Thursday, May 16, 2024

ಪ್ರಾಯೋಗಿಕ ಆವೃತ್ತಿ

ಉಚಿತ ಘೋಷಣೆಗಳ ಹಿಂದಿನ ವಾಸ್ತವಗಳು……

✍️ ವಿವೇಕಾನಂದ ಎಚ್. ಕೆ.

ಚುನಾವಣಾ ಹೊಸ್ತಿಲಿನಲ್ಲಿ ಕೆಲವು ರಾಜಕೀಯ ಪಕ್ಷಗಳ ಉಚಿತ ಘೋಷಣೆಗಳು ಪರ ಮತ್ತು ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ. ಇದನ್ನು ಸಾರಾಸಗಟಾಗಿ ಬೆಂಬಲಿಸುವ ಅಥವಾ ವಿರೋಧಿಸುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಮಹತ್ವದ ಅಂಶಗಳು.

ಮೊದಲಿಗೆ ಉಚಿತವಾಗಿ ನೀಡುತ್ತೇವೆ ಎಂದು ಹೇಳುವ ಯೋಜನೆಗಳ ಬಗ್ಗೆ ನೋಡುವುದಾದರೆ ಮುಖ್ಯವಾಗಿ, ಒಂದಷ್ಟು ಆಹಾರ ಪದಾರ್ಥಗಳು, ಶೈಕ್ಷಣಿಕವಾಗಿ ಉಚಿತ ಬಟ್ಟೆ, ಸೈಕಲ್, ಲ್ಯಾಪ್‌ಟಾಪ್ ಇತ್ಯಾದಿ, ಒಂದಷ್ಟು ನೀರು, ವಿದ್ಯುತ್, ಸಾರಿಗೆ, ಗ್ಯಾಸ್ ಮುಂತಾದವು ಹೀಗೆ ಜೀವನಾವಶ್ಯಕ ವಸ್ತುಗಳನ್ನು ಅಧಿಕಾರಕ್ಕೆ ಬಂದರೆ ಬಡವರಿಗೆ ನೀಡುವುದಾಗಿ ಭರವಸೆ ನೀಡುತ್ತಾರೆ ಮತ್ತು ಅಧಿಕಾರಕ್ಕೆ ಬಂದರೆ ನೆರವೇರಿಸುವ ಸಾಧ್ಯತೆಯೂ ಇದೆ.

ಈ ರೀತಿ ಉಚಿತ ಸೇವೆಗಳನ್ನು ನೀಡುವ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತದೆ ಮತ್ತು ಆರ್ಥಿಕ ದುಸ್ಥಿತಿ ಉಂಟಾಗಿ ಭವಿಷ್ಯದಲ್ಲಿ ದಿವಾಳಿತನದತ್ತ ಸಾಗಬಹುದು ಎಂಬ ಆತಂಕವನ್ನು ಸಹ ವ್ಯಕ್ತಪಡಿಸಲಾಗುತ್ತದೆ.

ಹಾಗೆಯೇ ಈ ದೇಶದ ಸಾಮಾಜಿಕ ವ್ಯವಸ್ಥೆ ‌ಜಾತಿ ಆಧಾರಿತವಾಗಿ ನಿರ್ಮಾಣವಾಗಿದೆ. ಅದರ ಪರಿಣಾಮವಾಗಿ ಆರ್ಥಿಕ ಅಸಮಾನತೆ ದೊಡ್ಡ ಪ್ರಮಾಣದ ಕಂದಕ‌ ಸೃಷ್ಟಿಸಿದೆ. ಜಮೀನ್ದಾರಿ ಪದ್ಧತಿಯಲ್ಲಿ ಭೂ ಸಂಪತ್ತು ಕೆಲವೇ ಜನರ ಬಳಿ ಮತ್ತು ‌ಜಾಗತೀಕರಣದ ನಂತರ ಕೆಲವೇ ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಸಂಪತ್ತು ಕೇಂದ್ರೀಕೃತವಾಗಿದೆ. ಈ‌ ದೊಡ್ಡ ಕಂದಕವನ್ನು ಕನಿಷ್ಠ ಪ್ರಮಾಣದಲ್ಲಿಯಾದರೂ ಸರಿಪಡಿಸಲು ‌ಜೀವನಾವಶ್ಯಕ ವಸ್ತುಗಳ ಉಚಿತ ಯೋಜನೆ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಎಂಬ ಮತ್ತೊಂದು ವಾದವೂ ಇದೆ.

