Tuesday, May 21, 2024

ಪ್ರಾಯೋಗಿಕ ಆವೃತ್ತಿ

ಜೂ.30ರಿಂದ ಮೈಶುಗರ್ ಕಾರ್ಯಾರಂಭ : ಈ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸುವ ಗುರಿ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಸೂರು ಸಕ್ಕರೆ ಕಾರ್ಖಾನೆಯು ಈ ಸಾಲಿನಲ್ಲಿ ತನ್ನ ಕಾರ್ಯಾರಂಭಕ್ಕೆ ಸರ್ವ ಸನ್ನದ್ದವಾಗಿದ್ದು, ಜೂ. 30ರಿಂದ ಕಬ್ಬು ನುರಿಸುವ ಕಾರ್ಯ ಆರಂಭವಾಗಲಿದೆ ಎಂದು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಪಾಟೀಲ್ ತಿಳಿಸಿದರು.

ಮಂಡ್ಯದಲ್ಲಿ ಶನಿವಾರ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಕಬ್ಬು ಪೂರೈಸಿದ 14 ದಿನಗಳೊಳಗೆ ಹಣ ಪಾವತಿಸಲಾಗುವುದು. ರೈತರು ಕಂಪನಿಯ ಏಳಿಗೆಗಾಗಿ ತಾವು ಬೆಳೆದ ಗುಣಮಟ್ಟದ ಕಬ್ಬನ್ನು ಖಾಸಗಿ ಕಾರ್ಖಾನೆಗಳಿಗೆ ಪರಭಾರೆ ಮಾಡದೆ ಮೈಸೂರು ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ಮನವಿ ಮಾಡಿದರು.

ಕಾರ್ಖಾನೆಯ ಯಂತ್ರಗಳು ಸೇರಿದಂತೆ ಎಲ್ಲ ರೀತಿ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ. ಅಲ್ಲದೆ, ಕಬ್ಬು ಸಾಗಣೆ ಮಾಡಲು ಟ್ರಾಕ್ಟರ್ ಮತ್ತು ಲಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಕಬ್ಬು ಕಟಾವು ಮಾಡುವವರು, ಸಾಗಾಣಿಕೆದಾರರಿಗೆ ವಾರಕ್ಕೊಮ್ಮೆ ಹಣ ಪಾವತಿಸಲಾಗುವುದು ಎಂದು ಹೇಳಿದರು.

nudikarnataka.com

ಕಳೆದ ವರ್ಷ ಪ್ರತಿ ದಿನ 12 ಗಂಟೆ ಕಾರ್ಖಾನೆಯನ್ನು ನಡೆಸಿ 1800 ಟನ್ ಕಬ್ಬು ಅರೆದು ಪರಿಶೀಲನೆ ಮಾಡಲಾಗಿದೆ. ಹೀಗಾಗಿ ಈ ವರ್ಷ ಕಾರ್ಖಾನೆಯು ನಿತ್ಯ 5,000 ಟನ್ ಕಬ್ಬು ಅರೆಯುವ ಸಾಮರ್ಥ್ಯವಿದ್ದರೂ ಪ್ರತಿದಿನ 3,000 ರಿಂದ 3,500 ಟನ್ ಕಬ್ಬು ಅರೆಯಲು ಗುರಿ ಹೊಂದಲಾಗಿದೆ ಎಂದರು.

ಕಳೆದ ವರ್ಷ ಯಂತ್ರೋಪಕರಣಗಳ ಸಮಸ್ಯೆ ಹೆಚ್ಚಾಗಿತ್ತು. ಅದೆಲ್ಲವನ್ನೂ ಪರಿಹರಿಸಿಕೊಳ್ಳುವಲ್ಲಿ ವಿಳಂಬವಾಯಿತು. ಹೀಗಾಗಿ 1 ಲಕ್ಷ ಟನ್ ಕಬ್ಬನ್ನಷ್ಟೇ ಅರೆಯಲು ಸಾಧ್ಯವಾಯಿತು. ಆದರೆ, ಈ ವರ್ಷ 5.50 ಲಕ್ಷ ಟನ್ ಕಬ್ಬನ್ನು ರೈತರಿಂದ ಒಪ್ಪಿಗೆ ಮಾಡಿಕೊಳ್ಳಲಾಗಿದ್ದು, ಕನಿಷ್ಠ 4 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸರ್ಕಾರದ ₹50 ಕೋಟಿ ಕಾರ್ಖಾನೆ ಖಾತೆಗೆ ಜಮೆ

ಸರ್ಕಾರದಿಂದ ಕಾರ್ಖಾನೆಯ ಖಾತೆಗೆ 50 ಕೋಟಿ ಹಣ ಜಮೆ ಆಗಿದೆ. ಸದ್ಯಕ್ಕೆ ಹಣದ ಕೊರತೆ ಇಲ್ಲ. ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳಿಗೊಮ್ಮೆ ಹಣ ಬಿಡುಗಡೆ ಮಾಡಲಾಗುವುದು. ಕಾರ್ಖಾನೆಯಲ್ಲಿ 18 ಸಾವಿರ ಕ್ವಿಂಟಲ್ ಸಕ್ಕರೆ ಇದ್ದು, ಅದನ್ನು ಮಾರಾಟ ಮಾಡಿ ಹಣಕಾಸಿನ ಪರಿಸ್ಥಿತಿಯನ್ನು ಸರಿದೂಗಿಸಲಾಗುವುದು ಎಂದು ಅಪ್ಪಾ ಸಾಹೇಬ್ ಪಾಟೀಲ್ ವಿವರಿಸಿದರು.

