Monday, May 20, 2024

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ‘ಕೈ’ ಕಾರ್ಯಕರ್ತರ ಸಾಥ್ : ಎನ್.ಚಲುವರಾಯಸ್ವಾಮಿ

ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲಾ ಮುಖಂಡರು, ಕಾರ‍್ಯಕರ್ತರು ಒಗ್ಗೂಡಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವಿಗಾಗಿ ಸಾಥ್ ನೀಡಲಿದ್ದಾರೆಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.

ಪಾಂಡವಪುರ ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ರೈತಸಂಘದ ಮುಖಂಡರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡಾ.ರವೀಂದ್ರ ಅವರನ್ನು ದರ್ಶನ್‌ ಪುಟ್ಟಣ್ಣಯ್ಯ ಭೇಟಿ ಮಾಡಿದ್ದು ಅವರು ಸಹ ದರ್ಶನ್‌ ಪರವಾಗಿ ಕೆಲಸ ಮಾಡಲಿದ್ದಾರೆ. ಎಐಸಿಸಿ, ಕೆಪಿಸಿಸಿ ನಾಯಕರ ನಿರ್ಧಾರದಂತೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಲಿದೆ ಎಂದರು.

ಕೆ.ಎಸ್.ಪುಟ್ಟಣ್ಣಯ್ಯ ಕಾಂಗ್ರೆಸ್ ಪಕ್ಷದ ಜತೆಗಿದ್ದರು
ಕೆ.ಎಸ್.ಪುಟ್ಟಣ್ಣಯ್ಯ ಅವರ ಎರಡು ಭಾರಿ ಶಾಸಕರಾಗಿ ಆಯ್ಕೆಯಾದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಜತೆಗೆ ಇದ್ದರು. ಆ ಹಿನ್ನೆಲೆಯಲ್ಲಿ ಕಳೆದ 2018ರ ಚುನಾವಣೆಯಲ್ಲಿ ವೇಳೆ ಪುಟ್ಟಣ್ಣಯ್ಯನವರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿದ್ದ ಅವರ ಪುತ್ರ ದರ್ಶನ್‌ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿದ್ದೇವು. ಕಳೆದ ಚುನಾವಣೆಯಲ್ಲಿ ದರ್ಶನ್‌ಪುಟ್ಟಣ್ಣಯ್ಯ ಗೆದಿದ್ದರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುತ್ತಿರಲಿಲ್ಲ. ಕಳೆದ ಚುನಾವಣೆಯಲ್ಲಿ ದರ್ಶನ್‌ಗೆ ಸೋಲುಂಟಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಈ ಭಾರಿಯೂ ಸಹ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿದೆ. ಕ್ಷೇತ್ರದ ಕಾಂಗ್ರೆಸ್ ಕಾರ‍್ಯಕರ್ತರು ಬೆಂಬಲವನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಿ ನಮ್ಮ ಬೆಂಬಲಿತ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಕಳೆದ ಐದು ವರ್ಷದ ಅಧಿಕಾರ ನಡೆಸಿದ ಬಿಜೆಪಿ-ಜೆಡಿಎಸ್ ಪಕ್ಷದ ದುರಾಡಳಿತವನ್ನು ನೋಡಿ ರಾಜ್ಯದ ಜತೆಗೆ ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರು ಗೆಲುವು ಸಾಧಿಸಿದರೆ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಲಿದ್ದಾರೆ ಎಂದು ತಿಳಿಸಿದರು.

