Saturday, May 18, 2024

ಪ್ರಾಯೋಗಿಕ ಆವೃತ್ತಿ

ಹಲೋ.. Excuse me, ‘‘ಬಿಟ್ಟಿ’’ ಹೆಸರಿನಲ್ಲಿ ನೀವು ಅವಮಾನಿಸುತ್ತಿರೋದು ಯಾರನ್ನು ಗೊತ್ತಾ…?

✍️ ಮಾಚಯ್ಯ ಎಂ ಹಿಪ್ಪರಗಿ

“ನೀನು ಏನೇ ಹೇಳು, ಜನರಿಗೆ ಪುಕ್ಕಟೆಯಾಗಿ ಕೊಡೋದನ್ನು ನಾನು ಒಪ್ಪಲ್ಲ. ಜನ ಇದರಿಂದ ಸೋಮಾರಿಗಳಾಗ್ತಾರೆ” ಬಹಳ ದಿನಗಳ ನಂತರ ಸಿಕ್ಕ ಗೆಳೆಯ, ನಮ್ಮ ಚರ್ಚೆಯ ನಡುವೆ ತನ್ನ ದೃಢವಾದ ನಿಲುವು ಪ್ರಕಟಿಸಿದ. ಅವನು ಮೋದಿಯ ಭಕ್ತನೂ ಅಲ್ಲ, ಕೋಮುವಾದಿಯೂ ಅಲ್ಲ. ಆದರೆ ನಮ್ಮ ಜನ ಪ್ರೊಪೊಗ್ಯಾಂಡಾ ಪ್ರಚಾರಗಳಿಗೆ ಹೇಗೆ ಮರುಳಾಗುತ್ತಾರೆ ಅನ್ನೋದಕ್ಕೆ ಅವನು ಸ್ಪಷ್ಟ ಉದಾಹರಣೆ. ಜನಕಲ್ಯಾಣ ಕಾರ್ಯಕ್ರಮಗಳ ಮಹತ್ವ ಏನು? ಸಂವಿಧಾನದಲ್ಲಿಯೇ ಅವುಗಳಿಗೆ ಹೇಗೆ ಸ್ಥಾನ ಕಲ್ಪಿಸಲಾಗಿದೆ? ಹೇಗೆ ಇವು, ಅಧಿಕಾರಕ್ಕೇರುವ ಪಕ್ಷವೊಂದು ಮಾಡಲೇಬೇಕಾದ ಅನಿವಾರ್ಯ ಕರ್ತವ್ಯಗಳು? ಕೇವಲ ಭಾರತವಲ್ಲದೇ, ನಾವು ಮುಂದುವರೆದ ರಾಷ್ಟ್ರಗಳೆಂದು ಪರಿಗಣಿಸಿರುವ ಅಮೆರಿಕಾ, ಯುರೋಪ್ ದೇಶಗಳೂ ಹೇಗೆ ಇಂತಹ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ ಮತ್ತು ಅವು ಈ ಕಲ್ಯಾಣ ಕಾರ್ಯಕ್ರಮಗಳಿಗೆ ಭಾರತಕ್ಕಿಂತಲೂ ಎಷ್ಟು ಹೆಚ್ಚು ಅನುದಾನವನ್ನು ವಿನಿಯೋಗಿಸುತ್ತಿವೆ? ಅಷ್ಟಾದರೂ ಅವು ದಿವಾಳಿಯಾಗದೆ, ತಮ್ಮ ತಲಾದಾಯವನ್ನು ಹೆಚ್ಚಿಸಿಕೊಂಡು ಸಶಕ್ತ ದೇಶವಾಗುವಲ್ಲಿ ಆ ಜನಕಲ್ಯಾಣ ಕಾರ್ಯಕ್ರಮಗಳು ಎಷ್ಟು ಪ್ರಧಾನ ಪಾತ್ರ ವಹಿಸಿವೆ? ಅನ್ನೋದನ್ನೆಲ್ಲ ವಿವರಿಸಿದ ನಂತರವೂ ಅವನ ನಿರ್ಣಾಯಕ ಮಾತು ಅದಾಗಿತ್ತು.

