Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ಮೇಲಿನ ದಾಳಿಗೆ ಮೈಸೂರಿನಲ್ಲೇ ಮೊದಲ ಸಭೆ ನಡೆದಿತ್ತು: ಆರೋಪಿಗಳ ಮಾಸ್ಟರ್ ಪ್ಲಾನ್ ಹೇಗಿತ್ತು ಗೊತ್ತಾ…!

ಸಂಸತ್ ಮೇಲೆ ದಾಳಿ ನಡೆಸಿ ಸಿಕ್ಕಿಬಿದ್ದಿರುವ ಆರೋಪಿಗಳೆಲ್ಲರೂ ಕಳೆದ 18 ತಿಂಗಳ ಹಿಂದೆ ಪರಸ್ಪರ ಭೇಟಿಯಾಗಿದ್ದರು. ಭಗತ್ ಸಿಂಗ್ ಅವರ ಅಭಿಮಾನಿಗಳ ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹೊಂದಿದ್ದು, ಇವರೆಲ್ಲವರು ಅದರ ಭಾಗವಾಗಿದ್ದರು.

ಒಂದೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ ಮೂಲಕ ಸಂಪರ್ಕ ಬೆಳೆಸಿದ ಆರೋಪಿಗಳು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಪ್ಪಟ ಅಭಿಮಾನಿಗಳಾಗಿದ್ದರು. ಬಿಜೆಪಿ ನೇತೃತ್ವದ  ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ದ ತೀವ್ರ ಅಸಮಾಧಾನ ಹೊಂದಿದ್ದರು.

ಕಳೆದ ಡಿ.13ರ ಬುಧವಾರದಂದು ಲೋಕಸಭೆಯಲ್ಲಿ ನಡೆದ ಭದ್ರತಾ ಲೋಪ ಘಟನೆಯ ಒಟ್ಟು ಆರು ಆರೋಪಿಗಳು ಭಾರತದ ವಿವಿಧ ಭಾಗಗಳಿಂದ ಬಂದವರಾಗಿದ್ದಾಗಿದ್ದಾರೆ.

ನಾಲ್ವರ ಮೇಲೆ ಯುಎಪಿಎ ಮೊಕದ್ದಮೆ

ದೆಹಲಿ ಪೊಲೀಸರು ನಾಲ್ವರು ಆರೋಪಿಗಳಾದ ಸಾಗರ್ ಶರ್ಮಾ, ಮನೋರಂಜನ್ ಡಿ (ಮೈಸೂರು), ನೀಲಂ ಮತ್ತು ಅನ್ಮೋಲ್ ಶಿಂಧೆ ಇವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪ ಹೊರಿಸಿದ್ದಾರೆ. ಇನ್ನಿಬ್ಬರು ಸಹಚರರಾದ ವಿಕ್ಕಿ ಆಲಿಯಾಸ್ ವಿಶಾಲ್ ಶರ್ಮಾ ಮತ್ತು ಅವರ ಪತ್ನಿಯನ್ನು ಬಂಧಿಸಲಾಗಿದೆ. ಏಳನೇ ಆರೋಪಿ ಲಲಿತ್ ಝಾ ಪರಾರಿಯಾಗಿದ್ದಾನೆ.

ದೆಹಲಿ ಪೊಲೀಸರು ನಡೆಸಿದ ಆರಂಭಿಕ ವಿಚಾರಣೆಯ ಪ್ರಕಾರ, ಆರೋಪಿಗಳು ಕೇಂದ್ರ ಸರ್ಕಾರದ ಆಡಳಿತ ವೈಖರಿ ವಿರುದ್ದ ಆಕ್ರೋಶ ಹೊಂದಿದ್ದರು. ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರ ಹಿಂಸಾಚಾರ ಸೇರಿದಂತೆ ಹಲವಾರು ವಿಷಯಗಳ ವಿರುದ್ಧ ತೀವ್ರ ಅತೃಪ್ತಿ ಹೊಂದಿದ್ದರು ಎಂಬುದನ್ನು ‘ದಿ ಕ್ವಿಂಟ್‌’ ವರದಿ ಮಾಡಿದೆ.

nudikarnataka.com Lokasabha

ಆರೋಪಿಗಳು ಒಂದೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ ಮೂಲಕ ಭೇಟಿಯಾಗಿ, ‘ಭಗತ್ ಸಿಂಗ್ ಫ್ಯಾನ್ಸ್  ಕ್ಲಬ್‌ಗಳು’ ಎಂಬ ಗುಂಪನ್ನು ರಚಿಸಿಕೊಂಡಿದ್ದರು. ಸಂಸತ್ ಮೇಲಿನ ದಾಳಿ ಘಟನೆಯನ್ನು ಒಂದು ತಿಂಗಳ ಹಿಂದೆಯೇ ಯೋಜಿಸಲಾಗಿತ್ತು, ಆರೋಪಿಗಳಲ್ಲಿ ಒಬ್ಬರಾದ ಡಿ ಮನೋರಂಜನ್ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಅವಲೋಕನ ನಡೆಸುತ್ತಿದ್ದ.

