Sunday, May 19, 2024

ಪ್ರಾಯೋಗಿಕ ಆವೃತ್ತಿ

ಆಕ್ರೋಶದ ಮಾತುಗಳೇ ಸಾಧನೆಯಲ್ಲ ಸಂಸದರೇ?

✍️ ಕಲ್ಲಹಳ್ಳಿ ಮಂಜುನಾಥ್
ಸಂಪಾದಕರು, ‘ಮಧುರ ಮಂಡ್ಯ’ ದಿನಪತ್ರಿಕೆ

ರಾಜಕೀಯ ಪ್ರಜ್ಞಾವಂತಿಕೆಯ ನೆಲವೆಂಬ ಖ್ಯಾತಿಗೆ ಪಾತ್ರವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರ 18ನೇ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ.

2019ರಲ್ಲಿ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಪತಿ ಅಂಬರೀಷ್ ಅವರ ಮೇಲಿನ ಅಭಿಮಾನದ ಜತೆಗೆ ‘ಸ್ವಾಭಿಮಾನ’ದ ಪ್ರತೀಕವಾಗಿ ಕ್ಷೇತ್ರದ ಜನರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಅಭೂತಪೂರ್ವ ಬೆಂಬಲ ನೀಡಿದರು.

ಪ್ರಥಮ ಪ್ರಯತ್ನದಲ್ಲಿಯೇ ಸಂಸತ್ ಪ್ರವೇಶಿಸಿದ ಸುಮಲತಾ ಅವರ ಕಳೆದ 5 ವರ್ಷಗಳ ಅವಧಿಯ ರಾಜಕೀಯ ಮೆಲುಕೇ ‘ಮಧುರ ಮಂಡ್ಯ‘ ದಿನಪತ್ರಿಕೆಯ ಸಂಪಾದಕೀಯ ವರದಿಯ ಹಿನ್ನೋಟ….

ಮಂಜುನಾಥ್ ಕೆ.ಸಿ.

ಸಂಭಾವಿತ ರಾಜಕಾರಣಕ್ಕೆ ಹೆಸರಾಗಿರುವ ಎಸ್.ಎಂ.ಕೃಷ್ಣ, ರಸಋಷಿ ಕುವೆಂಪು ಅವರಿಂದ ನಿತ್ಯ ಸಚಿವರೆಂದು ಪ್ರಶಂಸೆಗೊಳಗಾದ ಕೆ.ವಿ.ಶಂಕರಗೌಡ, ಶೈಕ್ಷಣಿಕ ರೂವಾರಿ ಡಾ.ಜಿ.ಮಾದೇಗೌಡ, ಗಾಂಧಿವಾದಿ ಕೆ.ಆರ್.ಪೇಟೆ ಕೃಷ್ಣ ಹಾಗೂ ಸಿನಿಮಾ ಲೋಕದ ದೃವತಾರೆ ಅಂಬರೀಷ್ ಪ್ರತಿನಿಧಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 21ನೇ ಸಂಸದರಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಪಂಚಭಾಷಾ ನಟಿ ಸುಮಲತಾ ಅವರಿಗೆ ಸಲ್ಲುತ್ತದೆ.

