Saturday, May 18, 2024

ಪ್ರಾಯೋಗಿಕ ಆವೃತ್ತಿ

ಇತಿಹಾಸವನ್ನು ಅರಿಯದವರು, ಇತಿಹಾಸವನ್ನು ಸೃಷ್ಟಿಸಲಾರರು.

ಅದು 1938ರ ವರ್ಷ. ದೇಶಾದ್ಯಂತ ಸ್ವಾತಂತ್ರ್ಯ ಚಳವಳಿ ಉತ್ತುಂಗಕ್ಕೇರಿದ್ದ ಕಾಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದಂತೆ ಹಲವು ಧಾರೆಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದವು. ಕರ್ನಾಟಕದಲ್ಲಿಯೂ ಸ್ವಾತಂತ್ರ್ಯದ ಕಿಚ್ಚು ಹಬ್ಬತೊಡಗಿತ್ತು. ಬ್ರಿಟೀಷರ ಆಡಳಿತ ಒಪ್ಪದೇ ಅಸಹಕಾರ ಚಳವಳಿ ಆರಂಭವಾಗುತ್ತಿತ್ತು. ಅದನ್ನು ತಡೆಯಲು ಬ್ರಿಟಿಷ್ ಸರ್ಕಾರದ ಆಜ್ಞೆ ಮೇರೆಗೆ ಆಗಿನ ಮೈಸೂರು ಸರ್ಕಾರ ಚರಕದ ಚಿತ್ರವಿದ್ದ ತ್ರಿವರ್ಣ ಧ್ವಜಗಳನ್ನು ಎಲ್ಲಿಯೂ ಹಾರಿಸಬಾರದು ಎಂದು ಆದೇಶ ಹೊರಡಿಸಿತ್ತು.

ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಕಾಂಗ್ರೆಸ್ ಅಧಿವೇಶನದ ವೇಳೆ ಸರ್ಕಾರದ ಆದೇಶ ಧಿಕ್ಕರಿಸಿ ಮದ್ದೂರಿನ ಶಿವಪುರದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ಚಳವಳಿಯ ಕಹಳೆಯೂದಿದ್ದರು. ಅದು ಇಂದಿಗೂ ಶಿವಪುರ ಧ್ವಜ ಸತ್ಯಾಗ್ರಹ ಎಂದು ಇತಿಹಾಸದ ಪುಟಗಳಲ್ಲಿ ಐಸಿಹಾಸಿಕ ಘಟನೆಯಾಗಿ ದಾಖಲಾಗಿದೆ. ಅಂದಿನ ಧ್ವಜ ಸತ್ಯಾಗ್ರಹ ಹೋರಾಟ ಭಾರೀ ಯಶಸ್ಸು ಕಂಡಿತ್ತು ಮಾತ್ರವಲ್ಲ ಅದರ ಸ್ಪೂರ್ತಿಯಿಂದ ಅದು ಎಲ್ಲೆಡೆ ಮಾರ್ಧನಿಸಿತ್ತು. ಅದರ ಸ್ಫೂರ್ತಿಯಲ್ಲಿಯೇ ಗೌರಿಬಿದನೂರು ಬಳಿಯಿ ವಿದುರಾಶ್ವತ್ಥದಲ್ಲಿ ಬೃಹತ್ ಹೋರಾಟವೊಂದು ರೂಪುತಳೆದಿತ್ತು.

1938ರ ಏಪ್ರಿಲ್ 25 ರಂದು ವಿದುರಾಶ್ವತ್ಥದಲ್ಲಿ ಸಾರ್ವಜನಿಕ ಜಾತ್ರೆ ನಡೆಯುತ್ತಿತ್ತು. ಅಂದು ಅಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸತ್ಯಾಗ್ರಹ ನಡೆಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಖಂಡರು ನಿರ್ಧರಿಸಿದ್ದರು. ಅಂತೆಯೇ ಎಚ್.ಸಿ ದಾಸಪ್ಪ ಎಂಬುವವರ ಅಧ್ಯಕ್ಷತೆಯಲ್ಲಿ ಧ್ವಜ ಸತ್ಯಾಗ್ರಹ ನಡೆಸಲಾಯಿತು. ಇದನ್ನು ಸಹಿಸದ ಅಂದಿನ ಬ್ರಿಟಿಷ್ ಅಧಿಪತ್ಯದಲ್ಲಿದ್ದ ಮೈಸೂರು ಸರ್ಕಾರದ ಆದೇಶದಂತೆ ಪೊಲೀಸರು ಗುಂಡು ಹಾರಿಸಿದ್ದಾರೆ. ಏನು ನಡೆಯುತ್ತಿದೆ ಎಂದು ಜನರು ಅರಿಯುವಷ್ಟರಲ್ಲಿ 96 ಸುತ್ತಿನ ಗುಂಡಿನ ಮಳೆಗೆರೆಯಲಾಗಿದೆ. ಸ್ಥಳದಲ್ಲಿಯೇ 32 ಹೋರಾಟಗಾರರು ಹುತಾತ್ಮರಾದರು. 100ಕ್ಕೂ ಅಧಿಕ ಜನ ಗಾಯಗೊಂಡರು. ಆ ಹೋರಾಟವನ್ನು ದಕ್ಷಿಣದ ಜಲಿಯನ್ ವಾಲಾ ಭಾಗ್‌ ಹೋರಾಟ ಎಂದು ಕರೆಯಲಾಗಿದೆ.

