Saturday, May 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ ಜಾ.ದಳದಲ್ಲಿ ಭಿನ್ನಮತ…!

ಶ್ರೀರಂಗಪಟ್ಟಣ ಜಾ.ದಳದಲ್ಲಿ ಸಣ್ಣ ಪ್ರಮಾಣದ ಭಿನ್ನಮತ ಶುರುವಾಗಿದೆ. ಜಾ‌.ದಳ ವರಿಷ್ಠರು ಈ ಸಣ್ಣ ಪ್ರಮಾಣದ ಭಿನ್ನಮತ ಬಗೆಹರಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಭುಗಿಲೇಳಬಹುದು.

ಶಾಸಕ ರವೀಂದ್ರ ಶ್ರೀಕಂಠಯ್ಯ ಜಾ.ದಳ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆಂದು ಈ ಭಾಗದ ಪ್ರಮುಖ ಜೆಡಿಎಸ್ ಮುಖಂಡರಾದ ಎಂ‌.ಸಂತೋಷ್, ಜಾ.ದಳ ಅಧ್ಯಕ್ಷ ಪೈಲ್ವಾನ್ ಮುಕುಂದ ಸೇರಿದಂತೆ ಒಂದಷ್ಟು ಮಂದಿ ಮುಖಂಡರು, ಕಾರ್ಯಕರ್ತರು ಕಳೆದ ಶನಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ‌ ಸಭೆ ಸೇರಿ ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಸಣ್ಣ ಪ್ರಮಾಣದಲ್ಲಿ ಭಿನ್ನಮತ ಹೊಗೆಯಾಡುವಂತೆ ಮಾಡಿದ್ದಾರೆ.

nudikarnataka.com

ಈ ಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮುಖಂಡರು ನಮಗೆ ವ್ಯಕ್ತಿಗಿಂತ ಪಕ್ಷವೇ ಮುಖ್ಯ ಎಂದು ಹೇಳುವ ಮೂಲಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.

ಸಭೆಯಲ್ಲಿದ್ದ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ನಾವು ಪಕ್ಷಕ್ಕೆ ಬದ್ಧರಾಗಿದ್ದೇವೆ ಹೊರತು ವ್ಯಕ್ತಿಗಲ್ಲಎಂದು ಹೇಳುವ ಮೂಲಕ ಬಂಡಾಯ ಸಾರಿದ್ದಾರೆ.

ಸಭೆಯಲ್ಲಿದ್ದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಂತೋಷ್ ಮಾತಿಗೆ ದನಿಗೂಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ರವೀಂದ್ರ ಶ್ರೀಕಂಠಯ್ಯ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಮ್ಮ ಜೊತೆಯಲ್ಲಿ ಮೂಲ ಜೆಡಿಎಸ್ ಕಾರ್ಯಕರ್ತರನ್ನು ಕರೆದೊಯ್ಯುವ ಬದಲು ತಮ್ಮ ಹಿಂದಿರುವ ಬೆಂಬಲಿಗರನ್ನು ಕರೆದು ಕೊಂಡು ಓಡಾಡುತ್ತಾರೆ. ಈ ಹಿಂದೆ ಇವರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದವರೇ ಈಗಲೂ ಶಾಸಕರ ಹಿಂದಿದ್ದಾರೆ. ಅವರು ಮೂಲ ಜೆಡಿಎಸ್ ಕಾರ್ಯಕರ್ತರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ‌ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿದ್ದ ಜೆಡಿಎಸ್‌ ತಾಲೂಕು ಅಧ್ಯಕ್ಷ ಮುಕುಂದ, ಕಾರ್ಯಾಧ್ಯಕ್ಷ ಎನ್‌.ಶಿವಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ, ಟೌನ್‌ ಅಧ್ಯಕ್ಷ ಎಂ.ಸುರೇಶ್‌, ಕಾನೂನು ಘಟಕದ ಅಧ್ಯಕ್ಷ ದರಸಗುಪ್ಪೆ ಕುಮಾರ್, ರೈತದಳ ತಾಲೂಕು ಅಧ್ಯಕ್ಷ ಡಿ.ಎಂ ರವಿ, ಪುರಸಭೆ ಮಾಜಿ ಅಧ್ಯಕ್ಷ ಆರ್.ಕೃಷ್ಣ, ಮುಖಂಡರಾದ ಕಿರಂಗೂರು ಕುಮಾರಸ್ವಾಮಿ, ಬಿ.ಎಸ್ ತಿಲಕ್ ಕುಮಾರ್, ನಾರಾಯಣ್‌, ನೆಲಮನೆ ಜಗದೀಶ್, ವಾಸು, ಕೆಆರ್‌ಎಸ್ ಬಸವರಾಜೇಗೌಡ, ಪ್ರೀತಂ ಮೊದಲಾದವರು ”ನಾವೆಲ್ಲರೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ವ್ಯಕ್ತಿ ಪೂಜೆ ಮಾಡುವವರಲ್ಲ, ಪಕ್ಷದ ಯಾವುದೇ ಸಭೆ, ಸಮಾರಂಭಗಳಿಗೆ ಪಕ್ಷದ ಕಾರ್ಯಕರ್ತರನ್ನು ಕರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿ.24ರಂದು ಜೆಡಿಎಸ್ ವರಿಷ್ಟರಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದೆ. ಅದಕ್ಕೂ ಮುಂಚೆ ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು, ನಿಷ್ಠಾವಂತ ಕಾರ್ಯಕರ್ತರ ಸಭೆ ಕರೆಯಬೇಕು. ಎಲ್ಲರನ್ನು ಸಂಘಟಿಸುವ ಮೂಲಕ ಪಂಚರತ್ನ ರಥಯಾತ್ರೆ ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿದ್ದ ಹಲವು ಮುಖಂಡರು ಸಲಹೆ ನೀಡಿದ್ದಾರೆ.

ಸಭೆಗೆ ಬರಬೇಕಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಕೊನೆಗಳಿಗೆಯಲ್ಲಿ ಬರದೇ ಕೈಕೊಟ್ಟ ಬಗ್ಗೆ ಸಭೆಯಲ್ಲಿ ಖಂಡನೆ ವ್ಯಕ್ತವಾಗಿದ್ದು, ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳಿರುವಾಗ ಭಿನ್ನಮತೀಯರ ಈ ಸಭೆಯಿಂದ ಮುಂದೇನು ಬೆಳವಣಿಗೆ ಆಗುವುದೋ ಕಾದು ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!