ಜನವರಿಯಲ್ಲಿ ಯೋಜನೆ ಆರಂಭಿಸಿದರು

ಹಲವಾರು ಮೂಲಗಳ ಪ್ರಕಾರ, ಆರೋಪಿಗಳ ಮೊದಲ ಸಭೆಯೂ ಸುಮಾರು ಒಂದೂವರೆ ವರ್ಷದ ಹಿಂದೆ ಮೈಸೂರಿನಲ್ಲೇ ನಡೆದಿತ್ತು. ಐವರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಸಂಪರ್ಕಕ್ಕೆ ಬಂದ ನಂತರ ಫೇಸ್‌ಬುಕ್‌ನಲ್ಲಿ ಭಗತ್ ಸಿಂಗ್ ಅಭಿಮಾನಿಗಳ ಪುಟವನ್ನು ಸೇರಿಕೊಂಡಿದ್ದರು.

ಆರೋಪಿಗಳಾದ ಲಲಿತ್, ಸಾಗರ್ ಮತ್ತು ಮನೋರಂಜನ್ ಮೈಸೂರಿನಲ್ಲಿ ಭೇಟಿಯಾಗಿದ್ದರು ಮತ್ತು ನಂತರ ನೀಲಂ ಮತ್ತು ಅಮೋಲ್ ಅವರನ್ನು ಸೇರಿಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದ್ದು, ಈ ಸಭೆಯಲ್ಲಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳು, ಹೈಲೈಟ್ ಮಾಡಬೇಕಾದ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅದರಲ್ಲಿ ನಿರುದ್ಯೋಗ, ಹಣದುಬ್ಬರ ಮತ್ತು ಮಣಿಪುರ ಹಿಂಸಾಚಾರದಂತಹ ಸಮಸ್ಯೆಗಳು ಪ್ರಮುಖವಾಗಿದ್ದವು.

ಭದ್ರತಾ ವ್ಯವಸ್ಥೆಯ ಅವಲೋಕನ ನಡೆಸಿದ್ದರು

ಜನವರಿ 2023 ರಲ್ಲಿ ಐದು ಆರೋಪಿಗಳ ನಡುವೆ ಎರಡನೇ ಸಭೆ ನಡೆಯಿತು, ಈ ಸಮಯದಲ್ಲಿ ಅವರು ಸಂಸತ್ತಿಗೆ ಹೇಗೆ ಪ್ರವೇಶ ಮಾಡಬೇಕು ಎಂಬುದರ ಬಗ್ಗೆ ಯೋಜನೆ ತಯಾರಿಸಿದ್ದರು. ಮುಂಗಾರು ಅಧಿವೇಶನದ ವೇಳೆ ಸಂಸತ್ತಿನ ಸಂಕೀರ್ಣಕ್ಕೆ ಭೇಟಿ ನೀಡಿದ ಆರೋಪಿ ಮನೋರಂಜನ್, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕನ ನಡೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಆರೋಪಿ ಮನೋರಂಜನ್, ಲೋಕಸಭೆ ಪ್ರವೇಶದ ಸಮಯದಲ್ಲಿ ಸಂದರ್ಶಕರ ಶೂಗಳನ್ನು ಪರಿಶೀಲಿಸವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡಿದ್ದ. ಇದರಿಂದಾಗಿಯೇ ಆರೋಪಿಗಳು ತಮ್ಮ ಶೂಗಳೊಳಗೆ ‘ಕಲರ್ ಸ್ಮೋಕ್ ಬಾಟಲಿ’ಗಳನ್ನು ಇಟ್ಟುಕೊಂಡು ಬರಲು ಯೋಜನೆ ರೂಪಿಸಿದ್ದರು.