ಇಷ್ಟೆಲ್ಲ ಏಕೆ ಹೇಳಬೇಕಾಯಿತೆಂದರೆ 2014ರ ನಂತರ ಸ್ವಾತಂತ್ರ್ಯ ಪಡೆದಿದ್ದೇವೆ ಎನ್ನುವ ಭ್ರಮೆಯಲ್ಲಿರುವ ಆರ್‌ಎಸ್‌ಎಸ್‌ ಚೆಡ್ಡಿಗಳು ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ರಾಷ್ಟ್ರಧ್ವಜ ತೆಗೆದು ಅದರ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿ ಗಲಭೆ ಸೃಷ್ಟಿಸಿದ್ದಾರೆ. ವೋಟಿನ ಆಸೆಗಾಗಿ ಬಿಜೆಪಿ – ಜೆಡಿಎಸ್ ಮುಖಂಡರು ಅದನ್ನೊಂದು ದೊಡ್ಡ ಕೋಮು ಗಲಭೆ ಮಾಡಲು ಮುಂದಾಗಿದ್ದಾರೆ. ಈ ಅವಿವೇಕಿಗಳಿಗೆ ನಮ್ಮ ಮಂಡ್ಯದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟ, ಸಾಹಿತ್ಯ, ಜಾನಪದ, ರೈತ ಚಳವಳಿ, ದಲಿತರ ಸಂಘರ್ಷದ ಇತಿಹಾಸದ ಅರಿವಿಲ್ಲ. ಇನ್ನು ಇಂದು ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆಯಂತಹ ಭೀಕರ ಸಮಸ್ಯೆಗಳು ಕಾಣುತ್ತಿಲ್ಲ. ಬದಲಿಗೆ ವೋಟಿನ ಉನ್ಮಾದದಲ್ಲಿ ಬಡವರ ರಕ್ತ ಹೀರಲು ಮುಂದಾಗಿದ್ದಾರೆ.

ಆದರೆ ನನ್ನ ಮಂಡ್ಯ ಇಂತಹ ದುಷ್ಟ ಬುದ್ದಿಯ ದುರುಳರಿಗೆ ತಲೆ ಬಾಗುವುದಿಲ್ಲ. ಇಲ್ಲಿನ ಜನ ಜೀವ ತಾಯಿ ಕಾವೇರಿಗಾಗಿ ಹೋರಾಡಿದ್ದಾರೆ. ಅನ್ನ ಬೆಳೆದಿದ್ದಾರೆ. ಸಕ್ಕರೆ ನಗರ ಎಂದು ಹೆಸರು ಪಡೆದು ವಿಷವಿಕ್ಕುವ ಕೆಲಸ ಮಾಡುವುದಿಲ್ಲ. ಆದರೆ ಅನ್ಯ ಜಿಲ್ಲೆಗಳಿಂದ ಬಂದಿರುವ ಚೆಡ್ಡಿಗಳು ಸಂಚು ನಡೆಸಿದ್ದಾರೆ. ಅದನ್ನು ಕುವೆಂಪು, ಗಾಂಧಿ, ಕನಕದಾಸ, ಮಂಟೇಸ್ವಾಮಿ, ಅಂಬೇಡ್ಕರ್, ನಂಜುಂಡಸ್ವಾಮಿಯವರ ಅನುಯಾಯಿಗಳಾದ ನಾವು ವಿಫಲಗೊಳಿಸಿ, ಸೌಹಾರ್ದ ಮಂಡ್ಯವನ್ನು ನಿರ್ಮಿಸುತ್ತೇವೆ. ಇತಿಹಾಸ ಬಲ್ಲ ನಾವು ಇತಿಹಾಸ ನಿರ್ಮಿಸುತ್ತೇವೆ.

ಮುತ್ತುರಾಜು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!