“ಸರಿಯಪ್ಪಾ, ಉಚಿತ ಸೌಲಭ್ಯಗಳನ್ನು ಕೊಟ್ಟಾಕ್ಷಣ ಜನ ಸೋಮಾರಿಗಳಾಗ್ತಾರೆ ಅಂತ ಹೇಳೋದಕ್ಕೆ ನಿನ್ನ ಬಳಿ ಇರುವ ಮಾನದಂಡ ಏನು? ಯಾವ ಆಧಾರದಲ್ಲಿ ಈ ಮಾತು ಹೇಳ್ತೀಯಾ?” ಕೇಳಿದೆ ನಾನು. “ಹೇ ಇದನ್ನ ಹೇಳೋದಕ್ಕೆ ಮಾನದಂಡ ಬೇರೆ ಕೇಡು! ನಮ್ಮ ಹಳ್ಳಿ ಕಡೆ ಬಾ, ನಂದು ಮೂರೆಕೆರೆ ಜಮೀನಿದೆ. ಹೊಲದಲ್ಲಿ ಕೆಲಸ ಮಾಡಲು ಕೂಲಿಯವರೇ ಸಿಕ್ತಾ ಇಲ್ಲ. ಬರೀ ಅಕ್ಕಿ ಫ್ರೀ ಕೊಟ್ಟಿದ್ದಕ್ಕೇ ಹಿಂಗಾಗಿತ್ತು. ಇನ್ನು ಇವಾಗ ಕರೆಂಟೂ ಫ್ರೀ, ಬಸ್ ಓಡಾಟನೂ ಫ್ರೀ, ತಿಂಗಳಿಗೆ ಎರಡು ಸಾವಿರನೂ ಕೊಟ್ಟ್ರೆ ಜನ ಮನೆ ಬಿಟ್ಟು ಹೊರಗೆ ಕೂಲಿ ಕೆಲಸಕ್ಕೆ ಬರ್ತಾರಾ? ಜುಂ ಅಂತ ಮನೇಲೆ ಇರ್ತಾರೆ!” ಅವನ ತರ್ಕ ಮುಂದಿಟ್ಟ.

ಹಳ್ಳಿಯ ಮೂರೆಕೆರೆ ಜಮೀನಲ್ಲದೆ, ನನ್ನ ಗೆಳೆಯನಿಗೆ ಸಿಟಿಯಲ್ಲಿ ಎರಡು ಮನೆ, ಮೂರು ಸೈಟು, ಕೈತುಂಬಾ ಬಾಡಿಗೆ ತರುವ ಒಂದು ವಾಣಿಜ್ಯ ಮಳಿಗೆ, ಡಾಕ್ಟರ್ ಓದು ಓದಿ ಅಮೆರಿಕಾದಲ್ಲಿ ಸೆಟ್ಲ್ ಆಗಿರುವ ಮಗ, ಇಂಜಿನಿಯರಿಂಗ್ ಓದುತ್ತಿರುವ ಮಗಳಿರುವುದು ನನಗೆ ಗೊತ್ತಿತ್ತು. “ಹಾಗಾದ್ರೆ ಜನ ಉಣ್ಣಕ್ಕೆ, ತಿನ್ನಕ್ಕೆ ಮಾತ್ರ ಬದುಕ್ತಾರೆ ಅಂತ ನಿನ್ನ ಮಾತಿನ ಅರ್ಥವಾ?” ನನ್ನ ಪ್ರಶ್ನೆಯನ್ನು ಮುಂದಿಟ್ಟೆ. “ಇನ್ನೇನಯ್ಯ, ಉಣ್ಣೋದು ತಿನ್ನೋದು, ಕುಡ್ದು ಮಜ ಮಾಡೋದು ಬಿಟ್ಟ್ರೆ ಜನಕ್ಕೆ ಇನ್ನೇನು ಬೇಕು. ಅವುನ್ನೆಲ್ಲ ಫ್ರೀ ಮಾಡ್ಬಿಟ್ಟ್ರೆ ಮುಗೀತಲ್ಲ ಕತೆ” ಉಡಾಫೆಯಲ್ಲಿ ಉತ್ತರಿಸಿದ. “ಉಣ್ಣೋದು, ತಿನ್ನೋದಷ್ಟೇ ಮುಖ್ಯವಾಗಿದ್ರೆ ನೀನ್ಯಾಕೆ ಎರಡು ಮನೆ, ಮೂರು ಸೈಟು, ಮಳಿಗೆ ಮಾಡಿಕೊಂಡಿದೀಯಾ?, ಮಕ್ಕಳನ್ನು ಅಷ್ಟೆಲ್ಲ ಖರ್ಚು ಮಾಡಿ ಯಾಕೆ ದೊಡ್ಡ ಓದು ಓದಿಸಿದೆ?” ಈ ನನ್ನ ಪ್ರಶ್ನೆಗೆ ಕೊಂಚ ಗಲಿಬಿಲಿಗೊಂಡರೂ ಚೇತರಿಸಿಕೊಂಡು ಉತ್ತರಿಸಿದ, “ಇದೇನಯ್ಯ ಹಿಂಗ್ ಕೇಳ್ತೀಯಾ? ಚೆನ್ನಾಗಿ ಬದುಕಬೇಕು ಅಂತ ನನಿಗೆ ಛಲ ಇತ್ತು. ಮಕ್ಕಳನ್ನು ವಿದ್ಯಾವಂತರ ಮಾಡಿ, ಒಳ್ಳೆ ಭವಿಷ್ಯ ರೂಪಿಸಬೇಕು ಅನ್ನೋ ಕನಸಿತ್ತು. ಅದ್ಕೆ ಕಷ್ಟಪಟ್ಟು ದುಡಿದೆ”.

