Saturday, May 18, 2024

ಪ್ರಾಯೋಗಿಕ ಆವೃತ್ತಿ

ಪರಿಷತ್ ಕಲಾಪ| ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೇವು ಅಭಿವೃದ್ಧಿ ಕಾರ್ಯಪಡೆ

ರಾಜ್ಯದಲ್ಲಿನ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಜಾನುವಾರುಗಳಿಗೆ ಮೇವು ಉತ್ಪಾದನೆ ಪ್ರೋತ್ಸಾಹಿಸಲು ರೂ. 22 ಕೋಟಿ ಅನುದಾನದಲ್ಲಿ 8,17,426 ಸಂಖ್ಯೆ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಖರೀದಿಸಿ ಬರ ಘೋಷಣೆಯಾಗಿರುವ ತಾಲ್ಲೂಕುಗಳ ರೈತರಿಗೆ ಉಚಿತವಾಗಿ ವಿತರಿಸಲು ಕ್ರಮವಹಿಸಲಾಗಿದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಚುಕ್ಕೆ ರಹಿತ ಪ್ರಶ್ನೆಗೆ ಬುಧವಾರ ಉತ್ತರ ನೀಡಿರುವ ಸಚಿವರು, ಪ್ರಸ್ತುತ ರಾಜ್ಯದ ರೈತರ ಬಳಿ ಅಂದಾಜು 142 ಲಕ್ಷ ಟನ್ ಮೇವು ಲಭ್ಯತೆ ಇದ್ದು, 26 ವಾರಗಳಿಗೆ ಸಾಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಜಾನುವಾರುಗಳ ಮೇವಿಗೆ ಸದ್ಯಕ್ಕೆ ತೊಂದರೆಯಾಗಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಮೇವು ನಿಧಿಮ, ಜಾನುವಾರು ಶಿಬಿರಗಳನ್ನು ಆರಂಭಿಸಿರುವುದಿಲ್ಲ. ಆದಾಗ್ಯೂ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (DDMA) ರವರಿಗೆ ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಯಾವುದೇ ತಾಲ್ಲೂಕಿನಲ್ಲಿ ಮೇವು ಲಭ್ಯತೆ ಕಡಿಮೆ ಇದೆ ಎಂದು ಅಂದಾಜಿಸಿದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯವರು SDRF/NDRF ಮಾರ್ಗಸೂಚಿಗಳನ್ವಯ ತಾತ್ಕಾಲಿಕ ಮೇವು ನಿಧಿ/ ಜಾನುವಾರು ಶಿಬಿರಗಳನ್ನು ಪ್ರಾರಂಭಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿ ಕ್ರಮವಹಿಸುತ್ತಾರೆ ಎಂದು ವಿವರಿಸಿದ್ದಾರೆ.

ಪ್ರತಿ ತಾತ್ಕಾಲಿಕ ಜಾನುವಾರು ಶಿಬಿರದಲ್ಲಿ 500 ರಾಸುಗಳಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಮೇವಿನ ಕೊರತೆ ಅನುಭವಿಸಬಹುದಾದ ಜಾನುವಾರು ಸಂಖ್ಯೆಗೆ ಅನುಗುಣವಾಗಿ DDMA ರವರು ಜಿಲ್ಲೆಯ ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಬಹುದಾದ ಜಾನುವಾರು ಶಿಬಿರ ಸಂಖ್ಯೆಗಳನ್ನು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.

ಮೇವು ಸಾಗಾಣಿಕೆ ನಿರ್ಬಂಧ: ರಾಜ್ಯದಲ್ಲಿ ಬರಪರಿಸ್ಥಿತಿ ಹಿನ್ನೆಲೆಯಲ್ಲಿ ಅಂತರರಾಜ್ಯ/ ಹೊರರಾಜ್ಯಗಳಿಗೆ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಹಾಗೇ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ರಚಿಸಲಾಗಿದ್ದು, ಬರಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಬರಪೀಡಿತ ಎಂದು ಘೋಷಿಸಲಾದ 223 ತಾಲ್ಲೂಕುಗಳ ಪೈಕಿ 67 ತಾಲ್ಲೂಕುಗಳು ನೀರಾವರಿ ಹಾಗೂ 156 ತಾಲ್ಲೂಕುಗಳು ಅರೆ ನೀರಾವರಿ ಪ್ರದೇಶ ವ್ಯಾಪ್ತಿಗೆ ಬರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!