ವಿಷಯವನ್ನು ಪೂರ್ವಾಗ್ರಹ ಪೀಡಿತರಾಗದೆ ಇಡೀ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು.

ಜೀವನಾವಶ್ಯಕ ವಸ್ತುಗಳು ಬಡವರಿಗೆ ಉಚಿತವಾಗಿ ದೊರಕಿದಾಗ ಸ್ವಲ್ಪ ಮಟ್ಟಿಗೆ ಸೋಮಾರಿತನ ಬರಬಹುದಾದ ಸಾಧ್ಯತೆ ಇದ್ದರೂ ಅದಕ್ಕಿಂತ ಹೆಚ್ಚಾಗಿ ಸ್ವಾಭಿಮಾನ ಅವರಲ್ಲಿ ಜಾಗೃತವಾಗುತ್ತದೆ. ಅವರ ಶೋಷಣೆ ಕಡಿಮೆಯಾಗುತ್ತದೆ. ಅತ್ಯಂತ ಕಡಿಮೆ ಕೂಲಿ ಅಥವಾ ಸಂಬಳ ನೀಡಿ ಅವರನ್ನು ತಮ್ಮ ಅಡಿಯಾಳಾಗಿ ಮಾಡಿಕೊಳ್ಳುವುದು ನಿಲ್ಲುತ್ತದೆ. ‌ತಮ್ಮ ಬೇಡಿಕೆಯ ಜೀವನಾವಶ್ಯಕ ವಸ್ತುಗಳು ಸಿಕ್ಕ ನಂತರ ಬದುಕಿನಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಕೆಲವರಾದರೂ ಪ್ರಯತ್ನಿಸುತ್ತಾರೆ.

ಇದಕ್ಕೆ ವಿರುದ್ಧವಾಗಿ‌ ಬಹಳಷ್ಟು ಶ್ರೀಮಂತರ ಮಕ್ಕಳು ಮತ್ತು ಕುಟುಂಬದವರು ತಮ್ಮ ಬಳಿ ಇರುವ ಆಸ್ತಿ ಮತ್ತು ನಿರಂತರವಾಗಿ ಬೇರೆ ಬೇರೆ ಮೂಲಗಳಿಂದ ಹಣ ಬರುವ ಕಾರಣದಿಂದಾಗಿ ಯಾವುದೇ ಕೆಲಸ ಮಾಡದೆ ಸೋಮಾರಿಗಳಾಗಿರುವುದನ್ನು ಕಾಣುತ್ತೇವೆ. ಅಷ್ಟು ಮಾತ್ರವಲ್ಲದೆ ಇವರಿಗೆ ನಿಶ್ಚಿತ ಸುಲಭ ಆದಾಯ ಬರುವುದರಿಂದ ಸಮಾಜಕ್ಕೆ ಮಾರಕವಾದ ಚಟುವಟಿಕೆಗಳಲ್ಲಿ ಸಹ ತೊಡಗಿಕೊಂಡಿರುವುದನ್ನು ಗಮನಿಸಬಹುದು.

ತಮಗೆ ಇರುವ ಜಮೀನಿನಲ್ಲಿ ಮದುವೆ ಮಂಟಪ, ಅಪಾರ್ಟ್‌ಮೆಂಟ್, ಕಮರ್ಷಿಯಲ್ ಕಾಂಪ್ಲೆಕ್ಸ್, ಬಾಡಿಗೆ ಮನೆಗಳು, ಬಡ್ಡಿ ವ್ಯವಹಾರ ಮುಂತಾದ ಆದಾಯಗಳನ್ನು ಮಾಡಿಕೊಂಡು ಯಾವುದೇ ಕೆಲಸ ಮಾಡದೇ ಸೋಮಾರಿಗಳಾಗುವುದು ಮತ್ತು ಕೆಲವರು ಈ ಹಣವನ್ನೇ ಉಪಯೋಗಿಸಿಕೊಂಡು ರಾಜಕೀಯ ಪ್ರವೇಶಿಸಿ ಚುನಾವಣಾ ವ್ಯವಸ್ಥೆಯನ್ನೇ ಭ್ರಷ್ಟ ಗೊಳಿಸುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ.