ಪ್ರತ್ಯೇಕವಾಗಿ ದೆಹಲಿಗೆ ಆಗಮನ

ದಾಳಿಯ ಕೆಲವು ದಿನಗಳ ಮೊದಲು, ನಾಲ್ವರು ಆರೋಪಿಗಳು ಪ್ರತ್ಯೇಕವಾಗಿ ದೆಹಲಿಗೆ ಆಗಮಿಸಿ ಕನ್ನಾಟ್ ಪ್ಲೇಸ್‌ನಲ್ಲಿ ಭೇಟಿಯಾಗಿದ್ದರು. ಆರೋಪಿ ಲಲಿತ್ ಝಾನನ್ನು ಡಿ.10 ರಂದು ಗುರುಗ್ರಾಮ್‌ನ ತನ್ನ ಮನೆಗೆ ವಿಕ್ಕಿ (ವಿಶಾಲ್ ಶರ್ಮಾ) ಕರೆದೊಯ್ದಿದ್ದನು ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 9 ಗಂಟೆಗೆ ಪಾಸ್ ಪಡೆದರು

ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಮನೋರಂಜನ್ ಅವರು ತಮ್ಮ ಸ್ಥಳೀಯ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ವೈಯಕ್ತಿಕ ಸಿಬ್ಬಂದಿಯ ಸಂಪರ್ಕ ಬೆಳೆಸಿ, ಡಿಸೆಂಬರ್ 1 ಕ್ಕೆ ಸಂದರ್ಶಕರ ಪಾಸ್ ಪಡೆಯಲು ಪ್ರಯತ್ನಿಸಿದ್ದ. ಆದರೆ ಸಂಸದರ ಅಧಿಕೃತ ಸಿಬ್ಬಂದಿಯು ಡಿ.12ರ ಮಂಗಳವಾರ ಆರೋಪಿಗಳಿಗೆ ಕರೆ ಮಾಡಿ, ಡಿ.13ರ ಪಾಸ್ ಅನ್ನು ತೆಗೆದುಕೊಳ್ಳಲು ಹೇಳಿದ್ದರು. ಆನಂತರ ಅಂದು ಬೆಳಿಗ್ಗೆ, ಆರೋಪಿಗಳು ಟ್ಯಾಕ್ಸಿಯಲ್ಲಿ ವಿಕ್ಕಿ (ವಿಶಾಲ್ ಶರ್ಮಾ) ಮನೆಯಿಂದ ಹೊರಟು ಸಂಸತ್ತನ್ನು ತಲುಪಿದರು,” ಎಂದು ಮೂಲಗಳನ್ನು ಉಲ್ಲೇಖಿಸಿ IE ವರದಿ ಮಾಡಿದೆ.

ಬುಧವಾರ ಬೆಳಿಗ್ಗೆ ಆರೋಪಿಗಳು ಇಂಡಿಯಾ ಗೇಟ್‌ನಲ್ಲಿ ಜಮಾಯಿಸಿದ್ದರು ಎಂದು ಎನ್‌ಡಿಟಿವಿ ವರದಿ ಮಾಡಿದೆ, ಅಲ್ಲಿ ಶಿಂಧೆ ಅವರು ಹೊಗೆ ತುಂಬಿದ ಡಬ್ಬಿಗಳನ್ನು ಉಳಿದವರಿಗೆ ಹಂಚಿದ್ದರು. ನಂತರ ಶರ್ಮಾ ಮತ್ತು ಮನೋರಂಜನ್ ಅವರು ಶೂನಲ್ಲಿ ಡಬ್ಬಿ ಮರೆಮಾಚಿಕೊಂಡು ಸಂಸತ್ ಭವನದ ಒಳಕ್ಕೆ ಪ್ರವೇಶ ಮಾಡಿದ್ದರು.

ಇದೇ ಸಂದರ್ಭದಲ್ಲಿ ನೀಲಂ ಮತ್ತು ಅನ್ಮೋಲ್ ಶಿಂಧೆ ಅವರು ಘೋಷಣೆಗಳನ್ನು ಕೂಗಲು ಸಂಸತ್ತಿನ ಹೊರಗೆ ನಿಂತಿದ್ದರು. ಆರೋಪಿ ಲಲಿತ್ ಝಾ ಕೂಡ ಅದೇ ಸ್ಥಳದಲ್ಲಿದ್ದು, ಅದರ ವೀಡಿಯೊ ಮಾಡುತ್ತಿದ್ದ. ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿದ್ದಂತೆ ಝಾ ಸ್ಥಳದಿಂದ ಪರಾರಿಯಾಗಿದ್ದ.