ಕಳೆದ ಲೋಕಸಭಾ ಚುನಾವಣೆಯನ್ನು ಒಮ್ಮೆ ಅವಲೋಕಿಸಿದರೆ ಅದೊಂದು ರಾಜಕೀಯ ಯುದ್ದವೆನ್ನುವಂತೆ ಇಂದಿಗೂ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ದೇಶದ ಗಮನವನ್ನು ಆ ಚುನಾವಣೆಯ ವಿದ್ಯಮಾನ ಸೆಳೆದಿತ್ತು. ಕಾರಣ, ಹಾಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕಿಳಿದಿದ್ದರು. ಇಷ್ಟೇ ಅಲ್ಲದೆ ಅಂದು ಕ್ಷೇತ್ರದಲ್ಲಿ ಮೂವರು ಜೆಡಿಎಸ್ ಸಚಿವರು, ಐವರು ಶಾಸಕರು, ಮೂವರು ವಿದಾನ ಪರಿಷತ್ ಸದಸ್ಯರು ಸೇರಿದಂತೆ ರಾಜ್ಯಸರ್ಕಾರ ನಿಖಿಲ್ ಬೆನ್ನಿಗೆ ನಿಂತಿತ್ತು. ಆದರೆ ಕ್ಷೇತ್ರದ ಜನರು ಅದ್ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಕಾರಣ, ಅಂಬರೀಷ್ ಅವರ ಮೇಲಿನ ಅತೀವ ಪ್ರೀತಿ, ಜತೆಗೆ ಸ್ವಾಭಿಮಾನದ ಮೌಲ್ಯ ಎತ್ತಿ ಹಿಡಿದರು.

ಇದಲ್ಲದೆ ಆಡಳಿತರೂಢ ಜೆಡಿಎಸ್‌ ಪಕ್ಷದ ರಾಜಕೀಯ ಎದುರಾಳಿ ಗುಂಪಿನ ತಂತ್ರಗಳೆಲ್ಲ ಯಶಸ್ವಿಯಾದ ಪರಿಣಾಮ, ಸುಮಲತಾ ಬರೋಬರಿ 1,25,876 ಮತಗಳ ಅಂತರದಲ್ಲಿ ದಾಖಲೆಯ ಗೆಲುವು ಸಾಧಿಸಲು ಸಾಧ್ಯವಾಯಿತು. ನಿಖಿಲ್ 5,77,784 ಹಾಗೂ ಸುಮಲತಾ 7,03,660 ಮತ ಗಳಿಸಿದ್ದರು.

ಪ್ರಮುಖವಾಗಿ ಅಂದಿನ ಚುನಾವಣೆಯ ಘಟನೆಗಳನ್ನು ಗಮನಿಸುವುದಾದರೆ ತಮ್ಮ ಪ್ರಥಮ ಚುನಾವಣೆಯಲ್ಲೇ ಸಂಸತ್ ಪ್ರವೇಶಿಸಿದ್ದ ಸುಮಲತಾ ಅವರ ಮೇಲೆ ಕ್ಷೇತ್ರದ ಮತದಾರರ ನಿರೀಕ್ಷೆ ಬೆಟ್ಟದಷ್ಟಿತ್ತು. ಎರಡು ರಾಷ್ಟ್ರೀಯ ಪಕ್ಷ ಹಾಗೂ ಸಾಮಾಜಿಕ ಬದ್ದತೆಯ ಹೋರಾಟಕ್ಕೆ ಸಾಕ್ಷಿಯಾಗಿರುವ ರೈತ ಸಂಘಟನೆಯ ಬೆಂಬಲದಿಂದ ಚುನಾವಣಾ ಅಖಾಡಕ್ಕಿಳಿದು ’ಕಹಳೆ’ ಗುರುತಿನಲ್ಲಿ ’ರಣಕಹಳೆ’ ಮೊಳಗಿಸಿದ ಸುಮಲತಾ ಅವರ ಸಾಧನೆ ಕಳೆದ ಐದು ವರ್ಷದಲ್ಲಿ ತೃಪ್ತಿಕರ ಎನ್ನಿಸಿದೆಯೇ?. ಈ ಪ್ರಶ್ನೆಗೆ ಸಿಗುವ ಉತ್ತರ ಬೇಸರ ತರಿಸುತ್ತದೆ.

