Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಪಾನ್ ದೇಶಕ್ಕೆ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು: ಮಂಜು ಪ್ರಶಂಸೆ

ಜಪಾನ್ ದೇಶದಲ್ಲಿ ಮೇ 29 ರಿಂದ ಜೂನ್ 6 ರವರೆಗೆ ನಡೆಯುವ ‘ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ’ಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಅಜಿತ್ ಪಿ.ಗೌಡ ಹಾಗೂ ಹಿತಶ್ರೀ ಪ್ರಸಾದ್ ತೆರಳುತ್ತಿರುವುದು ಹೆಮ್ಮೆಯ ವಿಷಯ ಎಂದು ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಅಧ್ಯಕ್ಷ ಮಂಜು ಪ್ರಶಂಸೆ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲು ಗೇಟ್ ಬಳಿ ಇರುವ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

ಜಪಾನ್ ದೇಶದ Hyogo International Association ಎಂಬ ಸಂಸ್ಥೆ Kobe, Hyogoದಲ್ಲಿ ನಡೆಯಲಿರುವ ”ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ” ಕ್ಕೆ ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ.ಎ.ಹುಲ್ಲುಕೆರೆ ಗ್ರಾಮದ ಪ್ರಭು ಹಾಗೂ ರಜನಿ ದಂಪತಿಯ ಪುತ್ರ ಅಜಿತ್ ಪಿ.ಗೌಡ ಹಾಗೂ ಚಾಮಲಾಪುರ ಗ್ರಾಮದ ಹರಿಪ್ರಸಾದ್ ಹಾಗೂ ಮಾಲಾ ದಂಪತಿಯ ಪುತ್ರಿ ಹಿತಶ್ರೀ ಪ್ರಸಾದ್ ಜಪಾನ್ ದೇಶಕ್ಕೆ ತೆರಳುತ್ತಿರುವುದು ನಮ್ಮ ಶಾಲೆಗೆ ಮತ್ತೊಂದು ಕೀರ್ತಿದಾಯಕ ವಿಷಯವಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ನಮ್ಮ ಶಾಲೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಶಾನ್ ಸ್ಟೀವನ್ ಹಾಗೂ 8ನೇ ತರಗತಿಯ ಧನ್ಯ ಜೆ. ಗೌಡ ಅವರು ಜಪಾನ್ ದೇಶದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು. ಇಡೀ ಕರ್ನಾಟಕ ರಾಜ್ಯದಲ್ಲಿ ಜಪಾನ್ ದೇಶಕ್ಕೆ ಆಯ್ಕೆಯಾದ ಶಾಲೆ ನಮ್ಮದು ಎನ್ನುವ ಹೆಗ್ಗಳಿಕೆ ರಿಪಬ್ಲಿಕ್ ಶಾಲೆಯದ್ದಾಗಿದೆ.

ಕಳೆದ ಬಾರಿ ಜಪಾನ್ ದೇಶಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿಯ ಜನ ಜೀವನ,ಶಿಕ್ಷಣ,ಸಂಸ್ಕೃತಿ ಬಗ್ಗೆ ನಮ್ಮ ಶಾಲೆಯ ವಿದ್ಯಾರ್ಥಿಗಳು ತಿಳಿದುಕೊಂಡಿದ್ದರು.ಜಪಾನ್‌ ವಿದ್ಯಾರ್ಥಿಗಳು ಓದಿನ ಜೊತೆಗೆ ಕರಾಟೆ, ಕುಂಗ್ ಫು,ವಿವಿಧ ಕ್ರೀಡೆಗಳು, ಶಾಲೆಗಳನ್ನು ಸ್ವಚ್ಛ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ ಎಂಬ ವಿಚಾರ, ಬುಲೆಟ್ ಟ್ರೈನ್ ಕಾರ್ಯ ನಿರ್ವಹಣೆ, ಸುನಾಮಿ ಮತ್ತು ಭೂಕಂಪ ಆದ ಸ್ಥಳಗಳಿಗೂ ಕರೆದುಕೊಂಡು ಹೋಗಿ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದರು ಎಂದರು.