ಈ ಎರಡರಲ್ಲಿ ಸ್ವಲ್ಪ ವ್ಯತ್ಯಾಸ ಇರುವುದು ನಿಜ. ಮೊದಲನೆಯದರಲ್ಲಿ ಸರ್ಕಾರವೇ ಉಚಿತವಾಗಿ ಜೀವನಾವಶ್ಯಕ ವಸ್ತುಗಳನ್ನು ನೀಡುವುದು, ಎರಡನೆಯದರಲ್ಲಿ ಪರೋಕ್ಷವಾಗಿ ವ್ಯವಸ್ಥೆಯೇ ಉಚಿತವಾಗಿ ಶ್ರೀಮಂತಿಕೆ ಸಿಗುವಂತೆ ಸೃಷ್ಟಿಯಾಗಿರುವುದು.

ಹೀಗೆ ಅನೇಕ ವೈರುದ್ಯಮಯ ವಾದ ಸರಣಿಗಳನ್ನು ಇದು ಒಳಗೊಂಡಿದೆ. ಆದರೆ ಮಾನವೀಯತೆಯ ದೃಷ್ಟಿಯಿಂದ, ಸಾಮಾಜಿಕ ನ್ಯಾಯದ ಹಿತಾಸಕ್ತಿಯಿಂದ, ದುರ್ಬಲ ವರ್ಗಗಳನ್ನು ಮೇಲ್ದರ್ಜೆಗೆ ಏರಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಬೇಕು. ಕೇವಲ ಈ ಕ್ಷಣದ ಲಾಭ ನಷ್ಟಗಳು ಅಥವಾ ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನ ಕೈಗೊಳ್ಳಬಾರದು….

ಅವಶ್ಯಕತೆ ಇರುವವರಿಗೆ ಸರ್ಕಾರಗಳು ಉಚಿತವಾಗಿ ನೀಡುವುದರಲ್ಲಿ ತಪ್ಪಿಲ್ಲ. ಆದರೆ ಅವಶ್ಯಕತೆ ಇಲ್ಲದವರು ಅದನ್ನು ತಿರಸ್ಕರಿಸದೆ ನಮಗೂ ಇರಲಿ ಎಂದು ಸ್ವೀಕರಿಸುವುದು ಸ್ವಾರ್ಥ, ಕೆಟ್ಟತನ ಮತ್ತು ಪರೋಕ್ಷ ಅಪರಾಧ ಹಾಗು ವಂಚನೆ. ಉದಾಹರಣೆಗೆ ಸರ್ಕಾರ ಬಡವರಿಗೆ 10 ಕೆಜಿ ಗೋದಿ ಅಥವಾ ಅಕ್ಕಿ ನೀಡುತ್ತದೆ. ಕಡು ಬಡವರು ಅದನ್ನು ಉಪಯೋಗಿಸಿಕೊಳ್ಳಲಿ. ಆದರೆ ಉಚಿತ ಎಂಬ ಕಾರಣದಿಂದ ಮಧ್ಯಮ ವರ್ಗದವರು ಸಹ ಅದನ್ನು ಪಡೆದು ದುರುಪಯೋಗ ಪಡಿಸಿಕೊಳ್ಳುವುದು ತಪ್ಪಲ್ಲವೇ. ಶಾಲಾ ಮಕ್ಕಳಿಗೆ ಉಚಿತ ಯೂನಿಫಾರ್ಮ್ ಕೊಟ್ಟರೆ ಅದರ ಅವಶ್ಯಕತೆ ಇಲ್ಲದವರು ಸಹ ಅದನ್ನು ಪಡೆದು ಮನೆಯ ನೆಲ ಸ್ವಚ್ಛ ಗೊಳಿಸಲು ಉಪಯೋಗಿಸುತ್ತಾರೆಯೇ ಹೊರತು ನಿರಾಕರಿಸುವುದಿಲ್ಲ.

