Monday, May 20, 2024

ಪ್ರಾಯೋಗಿಕ ಆವೃತ್ತಿ

ಸಹಸ್ರಾರು ಭಕ್ತರ ಉದ್ಘೋಷದ ನಡುವೆ ನಡೆದ ಮಳವಳ್ಳಿ ಸಿಡಿ

ಮಳವಳ್ಳಿ ಪಟ್ಟಣದಲ್ಲಿ ಇತಿಹಾಸ ಪ್ರಸಿದ್ದ ಗ್ರಾಮದೇವತೆ ಪಟ್ಟಲದಮ್ಮನ ಸಿಡಿಹಬ್ಬವು ಸಾವಿರಾರು ಭಕ್ತರ ಉದ್ಘೋಷದ ನಡುವೆ ಸಂಭ್ರಮದಿಂದ ನೆರವೇರಿತು. ಎಲ್ಲಾ ಸಮುದಾಯಗಳ ಭಕ್ತರು ಶ್ರದ್ಧಾ ಭಕ್ತಿಯಿಂದ ಸಿಡಿರಣ್ಣನನ್ನು ಕಣ್ತುಂಬಿ ಕೊಂಡರು .ಸಾವಿರಾರು ಜನರು ಸಿಡಿಹಬ್ಬದಲ್ಲಿ ಪಾಲ್ಗೊಂಡು ಪುನೀತರಾದರು.

ಘಟ್ಟ ಮೆರವಣಿಗೆ ಶುಕ್ರವಾರ ರಾತ್ರಿ ಮೊದಲಿಗೆ ಪೇಟೆ ಒಕ್ಕಲಗೇರಿಯ ನೂರಾರು ಮಹಿಳೆಯರು ಘಟ್ಟ ಹೊತ್ತು, ಹರಕೆ ಹೊತ್ತವರು ಬಾಯಿಬೀಗ ಹಾಕಿಸಿಕೊಂಡು ಮೆರವಣಿಗೆ ಮೂಲಕ ಪಟ್ಟಲದಮ್ಮನ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ನಂತರ ಸಿದ್ದಾರ್ಥ ನಗರ ,ಕೀರ್ತಿ ನಗರ, ಅಶೋಕ ನಗರ, ಗಂಗಾಮತಸ್ಥ ಬಡಾವಣೆ ಹಾಗೂ ಬಸವಲಿಂಗಪ್ಪ ನಗರದ ನಿವಾಸಿಗಳು ಪ್ರತ್ಯೇಕವಾಗಿ ನಿಗದಿಪಡಿಸಿದ ಸಮಯದಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು.

ಸಿಡಿ ಸಂಭ್ರಮ

ಮದ್ಯರಾತ್ರಿ ಕೋಟೆ ಬೀದಿ ಚಿನ್ನೇಗೌಡರ ಮನೆ ಮುಂದೆ 44 ಅಡಿ ಉದ್ದದ ತವಸದ ಮರ(ಸಿಡಿ) ಸಿದ್ದಪಡಿಸಿ ಅದಕ್ಕೆ ಹೂವು ಹಾಗೂ ಬಲೂನುಗಳನ್ನು ಕಟ್ಟಿ ಶೃಂಗರಿಸಲಾಯಿತು. ನಂತರ ಗಂಗಾಮತಸ್ಥ ಬೀದಿಯ ಪಟ್ಟಲದಮ್ಮ ದೇವಸ್ಥಾನದಲ್ಲಿದ್ದ ಸಿಡಿರಣ್ಣನ ಗೊಂಬೆಯನ್ನ ತಂದು ಸಿಡಿ ಮರಕ್ಕೆ ಕಟ್ಟಲಾಯಿತು. ಸಿಡಿ ಎಳೆಯಲು ಸಿದ್ದಾರ್ಥ ನಗರದಿಂದ ನೀಡಲಾಗಿದ್ದ ಹಗ್ಗವನ್ನು ಕಟ್ಟಿದ ನಂತರ ಸಿಡಿರಣ್ಣನಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯಲು ಚಾಲನೆ ನೀಡಲಾಯಿತು. ಸಿಡಿ ಸಾರಂಗಪಾಣಿ ದೇವಸ್ಥಾನ ರಸ್ತೆ, ಗಂಗಾಧರೇಶ್ವರಸ್ವಾಮಿ ದೇವಸ್ಥಾನ ರಸ್ತೆ, ಕಾಲಮ್ಮನಗುಡಿದೇವಸ್ಥಾನದ ರಸ್ತೆ, ಪೇಟೆ ಬೀದಿ,ಗಂಗಾಮತ ಬಡಾವಣೆಯ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಬೆಳಿಗ್ಗೆ ಪಟ್ಟಣದ ದೊಡ್ಡಕೆರೆ ಬಳಿ ಇರುವ ಪಟ್ಟಲದಮ್ಮನ ದೇವಾಲಯದ ಬಳಿಗೆ ಸಂಪ್ರದಾಯದಂತೆ ಮೂರು ಸುತ್ತು ತಿರುಗಿಸಿದ ನಂತರ ಸಿಡಿ ಹಬ್ಬವನ್ನು ಅಂತಿಮ ಗೊಳಿಸಲಾಯಿತು. ಸಿಡಿಹಬ್ಬಕ್ಕೆ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತರು ಹಣ್ಣು, ಜವನ ಎಸೆದು ಧನ್ಯತೆ ಮೆರೆದರು.

