Wednesday, May 15, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ನಿಷ್ಠೆ ಬದಲಿಸಿದ ಶಾಸಕ ಎಂ.ಶ್ರೀನಿವಾಸ್ ಬೆಂಬಲಿಗರು

ಮೊನ್ನೆಯಷ್ಟೇ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಸರಿ ಇಲ್ಲ… ನಾವು ಅವರನ್ನು ಒಪ್ಪೋದಿಲ್ಲ… ಅವರ ವಿರುದ್ಧ ಸ್ವಾಭಿಮಾನಿ ಬಣದಿಂದ ಅಭ್ಯರ್ಥಿ ಹಾಕಿ ಹೋರಾಟ ಮಾಡುತ್ತೇವೆ ಎಂದೆಲ್ಲ ಜೆಡಿಎಸ್ ವರಿಷ್ಠರ ವಿರುದ್ಧ ಸಿಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಎಂ‌. ಶ್ರೀನಿವಾಸ್ ಬೆಂಬಲಿಗರು ಇಂದು ಅವರ ಕಡೆಗಿದ್ದ ನಿಷ್ಟೆ ಬದಲಿಸಿ ಪಕ್ಷ ನಿಷ್ಟೆ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಟಿಕೆಟ್ ಗೊಂದಲಕ್ಕೆ ಶಾಸಕ ಎಂ. ಶ್ರೀನಿವಾಸ್ ಅವರೇ ಕಾರಣ. ಅವರು ವಿಜಯಾನಂದ ಅವರನ್ನು ಬಲಿಪಶು ಮಾಡುತ್ತಾರೆ ಎಂದೆಲ್ಲ ಆರೋಪ ಮಾಡುವ ಮೂಲಕ ಎಂ. ಶ್ರೀನಿವಾಸ್ ನಿಷ್ಠೆ ಬದಲಿಸಿ, ಪಕ್ಷ ನಿಷ್ಠೆ ಎಂದು ಹೇಳುತ್ತಿರುವ ಇವರ ನಡೆ ಅಚ್ಚರಿ ತಂದಿದೆ.

ಮಂಡ್ಯ ನಗರಸಭೆಯ ಅಧ್ಯಕ್ಷ ಎಚ್.ಎಸ್. ಮಂಜು ಸದಸ್ಯರಾದ ನಾಗೇಶ್ ಸೇರಿದಂತೆ 20 ಕ್ಕೂ ಹೆಚ್ಚು ಸದಸ್ಯರು ಇದುವರೆಗೆ ಎಂ. ಶ್ರೀನಿವಾಸ್ ಅವರ ಪಾಳಯದಲ್ಲಿ ಗುರುತಿಸಿಕೊಂಡು ಅವರು ಹೇಳಿದಂತೆ ಮಾಡುತ್ತೇವೆ ಎಂದಿದ್ದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ರಾಮಚಂದ್ರ ಅವರಿಗೆ ವರಿಷ್ಠರು ನೀಡಿದ್ದ ದಿನ ಎಂ. ಶ್ರೀನಿವಾಸ್ ನೇತೃತ್ವದಲ್ಲಿ ಸಭೆ ನಡೆಸಿದ್ದ ನಗರಸಭಾ ಸದಸ್ಯರು ಹಾಗೂ ಅವರ ಬೆಂಬಲಿಗರು ವರಿಷ್ಠರ ವಿರುದ್ಧ ಸಿಟ್ಟಿನಿಂದ ಕೂಗಾಡಿದ್ದರು. ಜೆಡಿಎಸ್ ಟಿಕೆಟ್ ನಿಷ್ಠಾವಂತರಿಗೆ ನೀಡದೆ ಹೊರಗಿನವರಿಗೆ ನೀಡಿದ್ದಾರೆ ಎಂದೆಲ್ಲಾ ಆಕ್ರೋಶ ವ್ಯಕ್ತಪಡಿಸಿ ಸ್ವಾಭಿಮಾನ ಪಡೆಯಿಂದ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಮಾಧ್ಯಮಗಳ ಮುಂದೆ ಕೋಪದಿಂದ ನುಡಿದಿದ್ದರು.

ಅದರಂತೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏ.20 ರಂದು ಸ್ವಾಭಿಮಾನಿ ಪಡೆಯಿಂದ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ ಆನಂದ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್. ಯೋಗೇಶ್ ಹಾಗೂ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡರಿಂದ ನಾಮಪತ್ರ ಹಾಕಿಸಿದ್ದರು.ಅಂತಿಮ ಕಣದಲ್ಲಿ ಕೆ.ಎಸ್.ವಿಜಯ್ ಆನಂದ್ ಉಳಿಸುವ ಆಲೋಚನೆಯನ್ನು ಮಾಡಿದ್ದರು.

ಇದಾಗಿ ಮೂರು ದಿನ ಕಳೆಯುವಷ್ಟರಲ್ಲೇ ಎಂ. ಶ್ರೀನಿವಾಸ್ ನಿಷ್ಠಾವಂತ ಬೆಂಬಲಿಗರ ಕೋಪವನ್ನು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಶಮನಗೊಳಿಸಿ, ಪಕ್ಷದ ಅಭ್ಯರ್ಥಿ ರಾಮಚಂದ್ರು ಪರ ಕೆಲಸ ಮಾಡುವಂತೆ ಅಣಿಗೊಳಿಸಿದ್ದಾರೆ.

ಶಾಸಕ ಎಂ.ಶ್ರೀನಿವಾಸ್ ಬೆಂಬಲಿಗರಾಗಿ ಅವರ ಜೊತೆಯಲ್ಲಿ ಕೊನೆಯವರೆಗೂ ನಿಲ್ಲುವುದಾಗಿ ಹೇಳಿದ್ದ ನಗರಸಭಾ ಸದಸ್ಯರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದ್ದಲ್ಲದೆ ಎಂ. ಶ್ರೀನಿವಾಸರವರಿಗೂ ಶಾಕ್ ನೀಡಿದೆ.
ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಬಿ.ಆರ್ ರಾಮಚಂದ್ರು ಹಾಗೂ ಬಂಡಾಯ ಅಭ್ಯರ್ಥಿ ಕೆ. ಎಸ್. ವಿಜಯ್ ಆನಂದ್ ನಡುವಿನ ಕದನದಲ್ಲಿ ಯಾವ ಫಲಿತಾಂಶ ಬರುವುದೋ ಎಂಬ ಕುತೂಹಲ ಮೂಡಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!