ಕ್ಷೇತ್ರದ ಜನರ ಈ ಅತೃಪ್ತಿಗೆ ಕಾರಣವೂ ಇದೆ. 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ಚಿತ್ರನಟಿ ರಮ್ಯಾ ತನ್ನ ಅಲ್ಪ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ ಪ್ರಗತಿ ಇಂದಿಗೂ ಸಾಕ್ಷಿ ಗುಡ್ಡೆಯಾಗಿದೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿರುವ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಮೇಲ್ದರ್ಜೆಗರಿಸಲು ಅಂದು ಕೇಂದ್ರ ಸರ್ಕಾರದಿಂದ ಬರೋಬರಿ 45 ಕೋಟಿ ರೂ ವಿಶೇಷ ಅನುದಾನ ತಂದ ಹೆಗ್ಗಳಿಕೆ ರಮ್ಯಾ ಅವರದು. ಮಾತ್ರವಲ್ಲದೆ ಕೇಂದ್ರೀಯ ವಿದ್ಯಾಲಯ ಮಂಜೂರಾತಿ ಮಾಡಿಸುವ ಮೂಲಕ ಕಡಿಮೆ ಅಧಿಕಾರಾವಧಿಯಲ್ಲಿ ಗಮನಸೆಳೆಯುವಂತೆ ಜಿಲ್ಲಾದ್ಯಂತ ಸಂಚರಿಸಿ ಕಾರ್ಯ ನಿರ್ವಹಿಸಿದ್ದರು.

2009ರಲ್ಲಿ ಸಂಸದರಾಗಿ ಆಯ್ಕೆಯಾದ ಎನ್.ಚಲುವರಾಯಸ್ವಾಮಿ ಅವರ ಪ್ರಯತ್ನದಿಂದ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಆಯುರ್ವೇದಿಕ್ ಆಸ್ಪತ್ರೆಯಂತಹ ಯೋಜನೆಗಳು ಜಾರಿಗೊಂಡು ಜಿಲ್ಲೆಯ ಪ್ರಗತಿಗೆ ನಾಂದಿಯಾಡಿವೆ. ಹೀಗಿರುವಾಗ ಸುಮಲತಾ ಅವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಗಮನಾರ್ಹ ಸಾಧನೆ ಯಾವುದು ಎಂದು ಹುಡುಕಿದರೆ ಸಿಗುವ ಉತ್ತರ ಮತದಾರರನ್ನು ನಿರಾಸೆಗೊಳಿಸುತ್ತದೆ.

2019ರ ಸ್ಪರ್ಧಾಕಣದಲ್ಲಿ ಸುಮಲತಾ ಅವರನ್ನು ಕ್ಷೇತ್ರದ ಜನರು ಏಕೆ ಬೆಂಬಲಿಸಿದ್ದರು ಎನ್ನುವುದು ಅವಲೋಕಿಸಿದರೆ ಒಂದಷ್ಟು ಆಸಕ್ತಿದಾಯಕ ಅಂಶಗಳು ಕಣ್ಣು ಮುಂದೆ ಗೋಚರಿಸುತ್ತವೆ. ಅಂಬರೀಷ್ ಅವರ ಸಾವಿನ ನೋವಿನಲ್ಲಿದ್ದ ಕ್ಷೇತ್ರದ ಜನರಿಗೆ ಸುಮಲತಾ ಕುರಿತು ಜೆಡಿಎಸ್ ನಾಯಕರು ಆಡಿದ ಮಾತುಗಳು ಕೆರಳುವಂತೆ ಮಾಡಿತು. ಘಟಾನುಘಟಿ ನಾಯಕರು ಮಹಿಳೆಯನ್ನು ಟೀಕಿಸಿದ ಪರಿ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದು ಚುನಾವಣೆಗೆ ಭದ್ರಬುನಾದಿಯಾಯಿತು.