“ಅಂದ್ರೆ ನಿನ್ನ ಹೊಲದಲ್ಲಿ ಕೂಲಿ ಕೆಲಸಕ್ಕೆ ಬರೋ ಜನಗಳಿಗೆ ನಿನ್ನ ಥರಾ ಚೆನ್ನಾಗಿ ಬದುಕಬೇಕು ಅನ್ನೋ ಛಲ ಇರಲ್ವಾ? ತಮ್ಮ ಮಕ್ಕಳು ಓದಿ ವಿದ್ಯಾವಂತರಾಗಲಿ ಅನ್ನೋ ಕನಸುಗಳು ಇರಲ್ವಾ? ಸರ್ಕಾರ ಅಕ್ಕಿ-ಕರೆಂಟು ಉಚಿತವಾಗಿ ಕೊಟ್ಟಾಕ್ಷಣ, ಬೆಲೆಯೇರಿಕೆಯ ಈ ದಿನಗಳಲ್ಲಿ ಕುಟುಂಬದ ಖರ್ಚಿಗೆ ಅಂತ ಎರಡು ಸಾವಿರ ರೂಪಾಯಿ ಕೊಟ್ಟಾಕ್ಷಣ ಅವರು ಅಷ್ಟಕ್ಕೇ ತೃಪ್ತರಾಗಿ ತಮ್ಮ ಛಲ, ಕನಸುಗಳನ್ನು ಕೈಚೆಲ್ಲಿ ಮನೇಲಿ ಮಲಗಿಕೊಳ್ತಾರಾ? ಅಥವಾ ಬಡವರಾದವರಿಗೆ ಛಲವೂ ಇರಬಾರದು, ಕನಸುಗಳೂ ಇರಬಾರದು, ನಾವು ಕೊಡೋ ಕೂಲಿ ಕಾಸಿಗೆ ಕೈಯೊಡ್ಡುತ್ತಾ ಚಾಕರಿ ಮಾಡಿಕೊಂಡೆ ಇರಬೇಕು ಅಂತಾ ನೀನು ಹೇಳ್ತಾ ಇದೀಯಾ?” ತುಸು ಖಾರವಾಗಿತ್ತು ನನ್ನ ಪ್ರತಿಕ್ರಿಯೆಯ ದನಿ.

