Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲಕ್ಕೆ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಏನು ? : ಎಲ್ಆರ್‌‌ಎಸ್

ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ನಾಗಮಂಗಲಕ್ಕೆ ಕೊಟ್ಟ ಕೊಡುಗೆ ಏನೆಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪ್ರಶ್ನಿಸಿದರು.

ನಾಗಮಂಗಲ ತಾಲ್ಲೂಕಿನ ಕದಬಳ್ಳಿಯ ಕಾವೇಟಿ ರಂಗನಾಥ ದೇವಾಲಯದ ಆವರಣದಲ್ಲಿ ನಡೆದ ಎಲ್ಆರ್‌‌ಎಸ್ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ಪಂಚರತ್ನ ಯೋಜನೆಗಳ ಮೂಲಕ ಜನರ ಅಭಿವೃದ್ಧಿ ಮಾಡುತ್ತೇನೆ ಎಂದು  ರಥ ಯಾತ್ರೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ದೇಶದ ಜನರನ್ನು ಬಕ್ರಾ ಮಾಡಿ ಅಧಿಕಾರ ಹಿಡಿದಿದ್ದಾರೆ. ಅದರಂತೆ ರಾಜ್ಯದಲ್ಲೂ ಕುಮಾರಸ್ವಾಮಿ ಅವರು ಒಕ್ಕಲಿಗರನ್ನು ಕುರಿಗಳನ್ನಾಗಿ ಮಾಡಿಕೊಂಡು ಪಂಚರತ್ನ ಯಾತ್ರೆ ಎಂದು ಬರುತ್ತಿದ್ದಾರೆ. ನನಗೆ ಈ ಪಂಚರತ್ನ ಎಂದರೆ ಏನೆಂದು ಅರ್ಥವಾಗುತ್ತಿಲ್ಲ. ನಾಗ ಮಂಗಲ ತಾಲ್ಲೂಕಿನ 15-20 ಸಾವಿರ ಜನರು ಬೆಂಗಳೂರಿನಲ್ಲಿ ಆಟೋ, ಕ್ಯಾಬ್ ಓಡಿಸುತ್ತಾ, ಹೋಟೆಲ್ ಗಳಲ್ಲಿ ಲೋಟ ತೊಳೆಯುತ್ತಿದ್ದಾರೆ. ಇವರಿಗೆಲ್ಲ ನೀವು ಮುಖ್ಯಮಂತ್ರಿ ಆಗಿದ್ದಾಗ ಏನಾದರೂ ಮಾಡಬಹುದಿತ್ತಲ್ವಾ ಎಂದು ಪ್ರಶ್ನಿಸಿದರು.

ಸಾಲಗಾರನಾಗಿ ಮಾಡಿದ್ರಿ

ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಅಧಿಕಾರದಿಂದ ವಂಚಿತನಾಗಿದ್ದೇನೆ. ಎಂಪಿ ಚುನಾವಣೆಗೆ ಸ್ಪರ್ಧಿಸಿ ಐದು ತಿಂಗಳ ಅಧಿಕಾರಕ್ಕೆ 39 ಕೋಟಿ ದುಡ್ಡು ವ್ಯಯ ಮಾಡಿಸಿ, ನಮ್ಮನ್ನು ಸಾಲಗಾರರನ್ನಾಗಿ ಮಾಡಿಸಿದ್ರಿ. ಮಗನಿಗೆ ಟಿಕೆಟ್ ಕೊಟ್ಟ ಕುಮಾರಸ್ವಾಮಿ ಅವರಿಂದ ನಾಗಮಂಗಲಕ್ಕೆ ಏನು ಪ್ರಯೋಜನವಾಗಿಲ್ಲ‌. ನಾನು ಪಕ್ಷದಲ್ಲಿ ಇದ್ದಾಗ ನಿಮಗಾಗಿ ದುಡಿದಿದ್ದೇನೆ, ಅದನ್ನ ನೀವು ಮರೆತು ಆಡೋ ಹುಡುಗರನ್ನ ಕಟ್ಟಿಕೊಂಡು ಆಡಳಿತ ಮಾಡುತ್ತಿದ್ದೀರಾ, ತಾಲೂಕು ಭ್ರಷ್ಟಾಚಾರದ ತಾಣವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದರು.

ಸ್ಪರ್ಧೆ ಖಚಿತ

ಮುಂಬರುವ ಚುನಾವಣೆಯಲ್ಲಿ ನಾನು ನೂರಕ್ಕೆ ನೂರು ನಾಗಮಂಗಲ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುವುದು ಖಚಿತ. ಚುನಾವಣೆಯಿಂದ ಹಿಂದೇ ಸರಿಯುವ ಮಾತೇ ಇಲ್ಲ. ನನ್ನ ಕ್ಷೇತ್ರದ ಜನ ಯಾರೂ ದಡ್ಡರಲ್ಲ. ನೀವು ಯಾವುದೇ ಪಂಚರತ್ನ ಯಾತ್ರೆ ಮಾಡಿದರೂ ಸುರೇಶ್ ಗೌಡ ಸೋಲು ಖಚಿತ. ನನ್ನ ಗೆಲುವು ನಿಶ್ಚಿತ ಎಂದು ಸವಾಲು ಹಾಕಿದರು.

ಮತ ಭಿಕ್ಷೆ ನೀಡಿ

ನಾನು ರಾಜಕೀಯಕ್ಕೆ ಬಂದು 40 ವರ್ಷ ಆಯ್ತು, ನಾನೆಂದೂ ಕುತಂತ್ರ ಮಾಡಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂಬರೀಶಣ್ಣ ಪತ್ನಿ ಸುಮಲತಾ ಅವರು, ನಾನು ಸ್ವಾಭಿಮಾನದ ಚುನಾವಣೆಯಲ್ಲಿ ನಿಂತಿದ್ದೇನೆ, ನನಗೆ ಆಶೀರ್ವಾದ ಮಾಡಿ ಎಂದಾಗ ಜಿಲ್ಲೆಯ ಜನರು ಯಾವ ಕುಮಾರಸ್ವಾಮಿಯನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ‌. ಅದೇ ರೀತಿ ನಾನು ಕೂಡ ಸ್ವಾಭಿಮಾನದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ನನಗೂ ಮತ ಭಿಕ್ಷೆ ನೀಡಿ ಎಂದು ಟವೆಲ್ ಒಡ್ಡಿ ಕಣ್ಣೀರು ಹಾಕಿದರು. ನನ್ನ ರಾಜಕೀಯ ಜೀವನದಲ್ಲಿ ನಾನು ಒಂದು ರೂಪಾಯಿ ಲಂಚ ಈಸ್ಕೊಂಡಿದ್ರೆ ನನಗೆ ಮತ ಹಾಕಬೇಡಿ ಹೇಳಿದರು.

ವೇದಿಕೆಯಲ್ಲಿ ಮುಖಂಡರಾದ ಮಂಜೇಗೌಡ್ರು, ಟಿ.ಕೆ.ರಾಮೇಗೌಡ, ಪಾಳ್ಯ ರಘು, ಚೇತನ್ ತುರುಬನಹಳ್ಳಿ, ಪ್ರಕಾಶ್, ಕೃಷ್ಣಮೂರ್ತಿ, ಪ್ರದೀಪ್ ಸೇರಿದಂತೆ ಕದಬಳ್ಳಿ ಭಾಗದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!