ಬಳಿಕ ಸುಮಲತಾ ಅವರಿಗೆ ಚಿತ್ರರಂಗದ ನಾಯಕನಟರು, ಕಾಂಗ್ರೆಸ್‌ನ ಪರೋಕ್ಷ ಹಾಗೂ ಬಿಜೆಪಿ ನೇರ ಬೆಂಬಲ ಬಲ ನೀಡಿತು. ಇದಲ್ಲದೆ ಕ್ಷೇತ್ರದ ಜನರು ಸ್ವಯಂ ಪ್ರೇರಿತರಾಗಿ ಚುನಾವಣೆ ಕೈಗೆತ್ತಿಕೊಂಡರು. ಬಹುಶಃ ಜಿಲ್ಲೆಯ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದರೆ ಇಂತಹ ಅಭೂತಪೂರ್ವ ಬೆಂಬಲದ ಚುನಾವಣೆ ನಡೆದಿರುವುದು ಕಷ್ಟಸಾಧ್ಯ. ಇಷ್ಟೆಲ್ಲದರ ನಡುವೆ ಚುನಾಯಿಸಿದ ಮತದಾರರಿಗೆ ಹಾಗೂ ಜಿಲ್ಲೆಗೆ ಸುಮಲತಾ ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎನ್ನುವ ವಿಷಯ ಇಂದು ಚರ್ಚೆಯ ಮುನ್ನೆಲೆಗೆ ಬಂದಿದೆ.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ

ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ‘ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ’, ಈ ಮಾತನ್ನು ಐದು ವರ್ಷದ ಹಿಂದೆಯೇ ಸಂಸದೆ ಅರ್ಥೈಸಿಕೊಳ್ಳಬೇಕಿತ್ತು. ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮಂತ್ರಿ ಮಹೋದಯರುಗಳಿಗೆ ಸಾಕಷ್ಟು ಮನವಿಗಳನ್ನು ಕೊಡುವುದೇ ಕಾಯಕವೆಂದುಕೊಂಡಿದ್ದ. ಸಂಸದೆ ಅವರು ಕ್ಷೇತ್ರಕ್ಕೆ ತಂದ ವಿಶೇಷ ಯೋಜನೆ ಯಾವುದೆಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.

ಕೇಂದ್ರೀಯ ವಿದ್ಯಾಲಯಕ್ಕೆ 28 ಕೋಟಿ ರೂ, ಬಿ.ಹೊಸೂರು ಕಾಲನಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ 23 ಕೋಟಿ ರೂ, ಮೈಷುಗರ್ ಕಾರ್ಖಾನೆ ಪುನರ್ ಆರಂಭಕ್ಕೆ ತನ್ನ ನಿರಂತರ ಒತ್ತಡವೇ ಕಾರಣ ಎಂದು ಬೆನ್ನು ತಟ್ಟಿಕೊಳ್ಳುವ ಸಂಸದೆ, ತಮ್ಮ ಅಧಿಕಾರಾವಧಿಯ ಆದರ್ಶ ಗ್ರಾಮದ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಜನರ ಮುಂದೆ ಹೇಳಬೇಕಿದೆ. ಚುನಾವಣೆ ಸಮಯದಲ್ಲಿ ತಾನು ಜಯಶಾಲಿಯಾದರೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ಕೊಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಜಿಲ್ಲೆಯಲ್ಲಿ ಎಷ್ಟು ದಿನ ವಾಸ್ತವ್ಯವಿದ್ದರು ? ಎಷ್ಟು ಕುಗ್ರಾಮಗಳಿಗೆ ಭೇಟಿ ನೀಡಿದ್ದರು ? ಎಷ್ಟು ಬಡಜನರ ಅಳಲು ಆಲಿಸಿದರು ಎನ್ನುವುದು ಮುಖ್ಯವಲ್ಲವೇ?. ಜಿಲ್ಲೆಯಲ್ಲಿಯೇ ಮನೆ ನಿರ್ಮಿಸುವುದಾಗಿ ಹೇಳಿ ಹಾಕಿದ ಅಡಿಗಲ್ಲು ಏನಾಯಿತು?

ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಥವಾ ಎಲ್ಲಿಯೇ ಮಾಧ್ಯಮದವರು ಎದುರಾದರೂ ತಮ್ಮ ರಾಜಕೀಯ ಎದುರಾಳಿ  ಜೆಡಿಎಸ್ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದೇ ದೊಡ್ಡ ಸಾಧನೆ ಎಂಬಂತಾಗಿದೆ.