“ಶಿಕ್ಷಣ, ಉದ್ಯೋಗ, ಪೌಷ್ಠಿಕ ಆಹಾರ ಮತ್ತು ಆರೋಗ್ಯ, ಏನಿಲ್ಲವೆಂದರೂ ಈ ನಾಲ್ಕನ್ನಾದರೂ ಸರ್ಕಾರ ತನ್ನ ಜನರಿಗೆ ಉಚಿತವಾಗಿ ದೊರಕುವಂತೆ ಮಾಡಬೇಕು. ಅದೇ ನಮ್ಮ ಸಂವಿಧಾನದಲ್ಲಿ ಉಲ್ಲೇಖವಾಗಿರುವ ‘ಜನಕಲ್ಯಾಣ’ದ ಮೂಲ ಉದ್ದೇಶ. ಆದರೆ ಈ ನಾಲ್ಕು ಸಹಾ ಇವತ್ತು ದುಡ್ಡಿದ್ದವರ ಗುಲಾಮರಾಗಿವೆ. ಮಕ್ಕಳನ್ನು ಓದಿಸಲು ಲಕ್ಷಾನುಗಟ್ಟಲೆ ಫೀಜು ಕಟ್ಟಬೇಕು, ಲಂಚ-ಲಾಬಿಯಿಲ್ಲದೆ ಉದ್ಯೋಗ ಸಿಗ್ತಾ ಇಲ್ಲ, ರೇಷನ್ ಅಂಗಡಿಯ ಅಕ್ಕಿ ಸಿಗದೇ ಹೋದರೆ ಇವತ್ತಿಗೂ ಹಸಿವಿನಿಂದ ಲಕ್ಷಾಂತರ ಜನ ಸಾಯುವಂತಹ ಪರಿಸ್ಥಿತಿಯಿದೆ, ಇನ್ನು ಆರೋಗ್ಯದ ಕತೆ ಕೇಳುವುದೇ ಬೇಡ. ಖಾಸಗಿ ಆಸ್ಪತ್ರೆಗಳು ‘ಬಿಲ್ ಹೆಸರಿನಲ್ಲಿ ಸತ್ತ ಹೆಣವನ್ನೂ ಹೊರಕ್ಕೆ ಕೊಡ್ತಾ ಇಲ್ಲ. ಇಂಥಾ ಅವ್ಯವಸ್ಥೆಯನ್ನು ಕೊನೆಗಾಣಿಸಿ, ಕಡೇ ಪಕ್ಷ ಈ ನಾಲ್ಕು ಸೌಲಭ್ಯಗಳಾದರೂ ಜನರಿಗೆ ಸುಲಭವಾಗಿ ಸಿಗುವಂತೆ ಮಾಡುವವರೆಗೆ ಸರ್ಕಾರಗಳು ಜನರಿಗೆ ಇಂಥಾ ನೂರು ಪುಕ್ಕಟೆ ಯೋಜನೆಗಳನ್ನು ಕೊಟ್ಟರೂ, ಅವು ‘ಬಿಟ್ಟಿ’ ಯೋಜನೆಗಳು ಎನಿಸಿಕೊಳ್ಳುವುದಿಲ್ಲ; ಬದಲಿಗೆ ಸರ್ಕಾರ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಸೋತಿದ್ದಕ್ಕೆ ಜನರಿಗೆ ಕೊಡುವ ‘ಕಾಂಪನ್ಸೇಷನ್ ಕಾಣಿಕೆಗಳು ಎನಿಸಿಕೊಳ್ಳುತ್ತವೆ.” ನನ್ನ ಮಾತು ಮುಗಿಯುವ ವೇಳೆಗಾಗಲೇ ಗೆಳೆಯನ ಮುಖ ಸಣ್ಣದಾಗಿತ್ತು.

“ಬೇಸರ ಮಾಡ್ಕೊಬೇಡ ಕಣಯ್ಯ. ನೀನೊಬ್ಬನೇ ಅಂತ ಅಲ್ಲ, ನಿನ್ನಂತವರು ಬಹಳ ಮಂದಿಯಿದ್ದಾರೆ. ತಮಗೆ ಅಧಿಕಾರದ ಅವಕಾಶವಿದ್ದಾಗ್ಯೂ, ಜನರಿಗೆ ಇಂಥಾ ಕಲ್ಯಾಣ ಯೋಜನೆಗಳನ್ನು ಕೊಡಲು ಯೋಗ್ಯತೆ ಇಲ್ಲದವರು, ಬೇರೆ ಪಕ್ಷದವರು ಅಂತಹ ಯೋಜನೆಗಳನ್ನು ನೀಡಿದಾಕ್ಷಣ, ಜನರನ್ನು ದಿಕ್ಕುತಪ್ಪಿಸಲು ‘ಬಿಟ್ಟಿ ಯೋಜನೆ’ ’ಜನ ಸೋಮಾರಿಗಳಾಗ್ತಾರೆ’ ಅಂತ ವಾದಗಳನ್ನು ಹರಿಬಿಡ್ತಾರೆ. ಹಣದ ಆಚೆಗೆ ಯೋಚಿಸಲಾರದ ನಮ್ಮ ನಿಮ್ಮಂತವರು ಅದನ್ನೇ ಸತ್ಯ ಅಂದುಕೊಂಡು ಪ್ರಚಾರ ಮಾಡ್ತೀವಿ. ಉಣ್ಣಕ್ಕೆ ತಿನ್ನಕ್ಕೆ ಸಿಕ್ಕಾಕ್ಷಣ, ಜನ ಸೋಮಾರಿಗಳಾಗ್ತಾರೆ ಅಂತ ಯಾರಾದರು ಅಂದರೆ, ಅಂತವರು ದುಡಿಯುವ ಮತ್ತು ಬಡಜನರ ಸ್ವಾಭಿಮಾನದ ಬದುಕನ್ನೇ ಛಲವಿಲ್ಲದ-ಕನಸುಗಳಿಲ್ಲದ ಕೀಳು ಬದುಕೆಂದು ಅವಮಾನ ಮಾಡಿದಂತೆ” ಎಂದೆ.

“ಹೌದು ಕಣಯ್ಯ, ನೀನೇಳೋದು ಸರಿ” ಚುಟುಕು ಪ್ರತಿಕ್ರಿಯೆ ಬಂತು ನನ್ನ ಗೆಳೆಯನಿಂದ…..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!