Friday, September 20, 2024

ಪ್ರಾಯೋಗಿಕ ಆವೃತ್ತಿ

ರೈತರ ಸಮಸ್ಯೆ ಕುರಿತು ಬೆಳಕು ಚೆಲ್ಲುವ ”ಕ್ಷೇತ್ರಪತಿ” ;ಆ.18ರಂದು ಬೆಳ್ಳಿತೆರೆಗೆ

ರೈತರ ಸಮಸ್ಯೆಗಳ ಕುರಿತಂತೆ ಬೆಳಕು ಚೆಲ್ಲುವ ”ಕ್ಷೇತ್ರಪತಿ” ಚಿತ್ರ ಬರುವ ಆ. 18ರಂದು ರಾಜ್ಯಾದ್ಯಂತ 170 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಾಯಕ ನಟ ನವೀನ್ ಶಂಕರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಇಳಕಲ್‌ನವನಾದ ನಾನು ನನ್ನೂರಿನಿಂದ ತಾಂತ್ರಿಕ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದು, ಆನಂತರ ಮಾಧ್ಯಮ, ರಂಗಭೂಮಿ, ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡಿದೆ. ಬಳಿಕ 2018ರಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಸಿನಿಮಾದಲ್ಲಿ ನಟಿಸಿದ್ದೆ. ಬಳಿಕ ಹೊಯ್ಸಳ ಸಿನಿಮಾದಲ್ಲೂ ನಟನೆ ಮಾಡಿದ್ದು, ಅದು ತನ್ನದೇ ಆದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇದೀಗ `ಕ್ಷೇತ್ರಪತಿ’ ಚಿತ್ರದಲ್ಲಿ ಬಸವ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು, ಜನರ ಮನಸೂರೆಗೊಳ್ಳುವ ನಿರೀಕ್ಷೆ ಇದೆ ಎಂದರು.

ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹೊಂದಿರುವ ಈ ಚಿತ್ರದಲ್ಲಿ ತಂದೆ-ಮಗನ ಕುರಿತಾದ ಕಥಾ ಹಂದರವಿದ್ದು, ಬಸವನ ಪಾತ್ರ ಹೋರಾಟದ ಬದುಕಾಗಿಯೇ ಪರಿಣಮಿಸುತ್ತದೆ. ಸಾಮಾನ್ಯ ಹುಡುಗನಾಗಿ ಅಸಾಮಾನ್ಯ ರೂಪಪಡೆದುಕೊಳ್ಳುವತ್ತ ಸಾಗುತ್ತದೆ. ಪ್ರಸ್ತುತ ದಿನಗಳಲ್ಲಿ ರೈತರ ಸಮಸ್ಯೆಗಳು ಮತ್ತು ಅದಕ್ಕೆ ಸ್ವಲ್ಪ ಮಟ್ಟಿನ ಪರಿಹಾರವನ್ನೂ ಸಹ ಕಾಣಬಹುದಾಗಿದೆ. ಇದರಲ್ಲಿ ಕೇವಲ ಬಸವನೊಬ್ಬನ ಕಥೆಯಲ್ಲ. ಚಿತ್ರ ನೋಡುಗರಿಗೆ ನನ್ನದೇ ಕಥೆ ಎಂಬಂತೆ ಭಾಸವಾಗುತ್ತದೆ ಎಂದು ಹೇಳಿದರು.

ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದು, ಖಳನಟನಾಗಿ ರಾಹುಲ್ ಜೈನಾಪುರ್ ಅವರು ಅಮೋಘ ಅಭಿನಯ ನೀಡಿದ್ದಾರೆ. ನಾಯಕಿ ನಟಿಯಾಗಿ ಅರ್ಚನಾ ಜೋಯಿಷಿ ನಟಿಸಿದ್ದು, ರವಿ ಬಸೂರು ಅವರ ಸಂಗೀತ ಮತ್ತು ಸಾಹಿತ್ಯ ಚಿತ್ರಕ್ಕಿದೆ. ನಾಲ್ಕು ಹಾಡುಗಳಿದ್ದು, ಈ ಪೈಕಿ ಒಂದು ಹಾಡು ಉತ್ತರ ಕರ್ನಾಟಕ ಭಾಷಾ ಶೈಲಿಯಲ್ಲೇ ಇದೆ. ನಾಳೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗುವುದು. ಉತ್ತಮವಾಗಿ ಹೊರಬಂದಿವೆ ಎಂದು ತಿಳಿಸಿದರು. ಸ್ನೇಹಿತರ ತಂಡದ ಅಶ್ರುಲಾ ಕ್ರಿಯೇಷನ್ಸ್ ಮತ್ತು ಇಎಫ್‌ಜಿ ಸಂಸ್ಥೆಗಳು ಚಿತ್ರವನ್ನು ನಿರ್ಮಾಣ ಮಾಡಿವೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವು ಚಿತ್ರಗಳು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಾಣುತ್ತವೆ. ಆದರೆ ಇನ್ನು ಕೆಲವು ಚಿತ್ರಗಳು ಓಟಿಟಿಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ಒಟ್ಟಾರೆ ಪ್ರಸ್ತುತ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವಲ್ಲಿ ಎಲ್ಲ ಚಿತ್ರಗಳೂ ವಿಫಲವಾಗಿವೆ. ಅದಕ್ಕೆ ಚಿತ್ರೋದ್ಯಮವೇ ಕಾರಣ. ಮತ್ತೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು, ಹಳೆಯ ಪದ್ಧತಿ ಪುನರಾವರ್ತನೆಯಾಗುವ ಕಾಲ ಬರುತ್ತದೆ. ಅಲ್ಲಿಯವರೆಗೂ ಕಾಯುವುದು ಅನಿವಾರ‍್ಯವಾಗಿದೆ ಎಂದು ಹೇಳಿದರು. ಖಳನಟ ರಾಹುಲ್ ಜೈನಾಪುರ್ ಇತರರು ಗೋಷ್ಠಿಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!