ದಳಪತಿಗಳ ವಿರುದ್ದ ಗಂಭೀರ ಆರೋಪ ಮಾಡುತ್ತಿದ್ದ ಸಂಸದೆ, ಆರೋಪಗಳ ಪೈಕಿ ಎಷ್ಟನ್ನು ಸಾಬೀತುಪಡಿಸಿದ್ದಾರೆಂದರೆ ಅದು ಶೂನ್ಯವೇ ಸರಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಠಿ, ಮಹಾರಾಣಿ ಕೆಂಪನಂಜಮ್ಮಣಿ ಅವರ ಔದಾರ್ಯತೆಯಿಂದ ಬೊಕ್ಕಸದಲ್ಲಿದ್ದ ವಜ್ರಾಭರಣ ಮಾರಿ ಸರ್‌ಎಂ ವಿಶ್ವೇಶ್ವರಯ್ಯ ಅವರ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣಗೊಂಡು ಕೋಟ್ಯಂತರ ಜನರ ದಾಹ ತಣಿಸುತ್ತಿರುವ ಕನ್ನಂಬಾಡಿ ಅಣೆಕಟ್ಟೆಯನ್ನು ತಮ್ಮ ರಾಜಕೀಯ ದಾಳಕ್ಕೆ ಬಳಸಿಕೊಂಡಿದ್ದು ವಿಪರ್ಯಾಸವಲ್ಲವೇ?

ಅತ್ಯುತ್ತಮ ಗುಣಮಟ್ಟದಿಂದ ನಿರ್ಮಾಣಗೊಂಡು ಇಂದಿಗೂ ಸುಭದ್ರವಾಗಿರುವ ಕನ್ನಂಬಾಡಿ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಆತಂಕ ಸೃಷ್ಠಿಸಿ, ಜಿಲ್ಲೆಯ ಜನರ ಅಸಹನೆಗೆ ಗುರಿಯಾದ ನಿಮಗೆ ನೀರಾವರಿ ಇಲಾಖೆಯ ಅಧಿಕಾರಿಗಳು ನೀಡಿದ ಸಮಜಾಯಿಷಿ ಉತ್ತರವಲ್ಲವೇ?

ಇಂದಿಗೂ ಜಿಲ್ಲಾದ್ಯಂತ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಹಾಕುವ ಆವೇಶದಲ್ಲಿ ತಲೆ ಮೇಲೊಂದು ಸೂರು ಕಟ್ಟಿಕೊಳ್ಳುವ ಸಾಮಾನ್ಯ ಜನರ ಕನವರಿಕೆಗೆ ಪೆಟ್ಟುಕೊಟ್ಟು ಗಣಿ ಉತ್ಪನ್ನಗಳ ಬೆಲೆ ಹೆಚ್ಚಳಕ್ಕೆ ಕಾರಣರಾಗಲಿಲ್ಲವೇ?

ಗಣಿ ನಿಯಂತ್ರಣಕ್ಕೆ ಮುಂದಾದ ನನ್ನ ಮೇಲೆ ನಿರಂತರ ಜೀವ ಬೆದರಿಕೆ ಇತ್ತೆಂದು ಅನುಕಂಪ ಗಿಟ್ಟಿಸಿಕೊಳ್ಳುವ  ಸಂಸದರು, ಬೆದರಿಕೆ ಸಂಬಂಧ ಯಾವ ಪೊಲೀಸ್ ಠಾಣೆಯಲ್ಲಿ ಹಾಗೂ ಯಾರ ಮೇಲೆ ದೂರು ದಾಖಲಿಸಿದ್ದಾರೆ ?