nudikarnataka.com

ಕೊಂಡ ಹಾದು ಹರಕೆ ತೀರಿಸಿದರು

ಕೊಂಡೋತ್ಸವ ತಮ್ಮಡಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ರೈತರು ತಮಟೆ ಹಾಗೂ ಮಂಗಳವಾದ್ಯದೊಂದಿಗೆ, ಜಾನುವಾರುಗಳಿಂದ ಕೊಂಡಕ್ಕೆ ಸೌದೆ ತಂದರು, ಪ್ರಮುಖ ಬೀದಿಗಳಲ್ಲಿ ಸೌದೆ ತಂದ ಹಸುಗಳು ಮೆರವಣಿಗೆ ಸಾಗಿದ ಸಂದರ್ಭದಲ್ಲಿ ಮಹಿಳೆಯರು ಗೋವುಗಳಿಗೆ ಪೂಜೆ ಸಲ್ಲಿಸಿ ನಮಿಸಿದರು. ರಾತ್ರಿ ಪೂರ್ತಿ ಕೊಂಡವನ್ನು ಸಿದ್ದಪಡಿಸಲಾಯಿತು. ಪ್ರತಿವರ್ಷದಂತೆ ಪೂಜಾರಿ ರಘು ಕೊಂಡಕ್ಕೆ ಪೂಜೆ ಸಲ್ಲಿಸಿದ ನಂತರ ಕೊಂಡ ಹಾಯ್ದರು. ಹರಕೆ ಹೊತ್ತಿದ್ದ ಹಲವಾರು ಮಂದಿ ಕೊಂಡ ಹಾದು ಹರಕೆ ತೀರಿಸಿದರು.

ಪೊಲೀಸ್ ಸರ್ಪಗಾವಲು 

ಮಳವಳ್ಳಿ ಪಟ್ಟಣದಲ್ಲಿ ನಡೆಯುವ ಸಿಡಿಹಬ್ಬದ ವೀಕ್ಷಣೆಗಾಗಿ ಶುಕ್ರವಾರ ಮತ್ತು ಶನಿವಾರ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮತ್ತು ಅಪರ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ ವಿಭಾಗದ ಡಿವೈಎಸ್‌ಪಿ ನವೀನ್ ಕುಮಾರ್ ಸೇರಿದಂತೆ ಮೂವರು ಡಿವೈಎಸ್‌ಪಿಗಳ ಜೊತೆಗೆ ಸರ್ಕಲ್ ಇನ್ಸ್ ಪೆಕ್ಟರ್ ಎ.ಕೆ ರಾಜೇಶ್ ನೇತೃತ್ವದಲ್ಲಿ 15 ಸಿಪಿಐ, 59 ಪಿಎಸ್‌ಐ, 500 ಪೊಲೀಸ್ ಪೇದೆಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು

ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಜಯಶ್ರೀ ಎಂಬುವರು, ಮಹಿಳೆಯೊಬ್ಬರು ತಲೆಗೆ ಪೆಟ್ಟು ಬಿದ್ದಿದ್ದ ಸಂದರ್ಭದಲ್ಲಿ ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸುವುದರ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಭರ್ಜರಿ ವ್ಯಾಪಾರ

ಆಟಿಕೆ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳು ಜಾತ್ರೆಯಲ್ಲಿ ಭರ್ಜರಿಯಾಗಿಯೇ ವ್ಯಾಪಾರ ನಡೆಯಿತು. ಸುಲ್ತಾನ್ ರಸ್ತೆಯ ಉದ್ದಕ್ಕೂ ಮತ್ತು ಮದ್ದೂರು ಮಳವಳ್ಳಿ ರಸ್ತೆಯಲ್ಲಿ ವ್ಯಾಪಾರ ಚೆನ್ನಾಗಿಯೇ ನಡೆಯಿತು.

ವಿದ್ಯುತ್ ಅಲಂಕಾರ ಚುನಾವಣೆ ವರ್ಷವಾಗಿದ್ದರಿಂದ ಪಟ್ಟಣದ ಪ್ರಮುಖ ಸ್ಥಳಗಳಾದ ಆನಂತ್‌ರಾಂ ವೃತ್ತ, ಕುಪ್ಪಸ್ವಾಮಿ ಸರ್ಕಲ್ ಸೇರಿದಂತೆ ಮಳವಳ್ಳಿ-ಮೈಸೂರು ರಸ್ತೆ ಮಳವಳ್ಳಿ-ಕೊಳ್ಳೇಗಾಲ ರಸ್ತೆಗಳ ಉದ್ದಕ್ಕೂ ವಿವಿಧ ಬಣ್ಣದ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ಮಧುವಣಗಿತ್ತಿಯಂತೆ ವಿವಿಧ ಹೂವು ಮತ್ತು ವಿವಿಧ ದೀಪಾಲಾಂಕಾರ ನೋಡುಗರನ್ನು ಆಕರ್ಷಿಸಿತು.

ಘಟ್ಟ ಮೆರವಣಿಗೆ ಹಾಗೂ ಕೊಂಡ ಹಾಯುವ ಸಂದರ್ಭದಲ್ಲಿ ಮಾಜಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ,ಶಾಸಕ ಅನ್ನದಾನಿ, ಬಿಜೆಪಿ ಮುಖಂಡ ಮುನಿರಾಜು, ಡಾ.ಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!