Saturday, May 18, 2024

ಪ್ರಾಯೋಗಿಕ ಆವೃತ್ತಿ

ದೇಶ ಕಾಯುವ ಯೋಧರ ಗೌರವಿಸಿ ಪ್ರೀತಿಸಬೇಕು: ಕೆ.ಟಿ. ಹನುಮಂತು

ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಅವಿರತವಾಗಿ ಶ್ರಮಿಸಿ, ಗಡಿಗಳಲ್ಲಿ ದೇಶವನ್ನು ಕಾಯುವ ವೀರ ಯೋಧರನ್ನು ಜನತೆ ಅಭಿಮಾನಿಸಿ ಗೌರವಿಸಬೇಕು ಎಂದು ಕೃಷಿಕ್ ಲಯನ್ಸ್ ಸಂಸ್ಥೆಯ ಆಡಳಿತಾಧಿಕಾರಿ ಕೆ.ಟಿ. ಹನುಮಂತು ತಿಳಿಸಿದರು.

ಮಂಡ್ಯ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಕೃಷಿಕ್ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವೀರಯೋಧರ ದಿನಾಚರಣೆ, ಅಭಿನಂದನೆ ಹಾಗೂ ದೇಶ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲೆಯ ಇಬ್ಬರು ವೀರ ಯೋಧರನ್ನು ಗೌರವಿಸಿ ಮಾತನಾಡಿದ ಅವರು, ತ್ಯಾಗ ಮತ್ತು ಬಲಿದಾನಗಳ ಸಂಕೇತವೇ ವೀರ ಯೋಧರಾಗಿದ್ದಾರೆ. ಇಂದು ದೇಶದ ಜನತೆ ನೆಮ್ಮದಿಯಾಗಿ ಸುಖ, ಶಾಂತಿಯಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದು ದೇಶದ ಗಡಿ ಕಾಯುವ ಯೋಧರ ತ್ಯಾಗದ ಪ್ರತಿಫಲವೇ ಆಗಿದೆ ಎಂದು ಅಭಿಮಾನದಿಂದ ನುಡಿದರು.

ಸಾವಿರಾರು ಅಡಿ ಎತ್ತರದ ಹಿಮಾಲಯದ ಗಡಿಗಳಲ್ಲಿ ದೇಶವನ್ನು ಶತ್ರುಗಳಿಂದ, ಭಯೋತ್ಪಾದಕರಿಂದ ಕಾಪಾಡುವ ಅತ್ಯಂತ ಮಹತ್ವಪೂರ್ಣ ಜವಾಬ್ದಾರಿ ದೇಶದ ಯೋಧರ ಮೇಲಿದೆ ಎಂದರು.

ಎಲ್ಲಾ ಆಸೆ,ಆಮಿಷಗಳನ್ನು ಬದಿಗೊತ್ತಿ ಆತ್ಮ ನಿಷ್ಠೆಯಿಂದ ದೇಶ ಸೇವೆ ಮಾಡುವ ನಿಜವಾದ ಸಮಾಜ ಸೇವಕರು ವೀರಯೋಧರು ಮತ್ತು ರೈತರು ಎಂದರು. ಕಾರ್ಗಿಲ್ ಯುದ್ಧ ಸೇರಿದಂತೆ ಅನೇಕ ಯುದ್ಧಗಳಲ್ಲಿ ಭಾಗವಹಿಸಿ ದೇಶ ಸೇವೆ ಮಾಡಿದ ಹೆಗ್ಗಳಿಕೆ ಇದೆ ಎಂದು ಸನ್ಮಾನಿತರಾಗಿರುವ ವೀರಯೋಧ ಕೆ.ಆರ್.ಪೇಟೆ ತಾಲೂಕಿನ ದಡದ ಹಳ್ಳಿ ವೆಂಕಟೇಶ್ ಅವರಿಗೆ ಸೇರುತ್ತದೆ.

ಅಸ್ಸಾಂ, ರಾಜಸ್ಥಾನ ಸೇರಿದಂತೆ ಅನೇಕ ಸೂಕ್ಷ್ಮ ಪ್ರದೇಶಗಳಲ್ಲಿ ಉಗ್ರಗಾಮಿಗಳನ್ನು ಸದೆಬಡಿಯುವ ಕಾಯಕದ ರೈಫಲ್ಸ್ ತಂಡದಲ್ಲಿದ್ದಾರೆ ಎಂದು, ಕೊಪ್ಪ ಸಮೀಪದ ವೀರ ಯೋಧ ಅರುಣ್ ಕುಮಾರ್ ಅವರನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಕಿರಣ ಆಶ್ರಮದ ಕಾರ್ಯದರ್ಶಿ ಜಿ.ವಿ. ನಾಗರಾಜು ವಹಿಸಿ ಯೋಧರ ಕಾರ್ಯವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಜನಪರ ಸಂಘಟನೆಯ ಮುಖ್ಯಸ್ಥೆ ವೈ. ಹೆಚ್. ರತ್ನಮ್ಮ , ಪತ್ರಕರ್ತ ಲೋಕೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!