ಆರೋಪಿಗಳ ಸಾಮಾಜಿಕ ಮಾಧ್ಯಮ ಚಟುವಟಿಕೆ

ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಿಂದ ಹಿಡಿದು ರೈತರ ಪ್ರತಿಭಟನೆಯಲ್ಲಿ ಈ ಹಿಂದೆ ಕಾಣಿಸಿಕೊಂಡಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದ್ದು, ಐದು ಆರೋಪಿಗಳ ಪೈಕಿ ಮೂವರು ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ.

ದಾಳಿ ನಡೆದ ನಂತರ ಮೊದಲಿಗೆ ಆರೋಪಿ ಲಲಿತ್ ಝಾ, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ನೀಲಂ ಸಿಂಗ್ (ಸಾಮಾಜಿಕ ಮಾಧ್ಯಮದಲ್ಲಿ ಆಜಾದ್) ಮತ್ತು ಅನ್ಮೋಲ್ ಶಿಂಧೆ ಅವರು ಸಂಸತ್ತಿನ ಹೊರಗೆ “ಜೈ ಭೀಮ್” ಮತ್ತು “ಭಾರತ್ ಮಾತಾ ಕಿ ಜೈ” ಘೋಷಣೆಗಳನ್ನು ಕೂಗುತ್ತಾ, ಡಬ್ಬಿಗಳಿಂದ ಬಣ್ಣದ ಅನಿಲವನ್ನು ಬಿಡುಗಡೆ ಮಾಡಿ ಪ್ರತಿಭಟಿಸುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಸಾಮಾಜಿಕ ಮಾಧ್ಯಮದಲ್ಲಿ ಝಾ ತನ್ನನ್ನು “ಶಿಕ್ಷಕ” ಎಂದು ಹೇಳಿಕೊಂಡಿದ್ದಾನೆ. ಆತನ ಹೆಚ್ಚಿನ ಪೋಸ್ಟ್‌ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖ ಮತ್ತು ಚಿತ್ರಗಳಿವೆ.

“ಜೀತೇ ಯಾ ಹರೇ, ಪರ್ ಕೋಶಿಶ್ ತೋ ಜರೂರಿ ಹೈ. ಅಬ್ ದೇಖ್ನಾ ಯೇ ಹೈ, ಸಫರ್ ಕಿತ್ನಾ ಹಸೀನ್ ಹೋಗಾ… ಉಮೀದ್ ಹೈ ಫಿರ್ ಮೈಲೇಂಗೆ (ನೀವು ಗೆದ್ದರೂ ಸೋತರೂ ಪ್ರಯತ್ನಿಸುವುದು ಮುಖ್ಯ, ಈಗ ನಾವು ಕಾಯಬೇಕು ಮತ್ತು ಪ್ರಯಾಣ ಎಷ್ಟು ಸುಂದರವಾಗಿರುತ್ತದೆ ಎಂದು ನೋಡಬೇಕು … ನಾವು ಮತ್ತೆ ಭೇಟಿಯಾಗುತ್ತೇವೆ ಎಂದು ಭಾವಿಸೋಣ) ಎಂದು ಘಟನೆಗೂ ಮುನ್ನ ತನ್ನ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಾಗರ್ ಶರ್ಮಾ ಬರೆದು ಕೊಂಡಿದ್ದಾನೆ.

ಶರ್ಮಾ ತನ್ನನ್ನು ತಾನು ಬರಹಗಾರ, ಕವಿ, ತತ್ವಜ್ಞಾನಿ ಮತ್ತು “ನಟ, ಚಿಂತಕ ಮತ್ತು ಕಲಾವಿದ” ಎಂದು ಕರೆದುಕೊಂಡಿದ್ಧಾನೆ. ಈತ ಲಕ್ನೋದ ಅಲಂಬಾಗ್‌ನವನಾಗಿದ್ದು, ಇ-ರಿಕ್ಷಾವನ್ನು ಓಡಿಸುತ್ತಿದ್ದ.

ಆರೋಪಿ ಅನ್ಮೋಲ್ ಸಿಂಧೆ, ಓಟ, ಬಾಕ್ಸಿಂಗ್ ಮತ್ತು ಕ್ರೀಡೆಗಳಲ್ಲಿ ಪದಕಗಳನ್ನು ಗೆದ್ದ ವೀಡಿಯೊಗಳು ಮತ್ತು ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾನೆ.

ಕೃಪೆ: ಡಿ ಕ್ವಿಂಟ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!