ಅಂದರೆ ಒಳ್ಳೆಯ ಯೋಜನೆಗಳನ್ನು ಅದರ ಮೂಲ ಆಶಯಕ್ಕೆ ಅನುಗುಣವಾಗಿ ಜಾರಿಯಾಗಲು ಬಿಡದೆ ದುರುಪಯೋಗ ಮಾಡಿಕೊಂಡು ಇಡೀ ಯೋಜನೆಯನ್ನೇ ರದ್ದುಪಡಿಸುವಂತೆ ಒತ್ತಾಯಿಸುವುದು ಮತ್ತು ಸಾಮಾಜಿಕ ಕಂದಕ ಹಾಗೇ ಉಳಿಯುವಂತೆ ಮಾಡುವುದು ನಮ್ಮೆಲ್ಲರ ವೈಯಕ್ತಿಕ ಅಜ಼್ಞಾನ ಮತ್ತು ಸ್ವಾರ್ಥ.

ಆದ್ದರಿಂದ ನಮ್ಮದೇ ದೇಶದ ನಮ್ಮದೇ ಜನರಿಗೆ ಸಿಗಬೇಕಾದ ಜೀವನಾವಶ್ಯಕ ವಸ್ತುಗಳನ್ನು ಸರ್ಕಾರಗಳು ಉಚಿತವಾಗಿ ನೀಡುವುದು ಅವುಗಳ ಕರ್ತವ್ಯ. ಆದರೆ ಅದನ್ನು ಅವಶ್ಯಕತೆ ಇಲ್ಲದವರು ಸಹ ನಾಚಿಕೆ ಮಾನ ಮರ್ಯಾದೆ ಜವಾಬ್ದಾರಿ ಇಲ್ಲದೇ ಪಡೆದುಕೊಳ್ಳುವುದು ಮೋಸ ವಂಚನೆ.

ಹಾಗೆಯೇ ಇದು ಚುನಾವಣಾ ಸಂದರ್ಭದ ಮತಗಳಿಕೆಯ ಗಿಮಿಕ್ ಆಗಬಾರದು. ಇದೊಂದು ಎಲ್ಲರೂ ನಿರ್ವಹಿಸಬೇಕಾದ ಸಾಮಾಜಿಕ ಜವಾಬ್ದಾರಿ.

ಕೊನೆಯದಾಗಿ,
ಒಮ್ಮೆ ಸುಪ್ರೀಂ ಕೋರ್ಟ್ ಯಾವುದೇ ವಯಸ್ಕ ಗಂಡು ಹೆಣ್ಣಿನ ಯಾವುದೇ ರೀತಿಯ ಸಂಬಂಧ ಅಪರಾಧವಲ್ಲ ಎಂದು ತೀರ್ಪು ನೀಡಿದೆ. ಅದರ ಅರ್ಥ ಅನೈತಿಕ ಸಂಬಂಧಗಳನ್ನು ಬೆಳೆಸಿ ಎಂದಲ್ಲ. ಹಾಗೆಯೇ ಉಚಿತ ಯೋಜನೆ ಎಂದರೆ ಎಲ್ಲರೂ ಅದನ್ನು ಸ್ವೀಕರಿಸಬೇಕು ಎಂಬುದು ಕಡ್ಡಾಯವಲ್ಲ. ಅವಶ್ಯಕತೆ ಇಲ್ಲದವರು ಅದನ್ನು ನಿರಾಕರಿಸಿ ಸ್ವಾಭಿಮಾನ ಮೆರೆಯುವ ಅವಕಾಶವೂ ಇದೆ. ಆ ಮುಖಾಂತರ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬಹುದು ಮತ್ತು ಆರ್ಥಿಕ ಒತ್ತಡ ತಡೆಯಬಹುದು. ಆಯ್ಕೆ ನಮ್ಮ ಮುಂದಿದೆ.

ಇದರಲ್ಲಿ ಇನ್ನೂ ಸಾಕಷ್ಟು ವಿಷಯಗಳು ಚರ್ಚೆಗೆ ಉಳಿದಿವೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!