ಬಿಎಸ್ಪಿ ಜತೆ ಹೊಂದಾಣಿಕೆನಾ ಏನಂತ ಕರಿಬೇಕು
ಚುನಾವಣೆಯ ಸಂದರ್ಭದಲ್ಲಿ ತಂತ್ರಗಾರಿಕೆ, ಚಾಣಾಕ್ಷತನವನ್ನು ಎಲ್ಲಾ ಪಕ್ಷದವರು ಮಾಡುತ್ತಾರೆ. ಆದರೆ, ನಾವು ಯಾವುದೇ ಕುತಂತ್ರ ನಡೆಸುತ್ತಿಲ್ಲ. ಹೆಚ್.ಡಿ.ಕುಮಾರಸ್ವಾಮಿ ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಜಿಲ್ಲೆಗೆ ಬಂದಾಗ ಚಲುವರಾಯಸ್ವಾಮಿ ನನಗೆ ಆ ಜನ್ಮ ಶತ್ರು ಎಂದು ಉಲ್ಲೇಖ ಮಾಡಿದ್ದಾರೆ, ಹಾಗಾಗಿ ನಾವು ಅವರನ್ನು ಹಳೇ ಸ್ನೇಹಿತರು ಎಂದು ಕರೆಯುತ್ತೇನೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಎಸ್ಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ರಲ್ಲ ಹಾಗಾದ್ರೆ ಅದೇನು ಅಂತ ಕರಿಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರೈತಸಂಘ-ಕಾಂಗ್ರೆಸ್ ಕಾರ‍್ಯಕರ್ತರ ಜಂಟಿ ಸಭೆ : ದರ್ಶನ್ ಪುಟ್ಟಣ್ಣಯ್ಯ
ಕಾಂಗ್ರೆಸ್ ಪಕ್ಷವು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ನನಗೆ ಬೆಂಬಲ ನೀಡಿದ್ದಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಜಿಲ್ಲೆ, ತಾಲೂಕಿನ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರು, ರೈತಸಂಘದ ಮುಖಂಡರು ಜತೆಗೂಡಿ ಕುಳಿತು ಚರ್ಚಿಸಿ ಚುನಾವಣೆಯನ್ನು ಗೆಲ್ಲಲು ಯಾವರೀತಿ ಕೆಲಸ ಮಾಡಬೇಕು ಎನ್ನುವುದನ್ನು ಕುಳಿತು ಚರ್ಚಿಸುತ್ತೇವೆ. ಜತೆಗೆ ಶೀಘ್ರವೇ ರೈತಸಂಘ-ಕಾಂಗ್ರೆಸ್ ಕಾರ‍್ಯಕರ್ತರ ಜಂಟಿ ಸಭೆಯನ್ನು ಸಹ ನಡೆಸಲಾಗುವುದು  ಎಂದು ಮೇಲುಕೋಟೆ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್‌ಪುಟ್ಟಣ್ಣಯ್ಯ ತಿಳಿಸಿದರು.

ಹುಚ್ಚೇಗೌಡ ಅಸಮಾಧಾನ
ಕಾಂಗ್ರೆಸ್ ಹೈಕಮಾಂಡ್ ಬೆಂಬಲ ನೀಡಿದ ಬಳಿಕವೂ ಸಹ ಪಕ್ಷದ ನಾಯಕರು ಯಾವುದೇ ಮುಖಂಡರನ್ನು ಆಹ್ವಾನಿಸದೆ, ಸಭೆ ನಡೆಸಿ ಚರ್ಚೆ ನಡೆಸದೆ ಸುದ್ದಿಗೋಷ್ಠಿ ನಡೆಸುತ್ತಿರುವುದಕ್ಕೆ ಕುರುಬರ ಸಂಘದ ಅಧ್ಯಕ್ಷ ಡಿ.ಹುಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಮೊದಲು ಕಾರ‍್ಯಕರ್ತರ ಮುಖಂಡರ ಸಭೆ ನಡೆಸಿ ಬಳಿಕ ತೀರ್ಮಾನ ಮಾಡಿ ಎಂದು ಬೇಸರ ಹೊರಹಾಕಿದರು. ಬಳಿಕ ಎನ್.ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಅವರನ್ನು ಸಮಾಧಾನಪಡಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕರಾದ ರಮೇಶ್‌ಬಂಡಿಸಿದ್ದೇಗೌಡ, ಎಚ್.ಬಿ.ರಾಮು, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಕೆಪಿಸಿಸಿ ಸದಸ್ಯರಾದ ಎಚ್.ತ್ಯಾಗರಾಜು, ನಾಗರಾಜು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಜನಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣೇಗೌಡ, ಸರ್ವೋದಯ ಕರ್ನಾಟಕ ಪಕ್ಷದ ಕೆ.ಎಸ್.ದಯಾನಂದ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ, ಕೆ.ಕುಬೇರ, ಬಿ.ಜೆ.ಸ್ವಾಮಿ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಡಿ.ಹುಚ್ಚೇಗೌಡ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರೇವಣ್ಣ, ಬನ್ನಂಗಾಡಿ ಗ್ರಾಪಂ ಉಪಾಧ್ಯಕ್ಷ ತಮ್ಮೇಗೌಡ ಸೇರಿದಂತೆ ಹಲವರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!