ರಾಜ್ಯದ ಪ್ರಥಮ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಧಿಕಾರಸ್ಥರ ವಂಚನೆಯಿಂದ ಸೊರಗಿ ಹೋಗಿದ್ದ ಪಿಎಸ್‌ಎಸ್‌ಕೆ ಗೆ ಮರುಜೀವ ನೀಡಿದ್ದೇನೆಂಬ ನಿಮ್ಮ ಸಾಧನೆ ನಿಜವೇ?. ಆ ಸಾಧನೆಯ ಪರ್ವ ನಿಮ್ಮದಾಗುವುದಾದರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಬಲಿಷ್ಠ ಉದ್ಯಮಿ ಹಾಗೂ ಪ್ರಮುಖ ರಾಜಕಾರಣಿ ಕಾರ್ಖಾನೆಗೆ 6 ತಿಂಗಳಲ್ಲಿ ಪಾವತಿಸಬೇಕಾದ 20 ಕೋಟಿ ರೂ ಠೇವಣಿ ಹಣ ಇಂದಿಗೂ ಪಾವತಿಯಾಗದೇ ಕಾರ್ಖಾನೆಯ ಮೇಲಿನ ಸಾಲ ತೀರುವಳಿ, ನಿವೃತ್ತ ನೌಕರರ ಪಿಂಚಣಿ ಪಾವತಿಯಾಗದಿರುವುದಕ್ಕೆ ಯಾರು ಹೊಣೆ, ಉತ್ತರಿಸುವಿರಾ ಸಂಸದರೇ?

ಜಿಲ್ಲೆಯ ಅಸ್ಮಿತೆಯಾಗಿರುವ ಮೈಷುಗರ್ ಕಾರ್ಖಾನೆ ನಷ್ಟದಿಂದ ನಲುಗಿ ಹೋಗಿದ್ದು, ಖಾಸಗಿ ಹಸ್ತಾಂತರವೇ ಮೈಷುಗರ್ ಉಳಿವಿಗೆ ಅನಿವಾರ್ಯ ಎಂಬ ತಮ್ಮ ಪ್ರತಿಪಾದನೆಯನ್ನು ಮೆಟ್ಟಿ ಚಳವಳಿಯ ಸಾರಥ್ಯ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾಂ ಹಾಗೂ ಅಂದಿನ ಚಳವಳಿಯಲ್ಲಿ ಭಾಗಿಯಾದ ಸರ್ವರಿಗೂ ಸರ್ಕಾರಿ ಸ್ವಾಮ್ಯದ ಮೈಷುಗರ್ ಆರಂಭದ ಕೀರ್ತಿ ಸಲ್ಲಬೇಕಲ್ಲವೇ?

ಕಳೆದ ಚುನಾವಣೆಯಲ್ಲಿ ತಮ್ಮನ್ನು ಪ್ರತ್ಯಕ್ಷವಾಗಿ ಬೆಂಬಲಿಸಿದ ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ತಮ್ಮ ಗೆಲುವಿಗೆ ತಮ್ಮ ರಾಜಕೀಯ ಭವಿಷ್ಯವನ್ನು ಪಣವಿಟ್ಟು ಪರೋಕ್ಷವಾಗಿ ಬೆಂಬಲಿಸಿದ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಡಸಾಲೆಯಲ್ಲಿ ನಿಮಗೇಕೆ ಅವಕಾಶ ದೊರೆಯುತ್ತಿಲ್ಲ, ಇದಕ್ಕೆ ಕಾರಣವೇನೆಂದು ಬಹಿರಂಗ ಪಡಿಸುವಿರಾ ?

ಜಾತಿ, ಪಕ್ಷವೆನ್ನದೇ ತಮ್ಮನ್ನು ಬೆಂಬಲಿಸಿದ ಮತದಾರರಾದ ಮಹಿಳೆಯರು, ಯುವಜನರು ಹಾಗೂ ಕೃಷಿಕರು ತಮ್ಮ ದುಃಖ ದುಮ್ಮಾನಗಳನ್ನು ಹಂಚಿಕೊಳ್ಳಲು, ತಮ್ಮ ರಕ್ಷಣಾ ಕೋಟೆ ಹಾಗೂ ಬೆರಳೆಣಿಕೆಯ ಬೆಂಬಲಿಗರ  ಗುಂಪು ಹೊರತುಪಡಿಸಿ ತಮ್ಮ ಭೇಟಿ ಎಲ್ಲಿ, ಹೇಗೆ ಸಾಧ್ಯವಾಗುತ್ತಿತ್ತು, ಎಂಬುವುದನ್ನು ಅರ್ಥೈಸಿಕೊಂಡಿದ್ದೀರಾ?

