Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾವೇರಿ ಹೋರಾಟಕ್ಕೆ ತ್ರೀನೇತ್ರಶ್ರೀ- ಹುಲಿಕಲ್ ನಟರಾಜು ಬೆಂಬಲ

ಕಾವೇರಿ ವಿಚಾರದಲ್ಲಿ ರಾಜ್ಯದ ರೈತ ಹಿತರಕ್ಷಣೆಗೆ ಆಗ್ರಹಿಸಿ ಮಂಡ್ಯದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಮ್ಮಿಕೊಂಡಿರುವ ಹೋರಾಟ 66 ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಚಂದ್ರವನ ಆಶ್ರಮದ ಶ್ರೀತ್ರೀನೇತ್ರ ದುರ್ದಂಡೇಶ್ವರ ಸ್ವಾಮೀಜಿ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷ ಹುಲಿಕಲ್ ನಟರಾಜು ಬೆಂಬಲ ಸೂಚಿಸಿ ಹೋರಾಟದಲ್ಲಿ ಭಾಗವಹಿಸಿದ್ದರು.

ತ್ರೀನೇತ್ರ ಸ್ವಾಮೀಜಿ ಮಾತನಾಡಿ, ಕಾವೇರಿ ಜೀವನದಿ, ಇದು ಕೊಡಗಿನಲ್ಲಿ ಹುಟ್ಟಿ ಹರಿಯುತ್ತಾ ಕನ್ನಂಬಾಡಿಯನ್ನು ಸೇರುತ್ತದೆ, ಇದು ನಮ್ಮ ಸ್ವತ್ತು. ಎಂದೋ ಮಾಡಿಕೊಂಡ ಒಪ್ಪಂದಕ್ಕಾಗಿ ನಾವು ಇಂದು ನೀರು ಹರಿಸುವ ಸ್ಥಿತಿ ಬಂದಿದೆ. ಇದಕ್ಕೆ ಇತಿಶ್ರೀ ಹಾಡಬೇಕಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಕಾವೇರಿ ನದಿ ಪಾತ್ರದ ಜನರ ಸಂಕಷ್ಟ ಸ್ಪಂದಿಸಿ, ನ್ಯಾಯ ದೊರಕಿಸಿ ಕೊಡಬೇಕೆಂದರು.

ನಾವು ನಮ್ಮ ಪ್ರತಿನಿಧಿಗಳಾಗಿ ಎಂಎಲ್ಎ, ಎಂಪಿಗಳನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದೇವೆ, ಅವರು ನಮ್ಮ ಪರವಾಗಿ ಹೋರಾಟ ನಡೆಸಬೇಕಾಗಿತ್ತು. ಅವರ ಎಡವಿದ್ದರಿಂದ ಇಂದು ನಾವು ರಸ್ತೆಯಲ್ಲಿ ಹೋರಾಟ ಮಾಡಬೇಕಾಗಿದೆ, ಇಂತಹ ರಾಜಕಾರಣಿಗಳಿಗೆ ನಾಚಿಕೆಯಾಗಬೇಕೆಂದು ಕಿಡಿಕಾರಿದರು.

ಹುಲಿಕಲ್ ನಟರಾಜು ಮಾತನಾಡಿ, ಸಿಂಧೂ ನದಿಯ ದಡದಲ್ಲಿ ನಮ್ಮ ನಾಗರೀಕತೆ ಪ್ರಾರಂಭವಾಯಿತು. ಪ್ರಕೃತಿ ನಮಗೆಂದಿಗೂ ಅನ್ಯಾಯ ಮಾಡಿಲ್ಲ, ಆದರೆ ನಮ್ಮ ದುರಾಸೆಯಿಂದ ರೆಸಾರ್ಟ್ ನಿರ್ಮಾಣ, ಗಣಿಗಾರಿಕೆ, ಕಾಡುಗಳ ನಾಶ ಮಾಡಿದ್ದರಿಂದ ಇನ್ನು ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ, ಹಾಗಾಗಿ ನಾವು ನೆಲ, ಜಲ ಉಳಿಸಿಕೊಳ್ಳಲು ಒಟ್ಟುಗೂಡಬೇಕಿದೆ ಎಂದರು.

ಗಾಯಕರಾದ ಯರಹಳ್ಳಿ ಪುಟ್ಟಸ್ವಾಮಿ, ಹುರುಗಲವಾಡಿ ರಾಮಯ್ಯ ಅವರು ಹಾಡುಗಳನ್ನು ಹಾಡುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದರು.

ಬೈಕ್ ಜಾಥ 

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲಿಸಿ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರ ನೇತೃತ್ವದಲ್ಲಿ ಬೈಕ್ ಜಾಥ ನಡೆಯಿತು.  ಜಾಥದಲ್ಲಿ ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೆರೆ, ಚಿಕ್ಕಮುಲಗೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಭಾಗವಹಿಸಿದ್ದರು. ಮಂಡ್ಯನಗರ ಸಂಜಯ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ರಾಜ್ಯ ವೈಜ್ಞಾನಿಕ ಪರಿಷತ್ತಿನ ಪರಿಷತ್ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ದುಂಡ ಲಿಂಗರಾಜ್, ವಸಂತಮ್ಮ, ಸುನಂದಮ್ಮ, ಹಿಟ್ಟನಹಳ್ಳಿ ಕೊಪ್ಪಲು ಗ್ರಾಪಂ ಅಧ್ಯಕ್ಷ ರತ್ನಮ್ಮ, ಚಿಕ್ಕಮುಲಗೂಡು ಗ್ರಾಮ ಅಧ್ಯಕ್ಷ ಮಾದೇಶ್, ಜಿಪಂ ಮಾಜಿ ಸದಸ್ಯ ಬಿ.ಟಿ ರಾಮಚಂದ್ರಯ್ಯ, ಸದಸ್ಯರಾದ ಪುಟ್ಟಸ್ವಾಮಿ, ಮುಖಂಡರಾದ ಕೆ.ಬಿ ಮಹೇಶ್, ಪ್ರದೀಪ,ಸುರೇಶ್, ನಾಗರಾಜು, ಬಾಲಕೃಷ್ಣ,ಬಂದಿಗೌಡ, ವೀರಣ್ಣ, ಸೋಮಣ್ಣ, ಸ್ವಾಮಿ, ದೇವರಾಜು, ದೋರನ ಹಳ್ಳಿ ಮಹದೇವ್ ಹಾಗೂ ರುದ್ರಣ್ಣ ಪಾಲ್ಗೊಂಡಿದ್ದರು.

ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಮ್, ಕೆ ಬೋರಯ್ಯ, ರೈತಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ದಸಂಸ ಎಂ.ವಿ ಕೃಷ್ಣ,ನಾರಾಯಣ, ಅಂಬುಜಮ್ಮ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!