Saturday, May 18, 2024

ಪ್ರಾಯೋಗಿಕ ಆವೃತ್ತಿ

ಪ್ರಥಮ ದರ್ಜೆ ನೌಕರರಿಗೆ ನೀಡುವ ವೇತನ ಪೌರಕಾರ್ಮಿಕರಿಗೂ ನೀಡಲಿ

ಪ್ರಥಮ ದರ್ಜೆ ನೌಕರರಿಗೆ ನೀಡುವ ವೇತನವನ್ನು ಪೌರಕಾರ್ಮಿಕರಿಗೂ ನೀಡಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಸರ್ಕಾರಕ್ಕೆ ಆಗ್ರಹಿಸಿದರು.

ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರ, ಹೊರಗುತ್ತಿಗೆ ನೌಕರರ ಸಂಘದ ಸಹಯೋಗ ಭಾನುವಾರ ಆಯೋಜಿಸಿದ್ದ ಬೃಹತ್‌ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪೌರಕಾರ್ಮಿಕರು ಕೆಲಸಕ್ಕೆ ಬಂದಾಗ ಅವರ ಮಕ್ಕಳ ಪಾಲನೆಗಾಗಿ ಸರ್ಕಾರ ಪಾಲನಾ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು. ಜಗತ್ತು ಮುಂದುವರಿದ್ದರೂ ಪೌರಕಾರ್ಮಿಕರಿಗೆ ಆಧುನಿಕ ಸೌಲಭ್ಯ ದೊರೆಯುತ್ತಿಲ್ಲ.ಇಂತಹ ಅಸಮಾನತೆ ಇರುವಂತಹ ಸಮಾಜವನ್ನು ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ ಎಂದರು.

ಸಮಾವೇಶ ಉದ್ಘಾಟಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ,
ಮೇಲ್ವರ್ಗದ ಜನರು ತಳಸಮುದಾಯದ ಜನರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅವರನ್ನು ಗೊತ್ತಿಲ್ಲದೆ ಶೋಷಿಸುತ್ತಿರುವ ಮೇಲ್ವರ್ಗದ ಜನರ ವಿರುದ್ಧ ಹೋರಾಟ ನಡೆಸಬೇಕಿದೆ. ಶ್ರಮಿಕರ ಹಣವನ್ನು ನುಂಗುವ ಪರಿಪಾಠ ನಿಲ್ಲಬೇಕು ಎಂದರು.

‘ಶತಮಾನಗಳಿಂದಲೂ ತಳ ಸಮುದಾಯದವರನ್ನು ತುಳಿಯುತ್ತಲೇ ಬರುತ್ತಿದ್ದಾರೆ. ಹೊರಗುತ್ತಿಗೆ ಪೌರಕಾರ್ಮಿಕ ನೌಕರರ ಬದುಕು ಕೂಡ ಹೀನಾಯ ಸ್ಥಿತಿಯಲ್ಲಿದೆ. ಮಲ ಹೊರುವ ಪದ್ಧತಿ ತೆಗೆದು ಹಾಕಿದ್ದರೂ ಅವರನ್ನು ಮತ್ತೊಂದು ರೀತಿಯಲ್ಲಿ ಅದೇ ಕೆಲಸ ಮಾಡಿಸಿ ಶೋಷಿಸಲಾಗುತ್ತಿದೆ ಎಂದರು.

ನ್ಯಾಯಾಲಯದಲ್ಲಿ ಹಕ್ಕು ಪಡೆಯಲು ಪೌರಕಾರ್ಮಿಕರು ನಿರಂತರವಾಗಿ ಹೋರಾಟ ಮಾಡಬೇಕು. ಶಿಕ್ಷಣ ಪಡೆಯುವ ಮೂಲಕ ಶ್ರಮಿಕರ ಮಕ್ಕಳ ಬದುಕು ಸುಧಾರಿಸಬೇಕು. ಸರ್ಕಾರಗಳು ಅದಕ್ಕೆ ಬೇಕಾದ ಸೌಲಭ್ಯ ಒದಗಿಸಬೇಕು ಎಂದು ಸಲಹೆ ನೀಡಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ‘ವೃತ್ತಿ ಆಧಾರದ ಮೇಲೆ ಗೌರವ ಮತ್ತು ಗೌರವ ಧನವನ್ನು ನಿಗದಿ ಮಾಡಬಾರದು, ಬಸವಣ್ಣನವರ ಕಾಯಕ ಸಮಾನತಾ ವಾದವನ್ನು ಅನುಷ್ಠಾನಗೊಳಿಸಬೇಕು ಎಂದರು‌.

ಎಂ.ಬಿ.ನಾಗಣ್ಣಗೌಡ ಮಾತನಾಡಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಕಸ ಸಾಗಿಸುವ ವಾಹನ ಚಾಲಕರು, ವಾಟರ್ ಮೆನ್ ಗಳನ್ನು ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೆ ಒಳಪಡಿಸಲು ನವೆಂಬರ್ ಮೊದಲ ವಾರದೊಳಗೆ ಕ್ರಮವಹಿಸದಿದ್ದರೆ ಬೆಂಗಳೂರು ಚಲೋ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇವಲ 11,133 ಪೌರಕಾರ್ಮಿಕರನ್ನು ಖಾಯಂ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನುಳಿದ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರ ನೇರಪಾವತಿ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಪೌರಕಾರ್ಮಿಕರ ನೇಮಕಾತಿ ಸಂಬಂದ ಈಗ ಮಾಡಿರುವ ಘೋಷಣೆಯು ಅನುಷ್ಟಾನಕ್ಕೆ ಬರುವ ಸಾಧ್ಯತೆಗಳು ಕಡಿಮೆಯಿದೆ. ಸರ್ಕಾರ ಸೂಕ್ತ ಕ್ರಮ ವಹಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಗಣಿಗ ರವಿಕುಮಾರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸೋಮ ಸುಂದರ್‌, ಪ್ರಕಾಶ್, ನಾಗರಾಜು, ಅಂದಾನಿ, ಲಿಂಗುಮಯ್ಯ, ಮಹಾದೇವ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!