ಇವು ಮೇಲ್ನೊಟಕ್ಕೆ ಕಾಣಸಿಗುವ ಪ್ರಶ್ನೆಗಳಷ್ಟೇ. ಸಂಸದೆ ಸುಮಲತಾ ಅವರು ತಮ್ಮ ಅಧಿಕಾರಾವಧಿಯ ಬಹು ಸಮಯದ ವಾಸ್ತವ್ಯವನ್ನು ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದರೇ ಹೊರತು ಚುನಾಯಿಸಿದ ಲೋಕಸಭಾ ಕ್ಷೇತ್ರದ್ದಲಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕಿದೆ.

ಮಂಡ್ಯ ಜಿಲ್ಲೆಯ ಜನರು ಮುಗ್ಧರು, ಭಾವಜೀವಿಗಳು, ಕ್ಷೇತ್ರದ ಅಭಿವೃದ್ದಿ ಒತ್ತಟ್ಟಿಗಿರಲಿ, ಮಾಜಿ ಸಂಸದ ಪುಟ್ಟರಾಜು ಅವರಂತೆ ಜನಸಾಮಾನ್ಯರ ಒಡನಾಡಿಯಾಗಿ ಅಗತ್ಯ ಬಿದ್ದಾಗ ಕ್ಷೇತ್ರ ವ್ಯಾಪ್ತಿಯಲ್ಲಿ ಹಗಲಿರುಳು ಸಂಚರಿಸಿ ಜನಸಾಮಾನ್ಯರ ಬಳಿಗೆ ಧಾವಿಸದ ನಿಮ್ಮನ್ನು ಏಕೆ ಬೆಂಬಲಿಸಬೇಕು ಎಂಬುದನ್ನು ವಿವರಿಸಬೇಕಿದೆ.

ಇಂತಹ ಹತ್ತು ಹಲವು ಪ್ರಶ್ನೆಗಳು ಕ್ಷೇತ್ರದ ಮತದಾರ ಪ್ರಭುಗಳನ್ನು ಕಾಡುತ್ತಿದ್ದು, ತಮ್ಮ ಅಧಿಕಾರಾವಧಿಯಲ್ಲಿ ಆರ್ಭಟಿಸಿದ ಆಕ್ರೋಶದ ಮಾತುಗಳ ಬದಲು ಒಂದಷ್ಟು ಸಾಧನೆ ಪರ್ವ ಕಣ್ಣಿಗೆ ರಾಚುವಂತೆ ಮಾಡಿದ್ದರೆ, ನಿಮ್ಮನ್ನು ಚುನಾಯಿಸಿದ ಮತದಾರನಿಗೆ ಹಾಗೂ ಬೆಂಬಲಿಸಿದ ರಾಷ್ಟ್ರೀಯ ಪಕ್ಷಗಳಿಗೆ ತುಸು ನೆಮ್ಮದಿ ವ್ಯಕ್ತವಾಗುತ್ತಿತ್ತೇನೋ

ಇಂದು ನಿಮಗೆ ನಿಂತ ನೆಲವೇ ಕುಸಿಯುತ್ತಿದೆ ಏನೋ ಎಂಬ ಆತಂಕ ಕಾಡತೊಡಗಿದೆ, ಇದೇ ನೈಜ್ಯ ರಾಜಕಾರಣ, 2019ರಲ್ಲಿ ಇದೇ ಪರಿಸ್ಥಿತಿ ಅಂದು ಅಧಿಕಾರದಲ್ಲಿದ್ದ ದಳಪತಿಗಳಿಗಾಗಿತ್ತು. ಇದನ್ನೇ ವ್ಯಾಖ್ಯಾನಿಸಿ ಹಿರಿಯರು ಹೇಳುವುದು ಕಾಲಾಯಃ ತಸ್ಮಯೇ ನಮಃ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!