ನುರಿತ ತಜ್ಞರು ನಮ್ಮಲ್ಲೇ ಇದ್ದಾರೆ 

ಪ್ರಸ್ತುತ ಪ್ರಮುಖ ಯಂತ್ರೋಪಕರಣಗಳನ್ನು ಪೂನಾ, ಕೊಲ್ಲಾಪುರಕ್ಕೆ ಕಳುಹಿಸಿ ದುರಸ್ತಿ ಮಾಡಿಸಿ, ಪರೀಕ್ಷಿಸಲಾಗಿದೆ. ಶೇ.90ರಷ್ಟು ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲ. ಏನೇ ಸಮಸ್ಯೆ ಎದುರಾದರೂ ಅದನ್ನು ಸ್ಥಳದಲ್ಲೇ ಪರಿಹರಿಸಲು ನಮ್ಮಲ್ಲಿ ನುರಿತ ತಜ್ಞರು ಇದ್ದಾರೆ. ಈಗಾಗಲೇ ಕಳೆದೆರಡು ದಿನಗಳಿಂದ ಪರೀಕ್ಷಾರ್ಥ ಕೂಡ ನಡೆಯುತ್ತಿದೆ ಎಂದರು.

ಕೋ-ಜನ್ ಸಾಮರ್ಥ್ಯ ಇಳಿಕೆ

ಇಲ್ಲಿನ ಸಹ ವಿದ್ಯುತ್ ಘಟಕವು 30 ಮೆಗಾವ್ಯಾಟ್ ಸಾಮರ್ಥ್ಯದ್ದಾಗಿದೆ. ಆದರೆ, ಅದರ ಸಾಮರ್ಥ್ಯಕ್ಕನುಗುಣವಾಗಿ ಕಬ್ಬು ಅರೆಯುವಿಕೆ ಸಾಧ್ಯವಿಲ್ಲ. ಕಬ್ಬಿನ ಕೊರತೆಯಾಗಲಿದೆ. ಹೀಗಾಗಿ ಸಹ ವಿದ್ಯುತ್ ಘಟಕದ ಟರ್ಬೈನ್‌ನ್ನು ಬ್ಯಾಕ್ ಪ್ರೆಷರ್ ಆಗಿ ಪರಿವರ್ತಿಸಿ, 20 ರಿಂದ 24 ಮೆಗಾವ್ಯಾಟ್‌ಗೆ ಇಳಿಸಲಾಗಿದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ಕಬ್ಬು ಪೂರೈಕೆದರೂ ಸಹ ವಿದ್ಯುತ್ ಘಟಕವನ್ನು ಚಾಲನೆ ಮಾಡಬಹುದು ಎಂದು ವಿವರಿಸಿದರು.

ನಿರೀಕ್ಷೆಯಂತೆ ನಿತ್ಯ 3 ರಿಂದ 4 ಸಾವಿರ ಟನ್ ಕಬ್ಬನ್ನು ಅರೆದರೆ, ಕಾರ್ಖಾನೆಗೆ ಬೇಕಾದ 6-7 ಮೆಗಾವ್ಯಾಟ್ ವಿದ್ಯುತ್ತನ್ನು ಬಳಸಿಕೊಂಡು, ಉಳಿದದ್ದನ್ನು ಸೆಸ್ಕ್ ಗೆ ಪೂರೈಸಬಹುದು. ಆಗ ಸೆಸ್ಕ್ ನಿಂದಲೇ ನಮಗೆ ವಿದ್ಯುತ್ ಮಾರಾಟ ಮೊತ್ತ ಪಾವತಿಯಾಗುತ್ತದೆ. ಆಗ ಸೆಸ್ಕ್ ವಿದ್ಯುತ್ ಬಾಕಿ ಮೇಲಿನ ಹೊರೆಯೂ ಕಡಿಮೆಯಾಗಲಿದೆ ಎಂದು ವಿವರಿಸಿದರು.

191 ಕೋಟಿ ರೂ. ಹೊಣೆಗಾರಿಕೆ ಇದೆ

ಸೆಸ್ಕ್ ಗೆ ಪಾವತಿಸಬೇಕಾದ 40 ಕೋಟಿ ರೂ. ವಿದ್ಯುತ್ ಬಾಕಿ ಕೆಎಸ್‌ಐಡಿಸಿ ಬಾಕಿ 90 ಕೋಟಿ ರೂ., ಆದಾಯ ತೆರಿಗೆ 37 ಕೋಟಿ ರೂ. ಸೇರಿದಂತೆ ಒಟ್ಟು 191 ಕೋಟಿ ರೂ.ಗಳನ್ನು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಮೈಶುಗರ್ ಪಾವತಿಸಬೇಕಿದೆ. ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಮಾರಾಟದಿಂದ ಸೆಸ್ಕ್ ಬಾಕಿ ಹಣನ್ನು ತೀರಿಸಲಾಗುವುದು ಎಂದರು.

ಮೈಶುಗರ್ ಮುಖ್ಯ ಕಬ್ಬು ಅಭಿವೃದ್ಧಿ ಅಧಿಕಾರಿ ಡಿ.ಎನ್.ಚಂದ್ರಶೇಖರ್ ಗೋಷ್ಠಿಯಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!