ನಮ್ಮ ಶಾಲೆಯ ವಿದ್ಯಾರ್ಥಿಗಳು ಜಪಾನ್ ನಲ್ಲಿ ಕಲಿತು ಬಂದ ಹಲವು ಉತ್ತಮ ಅಂಶಗಳನ್ನು ಅಳವಡಿಸಿಕೊಂಡಿದ್ದಾರೆ.ನಮ್ಮ ದೇಶದ ಸಂಸ್ಕೃತಿ,ಶಿಕ್ಷಣ,ಸಂಪ್ರದಾಯ ಮೊದಲಾದ ವಿಷಯಗಳ ಬಗ್ಗೆ ಜಪಾನ್ ವಿದ್ಯಾರ್ಥಿಗಳು ಕೂಡ ಮಾಹಿತಿ ಪಡೆದು ಕೊಂಡರು ಎಂದರು.

ನಮ್ಮ ಶಾಲೆಯು 2021-22 ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, ಮೊದಲ ವರ್ಷದಲ್ಲೇ ಶಾಲೆಯು ಎಲ್. ಕೆ. ಜಿ .ಯಿಂದ 10ನೇ ತರಗತಿವರೆಗೆ ICSE ಮತ್ತು State Board ಪಠ್ಯಕ್ರಮಗಳು ಪ್ರಾರಂಭಗೊಂಡು, ಅದೇ ವರ್ಷದಲ್ಲಿ 280 ವಿದ್ಯಾರ್ಥಿಗಳನ್ನು ಒಳಗೊಂಡಿತ್ತು. 2022-23ನೇ ಸಾಲಿನಲ್ಲಿ 400 ವಿದ್ಯಾರ್ಥಿಗಳನ್ನು ಒಳಗೊಂಡಿರುವುದು ಹೆಮ್ಮೆಯ ವಿಷಯ. ನಮ್ಮ ಶಾಲೆಯಲ್ಲಿ ಚಟುವಟಿಕೆ ಆಧಾರಿತವಾಗಿ ಶಿಕ್ಷಣವನ್ನು ನೀಡುತ್ತಿದ್ದು, ಕರಾಟೆ,ಯೋಗ, ಕ್ರೀಡೆಯಲ್ಲೂ ಸಹ ನಮ್ಮ ಮಕ್ಕಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಕರಾಟೆ, ಯೋಗ, ಅಥ್ಲೆಟಿಕ್ಸ್ ನಲ್ಲಿ ನಮ್ಮ ಶಾಲೆಯ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದರು.

ನಮ್ಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನೃತ್ಯ, ವೇಷಭೂಷಣ ಸ್ಪರ್ಧೆ, ಕೆಸರು ಗದ್ದೆ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದು ಮಕ್ಕಳು ತುಂಬಾ ಸಂತೋಷದಿಂದ ಭಾಗವಹಿಸಿ ಸಂಭ್ರಮಿಸಿದ್ದಾರೆ. ನಮ್ಮ ಶಾಲೆಯಲ್ಲಿ 15 ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿ ಮಕ್ಕಳಲ್ಲಿ ಹುರುಪು ತುಂಬಿದ್ದೇವೆ.
2023-24 ನೇ ಸಾಲಿನಲ್ಲಿ ನಮ್ಮ ಶಾಲೆಯು 540 ವಿದ್ಯಾರ್ಥಿಗಳಿಂದ ಕೂಡಿದ್ದು,ಇದಕ್ಕೆ ಕಾರಣ ನಮ್ಮ ಶಾಲೆಯ ಶೈಕ್ಷಣಿಕ ಪ್ರಗತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸುನೀತಾ ರಾಜನ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!