✍🏿 ವೇಣುಗೋಪಾಲ್, ಫೋಟೋಗ್ರಾಫರ್
ಶ್ರೀ ಬಿಸಿಲು ಮಾರಮ್ಮ ಉತ್ಸವದ ವೇಳೆ ದೇವಿಗೆ ಬಲಿ ಕೊಡಲು ತಂದಿದ್ದ ಹುಂಜ ಭಕ್ತರ ಕೈಯಿಂದ ತಪ್ಪಿಸಿಕೊಂಡು ಮರ ಏರಿ ಕುಳಿತು ಒಂದಷ್ಟು ಹೊತ್ತು ಕಾಲ ಮನರಂಜನೆ ನೀಡಿತು.
ನಗರದ ನೂರಡಿ ರಸ್ತೆಯಲ್ಲಿರುವ ಶ್ರೀ ಬಿಸಿಲು ಮಾರಮ್ಮ ದೇವಾಲಯಕ್ಕೆ ಭಕ್ತರೊಬ್ಬರು ಎರಡು ಕೋಳಿ ಹುಂಜಗಳನ್ನು ದೇವಿಗೆ ಬಲಿ ನೀಡಲು ದೇವಾಲಯಕ್ಕೆ ತಂದಿದ್ದರು. ಒಂದನ್ನು ಬಲಿ ನೀಡುವಾಗ ಮತ್ತೊಂದು ತಪ್ಪಿಸಿಕೊಂಡು ಮರ ಏರಿತು, ಮೆರವಣಿಗೆಯಲ್ಲಿದ್ದ ಭಕ್ತರು ಆಶ್ಚರ್ಯಚಕಿತರಾಗಿ ಕೋಳಿ ನೋಡಲು ಆಕಾಶದತ್ತ ಮುಖ ಮಾಡಿದರು.
ರೆಂಬೆಯಿಂದ ರೆಂಬೆಗೆ ಜಾಗ ಬದಲಾಯಿಸಿ ಅಡ್ಡಾಡುತ್ತಿದ್ದ ಕೋಳಿ ಇಳಿಸಲು ಕೆಲವರು ಮರ ಏರಿ ಪ್ರಯತ್ನ ಮಾಡಿದರು.ಕೋಳಿಯ ಮಾಲೀಕರು ಕೆಳಗೆ ಇಳಿಯುವುದನ್ನು ಕಾಯುತ್ತಾ ಕುಳಿತರು.
ಸುಮಾರು ಮೂರು ತಾಸಿನ ನಂತರ ಮಳೆ ಸುರಿಯಲು ಆರಂಭಿಸಿದರೂ ಹುಂಜ ಕೆಳಗೆ ಇಳಿಯಲಿಲ್ಲ.ಕೋಳಿ ಸಿಗಲ್ಲ ಎಂದು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದ್ದು, ಹುಂಜ ಭಕ್ತನ ಕೈ ಸೇರುವುದೇ ಎಂಬ ಕುತೂಹಲವಿತ್ತು.
ಕೊನೆಗೆ ನಾಲ್ಕು ತಾಸುಗಳ ನಂತರ ಮರದಿಂದ ಕೆಳಗಿಳಿದ ಕೋಳಿಯನ್ನು ರತ್ನಮ್ಮ ಹರಸಾಹಸ ಮಾಡಿ ಹಿಡಿದರು. ಹುಂಜವನ್ನು ಹಿಡಿದು ಸಂತಸಪಟ್ಟ ಮನೆಯವರು ಕೆಲವೇ ಕ್ಷಣಗಳಲ್ಲಿ ದೇವಿಗೆ ಬಲಿ ಅರ್ಪಿಸಿದರು. ಮರದ ಮೇಲೆ ಕುಳಿತಿದ್ದ ಸಮಯದವರೆಗೆ ಹುಂಜದ ಆಯಸ್ಸು ಗಟ್ಟಿಯಾಗಿತ್ತು. ಆಯಸ್ಸು ಮುಗಿಯುವವರೆಗೂ ಸಾವು ಬಾರದು ಎಂಬಂತೆ ಹುಂಜದ ಆಟವು ಕೆಲ ತಾಸುಗಳವರೆಗೆ ನಡೆದಿತ್ತು.
ನಮ್ಮೂರಿನಲ್ಲಿ ಕೋಳಿ ಸಾಕಾಣಿಕೆ ಮಾಡಿದ್ದು, ಅಣ್ಣನ ಮನೆಯಲ್ಲಿ ಮಾರಮ್ಮನ ಹಬ್ಬ ಇದ್ದುದ್ದರಿಂದ ಎರಡು ಹುಂಜ ತಂದಿದ್ದೆ.ಒಂದು ಮರ ಏರಿ ಇಷ್ಟೊಂದು ಆಟ ಆಡಿಸಿತು. ಕೊನೆಗೂ ದೇವಿಗೆ ಅಂತ ತಂದಿದ್ದನ್ನು ದೇವಿಗೆ ಅರ್ಪಿಸಿದ್ದೇನೆ, ನನಗೆ ಸಂತೋಷ ಆಗಿದೆ ಎಂದು ರತ್ನಮ್ಮ ತಿಳಿಸಿದರು.