಾಕಾಶ ಯಾತ್ರೆ ಮಾಡಿ, ಬೃಹತ್ ಪ್ರಮಾಣದ ಮಂದಿರ ಮಸೀದಿ ಚರ್ಚ್ ಕಟ್ಟಿಸಿ, ಸಂಪರ್ಕ ಕ್ರಾಂತಿ ಮಾಡಿ, ಏನೇ ಮಾಡಿ ಮನುಷ್ಯನ ಮೂಲಭೂತ ಅವಶ್ಯಕತೆ ಮತ್ತು ಮಾನವೀಯ ಮೌಲ್ಯಗಳನ್ನು ಗೌರವಿಸದಿದ್ದರೆ ನಾಗರಿಕ ಸಮಾಜ ನಿರ್ಮಾಣವಾಗಲು ಸಾಧ್ಯವೇ ಇಲ್ಲ.

ಪಕ್ಷಗಳ ಪ್ರಣಾಳಿಕೆಗಳು ಪ್ರಳಯದ ಮುನ್ಸೂಚನೆಯಂತೆ ನಮ್ಮನ್ನು ಕಾಡುತ್ತವೆ.

ಮತದಾರನ ಜೀವನಮಟ್ಟ ಸುಧಾರಣೆಯೇ ನಿಜವಾದ ಪ್ರಣಾಳಿಕೆ. ಅದು ಸಾಧ್ಯವಾಗುವವರೆಗೆ ಚುನಾವಣೆಗಳು ಪ್ರಜಾಪ್ರಭುತ್ವದ ನಾಟಕದ ಅಧ್ಯಾಯಗಳು ಮಾತ್ರ. ಈಗಿನ ಪ್ರಣಾಳಿಕೆಗಳು ಮತದಾರರನ್ನು ಆಕರ್ಷಿಸಲು ಮತ್ತು ಸಮಸ್ಯೆಗಳಿಗೆ ತೇಪೆ ಹಚ್ಚುವ ಕೆಲಸ ಮಾತ್ರ ಮಾಡುತ್ತವೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!