Monday, May 20, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ಪ್ರಕರಣವನ್ನು ಕುಮಾರಸ್ವಾಮಿ ಬೀದಿರಂಪ ಮಾಡುತ್ತಿದ್ದಾರೆ: ಚಲುವರಾಯಸ್ವಾಮಿ

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಮಾಜಿ ಸಿಎಂ ಆದವರು ದಿನನಿತ್ಯ ದಿನಕ್ಕೊಂದು ಹೇಳಿಕೆ ನೀಡುತ್ತಾ ಬೀದಿರಂಪ, ಹಾದಿರಂಪ ಮಾಡಿಕೊಂಡು ಕುಳಿತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನಿಸಿದ ಕೃಷಿ ಸಚಿವ ಎನ್.ಚಲುರಾಯಸ್ವಾಮಿ ಅವರು, ಆ ವಿಚಾರ ಮಾತನಾಡಲು ನಮಗೆ ಮುಜುಗರವಾಗುತ್ತಿದೆ ಎಂದು ಹೇಳಿದರು.

ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ ಡ್ರೈವ್ ಪ್ರಕರಣ ನಡೆಯಲು ಯಾರ ಕುಟುಂಬ ಕಾರಣ ? ಯಾವ ಸಾಧನೆಗಾಗಿ ಜೆಡಿಎಸ್ ಮುಖಂಡರು ಪ್ರತಿಭಟನೆ ಮಾಡುತ್ತಿದ್ದಾರೆ? ಪ್ರಕರಣವನ್ನು ದಿಕ್ಕು ತಪ್ಪಿಸಲು ಪ್ರತಿಭಟನೆ ಮಾಡ್ತಿದ್ದಾರಾ? ಅಥವಾ ನಮ್ಮ ಹುಡುಗ ಮಾಡಿರುವುದು ಸರಿ ಇದೆ ಎನ್ನುವ ಸಂತೋಷಕ್ಕೆ ಮಾಡುತ್ತಿದ್ದಾರಾ ? ಎಂದು ವಾಗ್ದಾಳಿ ನಡೆಸಿದರು.

ಸಂತ್ರಸ್ತ ಕುಟುಂಬದವರು ಪಕ್ಕದ ಮನೆ ಮದುವೆಗೆ ಹೋಗಕ್ಕಾಗಲ್ಲ. ಕುಟುಂಬದವರು ಒಟ್ಟಿಗೆ ಕುಳಿತು ಊಟ ಮಾಡಕ್ಕಾಗಲ್ಲ. ಈ ಸಾಧನೆಗಾಗಿ ಪ್ರತಿಭಟನೆ ಮಾಡುತ್ತಿದ್ದಾರಾ ? ಯಾವ ಸಾಧನೆಗಾಗಿ ಜೆಡಿಎಸ್ ಪಕ್ಷದವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಜ್ವಲ್ ಕರೆಸಬೇಕಿತ್ತು

ಜನಸಾಮಾನ್ಯರು ಅಪರಾಧ ಮಾಡಿದರೆ ಅವರ ಅಪ್ಪನೋ ಅಣ್ಣನನ್ನು ಠಾಣೆಗೆ ಕರೆದು ಕೂರಿಸುತ್ತಾರೆ. ಇವರು ಜವಾಬ್ದಾರಿ ತೆಗೆದುಕೊಂಡು ಪ್ರಜ್ವಲ್ ಕರೆಸಬೇಕಿತ್ತು. ಸಿಬಿಐ ಇಷ್ಟು ವರ್ಷ ನಡೆಸಿದ ತನಿಖೆಗಳು ಕ್ಲೀನ್ ಚಿಟ್ ಆಗಿವೆ. ರಾಜ್ಯದ ಪೊಲೀಸ್ ಅಧಿಕಾರಿಗಳು ಸಮರ್ಥರಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವುದರಿಂದ ಅವರ ವ್ಯಕ್ತಿತ್ವ ಅಲ್ಲಾಡಿಸಬಹುದು ಅಂದುಕೊಂಡಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಸಂತ್ರಸ್ತೆಯರಿಗೆ ದೌರ್ಜನ್ಯ ನಡೆಸಿದ್ದಾರೆ ಎಂಬ ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಅವರು ಆರೋಪ ಮಾಡುತ್ತಾರೆ ಎಂದು ನೀವು ಪ್ರಶ್ನೆ ಕೇಳೋದು ತಪ್ಪು ಎಂದು ಮಾಧ್ಯಮದವರಿಗೆ ಹೇಳಿದ ಅವರು, ವಕೀಲ ದೇವರಾಜೇಗೌಡ ಸಾಕಷ್ಟು ಬಾರಿ ಹೇಳಿದ್ದಾರೆ. 6 ತಿಂಗಳ ಮೊದಲೇ ಪೆನ್‌ ಡ್ರೈವ್  ಸಿಕ್ಕಿತ್ತು ಎಂದು. ಅಲ್ಲಿಗೆ ಕಿರುಕುಳ ಯಾರು ಕೊಟ್ಟಿದ್ದಾರೆ ಹೇಳಿ ? ಕುಮಾರಸ್ವಾಮಿಯನ್ನು ದೇವರಾಜೇಗೌಡ ಭೇಟಿ ಆಗಿದ್ದಾರೆ, ಯಾಕೆ ಭೇಟಿ ಆಗಿದ್ದರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಪರಿಷತ್ ಚುನಾವಣೆಗೆ ಸಿದ್ದತೆ

ಮಂಡ್ಯನಗರದ ಸುಮರವಿ ಕಲ್ಯಾಣಮಂಟಪದಲ್ಲಿ ನಡೆದ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪಕ್ಷದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ, ಈ ಹಿಂದೆ ಬಿಜೆಪಿ ಸರ್ಕಾರ ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಾಗ, ಜೆಡಿಎಸ್ ನಲ್ಲಿದ್ದ ನಾನು ಅದನ್ನು ವಿರೋಧಿಸಿ ಸಹಿಯನ್ನು ಹಾಕಲಿಲ್ಲ. ಈ ಮೂಲಕ ನಾನು ರೈತಪರವಾಗಿದ್ದೆ, ಏಕೆಂದರೆ ನಾನು ರೈತ ಕುಟುಂಬದಿಂದ ಬಂದವನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮುಂಬರುವ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ದುಡಿಯಬೇಕು, ನಮ್ಮ ಸರ್ಕಾರ ರಾಜ್ಯದಲ್ಲಿ ಇನ್ನೂ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ, ಈ ಚುನಾವಣೆ ಮುಗಿದ ನಂತರ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿಯೇ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!